ADVERTISEMENT

ಜನಸೇವೆಯೇ ಅಂಚೆ ಇಲಾಖೆ ಧ್ಯೇಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:45 IST
Last Updated 11 ಅಕ್ಟೋಬರ್ 2011, 8:45 IST
ಜನಸೇವೆಯೇ ಅಂಚೆ ಇಲಾಖೆ ಧ್ಯೇಯ
ಜನಸೇವೆಯೇ ಅಂಚೆ ಇಲಾಖೆ ಧ್ಯೇಯ   

ಯಾದಗಿರಿ: ಎಲ್ಲ ವರ್ಗದ ಜನರ ಸೇವೆ ಮಾಡುವ ಮೂಲಕ ಜನಸೇವೆಯೇ ಅಂಚೆ ಸೇವೆ ಎಂಬ ಧ್ಯೇಯವನ್ನು ಅಂಚೆ ಇಲಾಖೆ ಅಳವಡಿಸಿಕೊಂಡಿದ್ದು, ಇಲಾಖೆ ಸಿಬ್ಬಂದಿ, ಗ್ರಾಹಕರಿಗೆ ಇನ್ನೂ ಒಳ್ಳೆಯ ಸೇವೆ ನೀಡುವತ್ತ ಗಮನ ನೀಡಬೇಕು ಎಂದು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ಎ.ಎಲ್. ರಾವ್ ಪೊಲೀಸ್‌ಪಾಟೀಲ ಹೇಳಿದರು.
ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಅಂಚೆ ದಿನಾಚರಣೆ ಹಾಗೂ ರಾಷ್ಟ್ರೀಯ ಅಂಚೆ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂಚೆ ಇಲಾಖೆಯು ಬ್ಯಾಂಕ್‌ಗಳಿಗಿಂತ ಹೆಚ್ಚಿನ ಠೇವಣಿ ಸಂಗ್ರಹಣೆ ಮಾಡುತ್ತಿದ್ದು, ಜನರು ಇಲಾಖೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ನಿದರ್ಶನವಾಗಿದೆ. ಅಂಚೆ ಇಲಾಖೆಯಲ್ಲಿ ತಿಂಗಳ ಉಳಿತಾಯ, ಠೇವಣಿ, ಕಿಸಾನ್ ವಿಕಾಸ ಪತ್ರ, ಎನ್‌ಎಸ್‌ಸಿ, ಮಾಸಿಕ ಆದಾಯ ಯೋಜನೆ, ಎಲೆಕ್ಟ್ರಾನಿಕ್ ಮನಿ ಆರ್ಡರ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತಿದೆ ಎಂದು ವಿವರಿಸಿದರು.

ರೂ.50ರಿಂದ ಉಳಿತಾಯ ಖಾತೆ ಆರಂಭಿಸುವ ಸೌಲಭ್ಯವನ್ನು ಅಂಚೆ ಇಲಾಖೆ ಮಾತ್ರ ನೀಡುತ್ತಿದೆ. ಹಾಗಾಗಿ ಬಡತನ ರೇಖೆಗಿಂತ ಕೆಳಗಿರುವವರು, ಶ್ರೀಮಂತರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಅಂಚೆ ಇಲಾಖೆ ತನ್ನ ಸೇವೆಯನ್ನು ವಿಸ್ತರಿಸಿದೆ. ಕಳೆದ 155 ವರ್ಷಗಳಿಂದ ಇಲಾಖೆಯು ನಿರಂತರವಾಗಿ ಉತ್ಕೃಷ್ಟ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದು ತಿಳಿಸಿದರು.

ಯಾದಗಿರಿ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಯಲ್ಲಿ 33 ಉಪ ಅಂಚೆ ಕಚೇರಿಗಳಿದ್ದು, 585 ಶಾಖಾ ಕಚೇರಿಗಳಿವೆ. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ, ಗುಲ್ಬರ್ಗ ಜಿಲ್ಲೆಯ ಸೇಡಂ, ಚಿತ್ತಾಪುರ, ಚಿಂಚೋಳಿ, ವಾಡಿ ವ್ಯಾಪ್ತಿ ಹೊಂದಿರುವ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಸುಮಾರು 3,500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಗ್ರ ಕಾರ್ಯಕ್ಕಾಗಿ ಕಳೆದ ಏಳು ತಿಂಗಳಿಂದ ಸತತವಾಗಿ ಯಾದಗಿರಿ ಪ್ರಧಾನ ಅಂಚೆ ಕಚೇರಿಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತ ಬಂದಿದೆ. ಅಂಚೆ ಇಲಾಖೆ ಸಿಬ್ಬಂದಿ, ಪ್ರತಿನಿಧಿಗಳು ಇನ್ನೂ ಉತ್ತಮ ಸೇವೆ ಸಲ್ಲಿಸಿದಲ್ಲಿ, ಇಲಾಖೆಗೆ ಇನ್ನೂ ಒಳ್ಳೆಯ ಹೆಸರು ಬರಲಿದೆ ಎಂದು ತಿಳಿಸಿದರು.

ಅಂಚೆ ಪ್ರತಿನಿಧಿ ಸಿದ್ಧಣ್ಣ ಬಾಡದ ಮಾತನಾಡಿ, ಅಂಚೆ ಇಲಾಖೆ ಮೊದಲಿನಿಂದಲೂ ಒಳ್ಳೆಯ ಹೆಸರು ಪಡೆದಿದೆ. ಅಂಚೆ ಇಲಾಖೆಯ ಜವಾಬ್ದಾರಿ ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು, ಬ್ಯಾಂಕುಗಳು ಭಾರತೀಯ ರಿಜರ್ವ್ ಬ್ಯಾಂಕ್‌ನ ಆಧೀನದಲ್ಲಿ ಕೆಲಸ ಮಾಡುತ್ತವೆ. ಹಾಗಾಗಿ ಅಂಚೆ ಇಲಾಖೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ನೇರವಾಗಿ ಕೇಂದ್ರ ಸರ್ಕಾರಕ್ಕೆ ಹಣ ಜಮೆ ಮಾಡಿದಂತಾಗುತ್ತದೆ ಎಂದು ಹೇಳಿದರು.

ಅಂಚೆ ಪ್ರತಿನಿಧಿಗಳಾದ ಸಿದ್ಧಣ್ಣ ಬಾಡದ, ವೀರಣ್ಣ ಬಲಕಲ್, ಹಿರಿಯ ಗ್ರಾಹಕ ಜಟ್ಟೆಪ್ಪ ಅವರನ್ನು ಸನ್ಮಾನಿಸಲಾಯಿತು. ಡಿಪಿಎಂ ಎ.ವಿ. ಗಿರಿ ವೇದಿಕೆಯಲ್ಲಿದ್ದರು. ಅಂಚೆ ಇಲಾಖೆಯ ಕುಪೇಂದ್ರ ವಠಾರ್ ಸ್ವಾಗತಿಸಿ, ನಿರೂಪಿಸಿದರು. ಅಂಚೆ ಇಲಾಖೆಯ ಸಿಬ್ಬಂದಿ, ಪ್ರತಿನಿಧಿಗಳು, ಗ್ರಾಹಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.