ADVERTISEMENT

ಜಾವಡೇಕರ್ ವಿರುದ್ಧ ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 7:10 IST
Last Updated 23 ಸೆಪ್ಟೆಂಬರ್ 2017, 7:10 IST

ಶಹಾಪುರ: ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆಗೆ ಶುಕ್ರವಾರ ಬಂದಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್ ಅವರು ರೈತರ ಸಂಕಷ್ಟಗಳಿಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಮೊರಟಗಿ ಸಭಾಂಗಣದಲ್ಲಿ ನಡೆಯುವ ಸಭೆಗೆ ಕೇಂದ್ರ ಸಚಿವರು ಬಂದ ಕೆಲ ಹೊತ್ತಿನಲ್ಲೇ ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು 2016–17 ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅನುದಾನ ಮಂಜೂರು ಮಾಡಬೇಕು. ಕೆಂದ್ರದಿಂದ ಬಂದ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಕೈಗೊಂಡರು.

‘ಕೇಂದ್ರ ಸಚಿವರು ನೇರವಾಗಿ ನಮ್ಮ ಬಳಿ ಬಂದು ಮನವಿ ತೆಗೆದುಕೊಳ್ಳಬೇಕು’ ಎಂದು ರೈತ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ಪಟ್ಟು ಹಿಡಿದರು. ಸಚಿವರು ಬರಲು ನಿರಾಕರಿಸಿದಾಗ ಕೇಂದ್ರ ಸರ್ಕಾರ, ಸಚಿವರು ಮತ್ತು ಶಾಸಕರ ವಿರುದ್ಧ ರೈತರು ಘೋಷಣೆ ಹಾಕಿದರು. ಸಭಾಂಗಣದ ಆವರಣದಲ್ಲಿ ಕೆಲ ಹೊತ್ತು ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ADVERTISEMENT

ಪರಿಸ್ಥಿತಿ ಬಿಗಾಡಾಯಿಸುತ್ತಿರುವುದು ಅರಿತ ಮಾಜಿ ಸಚಿವ ರಾಜುಗೌಡ ನೇರವಾಗಿ ರೈತರ ಬಳಿ ಬಂದು ಸಮಧಾನ ಪಡಿಸಿದರು. ನಂತರ ಸಚಿವರ ಬಳಿ ಕರೆದೊಯ್ಯುವುದಾಗಿ ಭರವಸೆ ನೀಡಿದರು.

ರೈತರೊಂದಿಗೆ ಮಾತನಾಡಿದ ಸಚಿವರು, ‘ಹಿರಿಯ ಅಧಿಕಾರಿಯನ್ನು ನೇಮಿಸಿ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು. ರೈತ ಮುಖಂಡರಾದ ಭೀಮರಾಯ ಹುಲಕಲ್, ಧರ್ಮಣ್ಣಗೌಡ ಸೈದಾಪುರ, ಭೀಮಾಶಂಕರ ಸಲಾದಪೂರ, ಲಾಲಸಾಬ್ ಚೌದರಿ, ಜೆಟ್ಟೆಪ್ಪ ದರ್ಶನಾಪುರ, ಚಂದ್ರಶೇಖರ ಬ್ಯಾರಿ, ಮಲ್ಲಣ್ಣಗೌಡ ಸಿಂಗನಹಳ್ಳಿ, ಸಂಗನಬಸಪ್ಪ, ಮಲ್ಲಪ್ಪ ದೊಡ್ಮನಿ, ನಿಂಗಣ್ಣ ವಡಿಗೇರಿ ಇದ್ದರು.

ಪತ್ರಕರ್ತರನ್ನು ಹೊರಗೆ ಕಳುಹಿಸಿ: ರೈತರ ಪ್ರತಿಭಟನೆಯಿಂದ ಸಿಟ್ಟಿಗೆದ್ದ ಸಚಿವರು ಸಭೆಗೆ ಪತ್ರಕರ್ತರನ್ನು ಕರೆಯಿಸಿದ್ದು ಯಾರು ಎಂದು ಪ್ರಶ್ನಿಸಿದರು. ಇದು ಬಿಜೆಪಿ ಸಭೆಯೇ ಹೊರತು ಕಾರ್ಯಕ್ರಮವಲ್ಲ ಎಂದು ತಿಳಿಸಿದರು.

ರೈತರ ಸಮಸ್ಯೆ ಕುರಿತು ತಾವು ಕೈಗೊಳ್ಳುವ ಕ್ರಮ ಕುರಿತು ತಿಳಿಯಲು ಹಾಗೂ ಪಕ್ಷದ ಮುಖಂಡರ ಆಹ್ವಾನ ಮೇರೆಗೆ ಬಂದಿದ್ದೇವೆ ಎಂದು ಪತ್ರಕರ್ತರು ಉತ್ತರಿಸಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪತ್ರಕರ್ತರು ಸಭೆಯಿಂದ ಹೊರಬಂದರು. ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.