ADVERTISEMENT

ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಕಾರ್ಯಕ್ರಮ 19ರಿಂದ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:15 IST
Last Updated 7 ಫೆಬ್ರುವರಿ 2012, 9:15 IST

ಯಾದಗಿರಿ:  ಮೊದಲ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಫೆ. 19 ರಿಂದ 22ವರೆಗೆ ಹಮ್ಮಿಕೊಳ್ಳಲಾಗಿದ್ದು, 3 ತಾಲ್ಲೂಕುಗಳ ಐದು ವರ್ಷದೊಳಗಿನ ಒಟ್ಟು 1,80,257 ಮಕ್ಕಳಿಗೆ  ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಗುರನೀತ ತೇಜ್ ಮೆನನ್ ತಿಳಿಸಿದರು.

ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇವರಲ್ಲಿ  ನಗರ ಪ್ರದೇಶದ  35218 ಹಾಗೂ ಗ್ರಾಮೀಣ ಪ್ರದೇಶದ 145039 ಮಕ್ಕಳು ಸೇರಿದ್ದಾರೆ.  ಇದಕ್ಕಾಗಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಬೇಕು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಶೇ. 100 ರಷ್ಟು ಪ್ರಗತಿ ಸಾಧಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಅಂಗನವಾಡಿ ಕಾರ್ಯಕರ್ತರ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿದೆ. ಇವರ ಸೇವೆ ಮತ್ತು ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ನಿಗಾ ವಹಿಸಬೇಕು. ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲು ನಿಲ್ದಾಣ, ಇತರ ಜನನಿಬಿಡ ಸ್ಥಳಗಳಲ್ಲಿರುವ ಮಕ್ಕಳು ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಲಸಿಕೆ ಹಾಕುವ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಜರುಗುವ ಎಲ್ಲ ಸಂತೆ ಮತ್ತು ಜಾತ್ರೆಗೆ ಬರುವ ಹಾಗೂ ತಾಂಡಾಗಳಲ್ಲಿ ವಾಸಿಸುವ ಜನರ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಬೇಕು.

ಈ ಕಾರ್ಯಕ್ರಮದಲ್ಲಿ ಯಾವುದೇ ಮಗು ಪೋಲಿಯೊ ಲಸಿಕೆಯಿಂದ ವಂಚಿತವಾಗದಂತೆ ಕಟ್ಟೆಚ್ಚರ ವಹಿಸಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯು ಎಲ್ಲ ಇಲಾಖೆಗಳೊಂದಿಗೆ ವಿಶೇಷವಾಗಿ ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ ಇಲಾಖೆ, ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

2003 ರಲ್ಲಿ ಕೇವಲ ಒಂದು ಪ್ರಕರಣ ವರದಿಯಾಗಿದ್ದು, ಇಲ್ಲಿಯವರಿಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ರಾಷ್ಟ್ರೀಯ  ಪಲ್ಸ್ ಪೋಲಿಯೊ ಕಾರ್ಯಕ್ರಮವು 1995ರ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭಗೊಂಡಿದ್ದು, ಇಲ್ಲಿಯವರಿಗೂ ಪಲ್ಸ್ ಪೋಲಿಯೊ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ವರ್ಷ ಫೆ. 19 ರಿಂದ 22 ರವರೆಗೆ ನಡೆಯುವ ಒಂದನೇ ಸುತ್ತಿನ ರಾಷ್ಟ್ರೀಯ  ಪಲ್ಸ್ ಪೋಲಿಯೊ ಕಾರ್ಯಕ್ರಮದಡಿ ಫೆ. 19 ರಂದು ಸಾರ್ವಜನಿಕರು ತಮ್ಮ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆತಂದು ಪೋಲಿಯೊ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ, ಡಾ. ವಿಜಯಕುಮಾರ,  ಪಲ್ಸ್  ಪೋಲಿಯೊ ಜಿಲ್ಲಾ ನೋಡಲ್ ಅಧಿಕಾರಿ ಡಾ. ಅನಿಲಕುಮಾರ ತಾಳಿಕೋಟಿ, ಸಹಾಯಕ ಆಯುಕ್ತ ಡಾ. ಶರಣಪ್ಪ ಸತ್ಯಂಪೇಟ, ನಗರಸಭೆಯ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.