ADVERTISEMENT

ಗುರುಮಠಕಲ್: ಬಾವಿಯೊಳಗೆ ಬೆಳಕು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 8:10 IST
Last Updated 16 ಏಪ್ರಿಲ್ 2012, 8:10 IST

ಗುರುಮಠಕಲ್: ಜಗತ್ತಿನ ವಿವಿಧೆಡೆ ನಡೆಯುತ್ತಿರುವ ಭೂಕಂಪ, ಸುನಾಮಿಯಂತಹ ಘಟನೆಗಳು 2012 ಪ್ರಳಯವಾಗುತ್ತದೆ ಎಂಬ ಜನರ ನಂಬಿಕೆಗೆ ಇನ್ನಷ್ಟು ಪುಷ್ಟಿ ಕೊಡುತ್ತಿವೆ. ಇಂತಹ ಸಂದರ್ಭದಲ್ಲಿಯೇ ನಿಸರ್ಗದಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅನಾಹುತ ಕಾದಿದೆಯೇ ಎಂಬ ಆತಂಕ ಸೃಷ್ಟಿಯಾಗುತ್ತಿದೆ.

ಸಮೀಪದ ಚಿಂತಕುಂಟಾ ಗ್ರಾಮದ ಹೊಲದಲ್ಲಿರುವ ಬಾವಿಯ ಒಳಭಾಗದಿಂದ ಪ್ರಕಾಶಮಾನ ಬೆಳಕು ಹೊರಹೊಮ್ಮುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಗ್ರಾಮದ ವಿಶ್ವನಾಥರೆಡ್ಡಿ ಎಂಬುವವರ ಹೊಲದಲ್ಲಿರುವ ಹಳೆಯ ಬಾವಿಯಲ್ಲಿ ಕಳೆದ 4 ದಿನಗಳಿಂದ ಸಂಜೆ 7 ಗಂಟೆಯಿಂದ ಬೆಳಗಿನ ಜಾವ 6ರ ವರೆಗೆ ಈ ಬೆಳಕು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಗ್ರಾಮಸ್ಥರು ಈ ಹಳೆಯ ಬಾವಿಯಲ್ಲಿರುವ ನೀರನ್ನು ಪವಿತ್ರವೆಂಬ ನಂಬುತ್ತಿದ್ದು, ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಈ ಬಾವಿಯ ನೀರನ್ನೇ ತೆಗೆದುಕೊಂಡು ಹೋಗುತ್ತಾರೆ. ಬುಧವಾರ ಈ ಬಾವಿಯಲ್ಲಿನ ನೀರು ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ನೀರಿನಿಂದ ಪ್ರಕಾಶಮಾನ ಬೆಳಕು ಹೊರಸೂಸುತ್ತಿರುವುದು ಗಮನಕ್ಕೆ ಬಂದಿದೆ.

ಬಾವಿಯೊಳಗೆ ಬ್ಯಾಟರಿ ಲೈಟ್ ಇರಬಹುದು ಎಂದು ಶಂಕಿಸಿ, ಬಾಬು ಎಂಬ ವ್ಯಕ್ತಿ ಬಾವಿಗೆ ಇಳಿದು ಕಬ್ಬಿಣದ ಪೈಪ್‌ನಿಂದ ಪರೀಕ್ಷಿಸಿದರು. ಇದರಿಂದ ಸುತ್ತಮುತ್ತ ಬೆಳಕು ಚಿಮ್ಮಿದಂತೆ ಕಾಣತೊಡಗಿತಂತೆ. ಅಲ್ಲದೇ ತನ್ನನ್ನೇ ಮೇಲಕ್ಕೆ ಎತ್ತಿ ಬಿಸಾಡಿದಂತಹ ಅನುಭವ ಆಯಿತು ಎಂದು ಬಾಬು ಹೇಳುತ್ತಾರೆ.

