ADVERTISEMENT

ಚಿಣ್ಣರ ಮನ ಸೆಳೆಯುವ ಸುಂದರ ಶಾಲೆ

ಚಿದಂಬರಪ್ರಸಾದ್
Published 5 ಮಾರ್ಚ್ 2014, 11:32 IST
Last Updated 5 ಮಾರ್ಚ್ 2014, 11:32 IST

ಯಾದಗಿರಿ: ಹಸಿರಿನಿಂದ ಕಂಗೊಳಿಸುವ ಶಾಲೆಯ ಆವರಣ... ಕುಡಿಯಲು, ಕೈತೊಳೆ­ಯಲು ಸಮೃದ್ಧವಾದ ನೀರು... ಶಾಲೆಗೆ ಬರುವ ಪ್ರತಿಯೊಂದು ಮಗುವಿಗೆ ಪ್ರಾಶಸ್ತ್ಯ... ಶಿಕ್ಷಕರ ವಿಶೇಷ ಕಾಳಜಿ...

ಇಷ್ಟೆಲ್ಲ ಸೌಲಭ್ಯಗಳನ್ನು ಹೊಂದಿದ ಶಾಲೆ­ಯನ್ನು ಮಾದರಿ ಶಾಲೆ ಎನ್ನದೇ ಇರಲಾಗದು. ಇಂತಹ ಶಾಲೆಗಳು ಈಗೆಲ್ಲಿ ಸಿಗುತ್ತವೆ ಎನ್ನುವ ಮಾತುಗಳು ಸಹಜ. ಆದರೆ ಇಂತಹ ಅನೇಕ ಶಾಲೆಗಳು ನಮ್ಮ ಜಿಲ್ಲೆಯಲ್ಲಿದ್ದು, ಅತ್ಯುತ್ತಮ ಬೋಧನೆ, ಒಳ್ಳೆಯ ಪರಿಸರ, ನೈರ್ಮಲ್ಯಗಳಿಂ­ದಾಗಿ ಮಕ್ಕಳ ಹಾಗೂ ಪಾಲಕರ ಪ್ರೀತಿಗೆ ಪಾತ್ರವಾಗಿವೆ. ಅಂತಹ ಶಾಲೆಗಳಲ್ಲಿ ತಾಲ್ಲೂಕಿನ ಬೊಮ್ಮಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.

ಇಲ್ಲಿ ಯಾವುದೇ ಮಗು ಏನೇ ತೊಂದರೆ ತೆಗೆದುಕೊಂಡು ಬಂದರೂ, ಅದಕ್ಕೆ ಪರಿಹಾರ ಒದಗಿಸುವ ಶಿಕ್ಷಕರಿದ್ದಾರೆ. ಹೊಟ್ಟೆ ನೋವು ಎನ್ನುವ ಮಗುವಿಗೆ, ಪ್ರೀತಿಯ ಮಾತು, ಒಂದಿಷ್ಟು ಔಷಧಿಯನ್ನೂ ನೀಡುತ್ತಾರೆ. ಶಿಕ್ಷಕರ ಕಾಳಜಿಯಿಂದಲೇ ಮಕ್ಕಳ ಅರ್ಧದಷ್ಟು ಸಮಸ್ಯೆ­ಗಳು ಹಾಗೆಯೇ ನಿವಾರಣೆ ಆಗುತ್ತಿರುವುದು ಈ ಶಾಲೆಯ ಮತ್ತೊಂದು ವಿಶೇಷ.

ಹತ್ತು ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಇಂದು ಸುಮಾರು 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ, ಮೊದಲು ಗ್ರಾಮದ ಸಾಕ್ಷರತೆ ಪ್ರಮಾಣ ಶೇ 10 ರಷ್ಟಿತ್ತು. ಆದರೆ ಈಗ ಶೇ 50 ರಷ್ಟು ಸಾಕ್ಷರತೆ ಸಾಧಿಸಿದೆ.

ಈ ಶಾಲೆಯ ಪ್ರತಿಯೊಂದು ಕಾರ್ಯ­ಗಳಲ್ಲೂ ಪಾಲಕರು ಸಕ್ರಿಯವಾಗಿ ಪಾಲ್ಗೊಳ್ಳು­ತ್ತಾರೆ. ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ. ಅಲ್ಲದೇ ಶಾಲೆಯ ಆವರಣದಲ್ಲಿ ಗಿಡಮರ­ಗಳನ್ನು ನೆಡುವುದು, ನೈರ್ಮಲ್ಯ ಕಾಪಾಡುವುದು ಸೇರಿದಂತೆ ಕಲಿಯಲು ಬೇಕಾದ ಒಳ್ಳೆಯ ವಾತಾವರಣ ಇಲ್ಲಿದೆ.

