ADVERTISEMENT

ಚುನಾವಣಾ ಬಹಿಷ್ಕಾರ: ಗ್ರಾಮಸ್ಥರ ನಿರ್ಧಾರ

ಬದ್ದೇಪಲ್ಲಿ ಗ್ರಾಮ ಮತ್ತು ತಾಂಡಾ ಯಾದಗಿರಿ ತಾಲ್ಲೂಕಿಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 11:40 IST
Last Updated 12 ಏಪ್ರಿಲ್ 2018, 11:40 IST

ಯಾದಗಿರಿ: ನೂತನ ಗುರುಮಠಕಲ್ ತಾಲ್ಲೂಕಿಗೆ ಬದ್ದೇಪಲ್ಲಿ ಗ್ರಾಮ ಹಾಗೂ ತಾಂಡಾವನ್ನು ಸೇರಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು ಮಂಗಳವಾರ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಬದ್ದೇಪಲ್ಲಿ ಗ್ರಾಮ ಮತ್ತು ತಾಂಡಾವನ್ನು ಯಾದಗಿರಿ ತಾಲ್ಲೂಕಿನಲ್ಲಿಯೇ ಮುಂದುವರಿಸುವಂತೆ ಮನವಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಗುರುಮಠಕಲ್ ತಾಲ್ಲೂಕಿಗೆ ಸೇರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಡಿ ಗ್ರಾಮಸ್ಥರು ದೇಗುಲದ ಆವರಣದಲ್ಲಿ ಸಭೆ ನಡೆಸಿದರು.

‘ಬದ್ದೇಪಲ್ಲಿ ಗ್ರಾಮ ಮತ್ತು ತಾಂಡಾವು ಅಜಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಅದನ್ನೇ ಆಧಾರವಾಗಿ ಇಟ್ಟುಕೊಂಡಿರುವ ಜಿಲ್ಲಾಡಳಿತ ಬದ್ದೇಪಲ್ಲಿ ಗ್ರಾಮವನ್ನು ಗುರುಮಠಕಲ್ ತಾಲ್ಲೂಕಿಗೆ ಸೇರಿಸಿದೆ’ ಎಂದು ಗ್ರಾಮದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಅಜಲಾಪುರ ಗ್ರಾಮ ಕೊಂಕಲ್ ಹೋಬಳಿ ವ್ಯಾಪ್ತಿಗೆ ಒಳಪಟ್ಟರೆ ಬದ್ದೇಪಲ್ಲಿ ಗ್ರಾಮ ಮತ್ತು ತಾಂಡಾ ಸೈದಾಪುರ ಹೋಬಳಿಗೆ ಸೇರಿದ್ದಾಗಿವೆ. ಕೃಷಿ, ಶಿಕ್ಷಣ, ಪಹಣಿ, ಜಮೀನು ದಾಖಲೆ, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದು ಕಚೇರಿಗಳು ಸೈದಾಪುರ ಹೋಬಳಿ ವ್ಯಾಪ್ತಿಗೆ ಸೇರಿವೆ. ಬದ್ದೇಪಲ್ಲಿ ಗ್ರಾಮಕ್ಕೆ ಅಜಲಾಪುರ ಕೇವಲ ಗ್ರಾಮ ಪಂಚಾಯಿತಿ ಕೇಂದ್ರ ಮಾತ್ರ. ಇನ್ನುಳಿದ ಎಲ್ಲಾ ಇಲಾಖೆಗಳು ಸೈದಾಪುರ ಹೋಬಳಿ ವ್ಯಾಪ್ತಿಗೆ ಒಳಪಡುತ್ತವೆ. ಯಾವುದೇ ಕಾರಣಕ್ಕೂ ಬದ್ದೇಪಲ್ಲಿ ಗ್ರಾಮ ಹಾಗೂ ತಾಂಡಾವನ್ನು ಗುರುಮಠಕಲ್ ತಾಲ್ಲೂಕಿಗೆ ಸೇರಿಸಬಾರದು. ಜಿಲ್ಲಾಡಳಿತ ಜನರಿಗೆ ಮಾಡಿರುವ ಇಂಥಾ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು’ ಎಂದು ಸಭೆಯಲ್ಲಿ ಮುಖಂಡರು ನಿರ್ಣಯ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.