ಬೆಳಕಿನ ಹಿಂದಿರುವ ರಹಸ್ಯ ತಿಳಿಯಲು ಬಾವಿಯೊಳಗಿನ ನೀರನ್ನು ಖಾಲಿ ಮಾಡಲು ಮೋಟಾರ್ ಹಚ್ಚಲಾಯಿತು. ಆದರೆ ನೀರೆತ್ತುವ ಮೋಟಾರ್ ಸುಟ್ಟು ಹೋಗಿದ್ದನ್ನು ಕಂಡ ಜನರು ಇನ್ನಷ್ಟು ಗಾಬರಿಯಾದರು.ಗ್ರಾಮದ ಹಿರಿಯರು ಹೇಳುವ ಪ್ರಕಾರ, ಈ ಹಿಂದೆ ಈ ಬಾವಿಯೊಳಗೆ ಖಾಸಿಮ್‌ಸಾಬ್ ಪೀರ್ ಮುಳುಗಿದೆ. ಆ ದೇವರೇ ಪ್ರತ್ಯಕ್ಷ ಆಗಿರಬಹುದು. ಈ ಹಿನ್ನೆಲೆಯಲ್ಲಿ ಬಾವಿಯೊಳಗೆ ಬೆಳಕು ಬರುತ್ತಿರುವುದರಿಂದ ಸ್ಥಳೀಯರು ಭಯಭೀತಿಯೊಂದಿಗೆ ಭಕ್ತಿಯ ಪರವಶತೆಯಲ್ಲಿ ತೇಲಾಡುತ್ತಿದ್ದಾರೆ.

ಇನ್ನೂ ಕೆಲವರ ಪ್ರಕಾರ ವಜ್ರದ ಹರಳು ಪ್ರಕಾಶಿಸುತ್ತಿರಬಹುದು ಎಂದು ನಂಬಲಾಗಿದೆ. ಹಲವು ಜನರು ಬಾವಿಯೊಳಗೆ ಸಿಡಿಲು ಬಿದ್ದಿರಬಹುದು ಎಂದು ತರ್ಕಿಸುತ್ತಿದ್ದಾರೆ.ವಿಜ್ಞಾನಕ್ಕೆ ಸವಾಲೊಡ್ಡುವ ಅದ್ಭುತ ಪವಾಡದತ್ತ ಜನಸಾಗರವೇ ಹರಿದು ಬರುತ್ತಿದೆ. 

ಗ್ರಾಮದ ಪಕ್ಕದಲ್ಲಿರುವ ಹಳೆಯ ಕಾಲದ ಬಾವಿ ಇದಾಗಿದ್ದು, ಮೊದಲು ಇದೇ ನೀರನ್ನೇ ಕುಡಿಯಲು, ಬಟ್ಟೆ ತೊಳೆಯುವುದು ಹಾಗೂ ಈಜಾಟಕ್ಕೆ ಬಳಕೆ ಮಾಡಲಾಗುತ್ತಿತ್ತು. ಈ ಬಾವಿ ನೀರನ್ನು ಸೇವಿಸುವುದರಿಂದ ಆನೆಕಾಲು ರೋಗ ಹರಡುತ್ತಿದೆ ಎಂಬ ಆತಂಕ ಸೃಷ್ಟಿಯಾಗಿದ್ದರಿಂದ, ಕಳೆದ ಒಂದು ದಶಕದಿಂದ ಈ ಬಾವಿಯ ನೀರು ಬಳಸುವುದನ್ನು ನಿಲ್ಲಿಸಲಾಗಿದೆ. ಈ ಬಾವಿಯ ಕಡೆ ಹೋಗಲು ಸಹ ಜನ ಹೆದರುತ್ತಿದ್ದು, ಕೇವಲ ಮಂಗಳ ಕಾರ್ಯಗಳ ದಿನದಂದು ಮಾತ್ರ ಬಾವಿ ಕಡೆ ಹೋಗುತ್ತೇವೆ ಎಂದು ಗ್ರಾಮಸ್ಥ ಚಂದ್ರಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.