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಾದರಿ ಶಾಲೆಯಾಗಿ ನಿಂತಿದೆ ಬೊಮ್ಮಶೆಟ್ಟಿ­ಹಳ್ಳಿಯ ಈ ಶಾಲೆ.

ಶಾಲೆಯ ಮುಖ್ಯಾಧ್ಯಾಪಕ ಚೆಂದ್ರಾಮಪ್ಪ ಖ್ಯಾತಿ, ಶಿಕ್ಷಕರಾದ ವಿಶ್ವನಾಥ, ಜಲಾಲ್‌ಸಾಬ್‌ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳಿಗೆ ಇದು ಕೇವಲ ಶಾಲೆಯಲ್ಲ. ಬದಲಿಗೆ ಇದೊಂದು ಜ್ಞಾನದೇಗುಲ.

ಈ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಸರ್ ರತನ್ ಟಾಟಾ ಟ್ರಸ್ಟ್ ವತಿಯಿಂದ ಅಭಿವೃದ್ಧಿಗಾಗಿ ಹಲವು ಯೋಜನೆ­ಗಳನ್ನು ಅನುಷ್ಠಾನಗೊಳಿಸಲಾಗಿದೆ. ಶಾಲಾ ಆರೋಗ್ಯ ಚಟುವಟಿಕೆಗಳು, ಕೈತೊಳೆಯುವ ಕೊಳಾಯಿ, ಶೌಚಾಲಯ, ಸ್ವಚ್ಛ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಮಕ್ಕಳಿಗೆ ನೀಡಲಾಗಿದೆ.

‘ವಿಶೇಷ ಆಸಕ್ತಿ’
‘ಬೊಮ್ಮಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥ­ಮಿಕ ಶಾಲೆಯಲ್ಲಿ ರತನ್‌ ಟಾಟಾ ಟ್ರಸ್ಟ್‌ನ ಕಲಿಕೆ ಸಂಸ್ಥೆಯು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲ್ಲಿನ ಶಿಕ್ಷಕರು ಹಾಗೂ ಪಾಲಕರಲ್ಲಿ ಶಾಲೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ಇದೆ. ಇದರಿಂದಾಗಿ ಯೋಜನೆ­ಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿ­ಸಲು ಸಾಧ್ಯವಾಗಿದೆ.‘

–ರಮೇಶ ಗೊಂಗಡಿ, ಕಲಿಕೆ ಯೋಜನಾ ನಿರ್ದೇಶಕ

‘ಹೆಮ್ಮೆ ಎನಿಸಿದೆ’
‘ಈ ಶಾಲೆಯಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿ­ದ್ದಕ್ಕೆ ಹೆಮ್ಮೆ ಇದೆ. ಇಲ್ಲಿನ ಸಮು­ದಾಯದ ಸಹಕಾರದಿಂದ ಇಷ್ಟೆಲ್ಲ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಮಕ್ಕಳ ಪ್ರಗತಿ­ಯಿಂದಲೇ ಶಾಲೆಗೆ ಉತ್ತಮ ಹೆಸರು ಬರುವಂತಾಗಿದೆ.‘
–ಚೆಂದ್ರಾಮಪ್ಪ ಖ್ಯಾತಿ, ಮುಖ್ಯಾಧ್ಯಾಪಕ

‘ಸಂತೋಷ ನೀಡುವ ಶಾಲೆ’

‘ನನಗೆ ಈ ಶಾಲೆಯ ವಾತಾವರಣ ಒಂದು ರೀತಿಯ ವಿಶೇಷ ಸಂತೋಷವನ್ನು ನೀಡುತ್ತದೆ. ಸಮುದಾಯವೂ ಉತ್ತಮ ಸಹಕಾರ ನೀಡಿದ್ದು, ಊರಿನ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅನೂಕೂಲವಾಗಿದೆ. ಇಲ್ಲಿರುವ ಮಕ್ಕಳೂ ಅಷ್ಟೇ ಜಾಣರಾಗಿದ್ದಾರೆ.
ಶೇಖ್‌ ಅಲಿ, ಶಿಕ್ಷಕ

‘ನಾವೇ ಧನ್ಯರು’

‘ಈ ಶಾಲೆಯಲ್ಲಿರುವ ಶಿಕ್ಷಕರನ್ನು ಪಡೆದ ನಾವೇ ಧನ್ಯರು. ಶಿಕ್ಷಕರು ಹಾಗೂ ಈ ಶಾಲೆ ತುಂಬಾ ಪ್ರಿಯವಾದದ್ದು. ಇಲ್ಲಿ ಕಲಿತು ಉನ್ನತ ಹುದ್ದೆ ಪಡೆಯುವ ಆಸೆ ನನ್ನದು.‘
–ಸುಷ್ಮಿತಾ, ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT