ADVERTISEMENT

ಗ್ರಾಮೀಣ ಕ್ರೀಡೆ ಪ್ರೋತ್ಸಾಹಿಸುವ ಅಗತ್ಯ ಇದೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:30 IST
Last Updated 4 ಅಕ್ಟೋಬರ್ 2011, 8:30 IST

ಸುರಪುರ: ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗಿಲ್ಲ. ಇದರಿಂದ ಇಂತಹ ಸುಪ್ತ ಪ್ರತಿಭೆಗಳು ಅರಳದೆ ಮುದುಡಿ ಹೋಗುತ್ತಿವೆ. ಸಂಘ, ಸಂಸ್ಥೆಗಳು ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ. ಇದರ ಜೊತೆಗೆ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಪೊಲೀಸ್ ಸಬ್ ಇನ್ಸಪೆಕ್ಟರ್ ಹನುಮಂತಪ್ಪ ಕರೆ ನೀಡಿದರು.

ವನವಾಸಿ ಕಲ್ಯಾಣ ಕರ್ನಾಟಕ ಸೋಮವಾರ ಹಮ್ಮಿಕೊಂಡಿದ್ದ ರುಕ್ಮಾಪುರ ಮಂಡಲದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಮಾತನಾಡಿದ ವನವಾಸಿ ಕಲ್ಯಾಣ ಕರ್ನಾಟಕದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಆರ್. ಶ್ರೀನಿವಾಸ್, ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ನಮ್ಮ ಸಂಸ್ಕೃತಿ ಮರೆತುಹೋಗುತ್ತಿದೆ. ಇದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆ ದೂರವಾಗುತ್ತಿವೆ. ಭಾತೃತ್ವ ನಶಿಸಿ ಹೋಗುತ್ತಿದೆ. ದೇಶಾಭಿಮಾನ ಮರೆತು ಹೋಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮೀಣ ಜನರಲ್ಲಿ ಕ್ರೀಡಾಕೂಟ ಇತರ ಚಟುವಟಿಕಗಳನ್ನು ಹಮ್ಮಿಕೊಳ್ಳುವುದರ ಮೂಲಕ ಐಕ್ಯತೆ, ದೇಶಾಭಿಮಾನಿ, ಸ್ವಾಭಿಮಾನ ಬೆಳೆಸುವುದು. ನಮ್ಮ ಭವ್ಯ ಸಂಸ್ಕೃತಿಯನ್ನು ರಕ್ಷಿಸುವುದು. ಜೊತೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪರಿಚಯಿಸುವುದು, ಅವರಲ್ಲಿರುವ ಕೀಳರಿಮೆ ಭಾವನೆಯನ್ನು ತೊಲಗಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದೇವೆ ಎಂದು ಅವರು ವಿವರಿಸಿದರು.

ಹನುಮೇಗೌಡ ದಳಪತಿ ರುಕ್ಮಾಪುರ ಅಧ್ಯಕ್ಷತೆ ವಹಿಸಿದ್ದರು. ಕುಮಾರಗೌಡ ರುಕ್ಮಾಪುರ, ವೆಂಕಟೇಶ ಕುಪಗಲ್, ರಂಗಣ್ಣ ಮಕಾಶಿ, ವೆಂಕಟೇಶ ಪಾಟೀಲ, ಸಂಗಣ್ಣ ಶಿರಗೋಳ ವೇದಿಕೆಯಲ್ಲಿದ್ದರು.
ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮಲ್ಲಣ್ಣ ಮಕಾಶಿ ನಿರೂಪಿಸಿ, ವಂದಿಸಿದರು.

ರುಕ್ಮಾಪುರ, ಕುಪಗಲ್, ಲಿಂಗದಳ್ಳಿ, ಕರ್ನಾಳ, ಚೌಡೇಶ್ವರಿಹಾಳ, ಅಡ್ಡೊಡಗಿ, ಹೆಮ್ಮಡಗಿ, ಸುಗೂರ, ಬೇವಿನಾಳ, ಚಂದಲಾಪುರ, ವೆಂಕಟಾಪುರ, ಹಾಲಗೇರಾ, ಸತ್ಯಂಪೇಟೆ, ಶಖಾಪುರ, ಹೆಮನೂರ ಗ್ರಾಮದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಸೈಕಲ್ ರೇಸ್, ಕೊಕ್ಕೊ, ಕಬಡ್ಡಿ, ಗುಂಡು ಎಸೆತ, ಲಾಂಗ್ ಜಂಪ್, ಹೈ ಜಂಪ್, 200 ಮಿ, 300 ಮಿ, 500 ಮಿ, ಮತ್ತು 1500 ಮಿ ಓಟದಲ್ಲಿ ಪಾಲ್ಗೊಂಡಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.