ADVERTISEMENT

ತಲೆ ಎತ್ತಲಿದೆ ಅಂದವಾದ ಆಡಳಿತ ಸೌಧ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2013, 8:50 IST
Last Updated 30 ಸೆಪ್ಟೆಂಬರ್ 2013, 8:50 IST
ಯಾದಗಿರಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಸಂಕೀರ್ಣ ಕಟ್ಟಡದ ನೀಲನಕ್ಷೆ
ಯಾದಗಿರಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಸಂಕೀರ್ಣ ಕಟ್ಟಡದ ನೀಲನಕ್ಷೆ   

ಯಾದಗಿರಿ: ಜಿಲ್ಲಾ ಕೇಂದ್ರವಾದರೂ ಆಡಳಿತ ಕಚೇರಿಗಳು ಮಾತ್ರ ಒಂದೆಡೆ ಸಿಗುತ್ತಿಲ್ಲ. ಒಂದೊಂದು ಕೆಲಸಕ್ಕೆ ಒಂದೊಂದು ಕಡೆ ಅಲೆದಾಡುವ ಸ್ಥಿತಿ ಇದೆ. ಜಿಲ್ಲಾ ಕೇಂದ್ರಕ್ಕೆ ಬರುವ ಜನರಿಗಂತೂ ಕಚೇರಿಗಳನ್ನು ಹುಡುಕು­ವುದೇ ಕಷ್ಟದ ಕೆಲಸ. ಕಚೇರಿ ಸಿಕ್ಕರೆ, ಅರ್ಧ ಕೆಲಸ ಆದಂತೆಯೇ ಸರಿ. ಕಚೇರಿಗಳಿಗಾಗಿ ಅಲೆದಾಡುವುದು ಇನ್ನೆಷ್ಟು ದಿನ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. 2014ರ ನವೆಂಬರ್‌ ವೇಳೆಗೆ ಒಂದೇ ಕಡೆ ಎಲ್ಲ ಕಚೇರಿಗಳೂ ಕೆಲಸ ನಿರ್ವಹಿಸಲಿವೆ.

ಈಗಾಗಲೇ ರಾಜ್ಯ ಸರ್ಕಾರ ಜಿಲ್ಲಾ ಕೇಂದ್ರದಲ್ಲಿ ಆಡಳಿತ ಸೌಧದ ನಿರ್ಮಾಣ ಆರಂಭಿಸಿದೆ. ನವೆಂಬರ್‌ನಲ್ಲಿ ಮೊದಲ ಮಹಡಿ ಪೂರ್ಣಗೊಳ್ಳಲಿದ್ದು, ಬಹುತೇಕ ಸರ್ಕಾರಿ ಕಚೇರಿಗಳು ಇಲ್ಲಿಗೆ ಸ್ಥಳಾಂತರ ಆಗಲಿವೆ. ಜೊತೆಗೆ ಜಿಲ್ಲೆಯ ಎರಡನೇ ಸರ್ಕಾರಿ ಕಟ್ಟಡ ಎನ್ನುವ ಹೆಗ್ಗಳಿಕೆಯೂ ಇದಕ್ಕೆ ಸಿಗುವ ಸಾಧ್ಯತೆಗಳಿವೆ.

ಜಿಲ್ಲಾ ಸಂಕೀರ್ಣಗಳಿಂದಲೇ ನೂತನ ಜಿಲ್ಲೆಗಳ ಸೌಂದರ್ಯ ಹೆಚ್ಚುತ್ತಿದೆ. ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ನಿರ್ಮಾಣವಾಗಿರುವ ಆಡಳಿತ ಸೌಧಗಳು ಗಮನ ಸೆಳೆಯುತ್ತಿವೆ. ಇದೇ ಮಾದರಿಯಲ್ಲಿ ಯಾದಗಿರಿಯಲ್ಲೂ ಜಿಲ್ಲಾ ಸಂಕೀರ್ಣ ತಲೆ ಎತ್ತಲಿದೆ. ಹಿಂದಿನ ಬಿಜೆಪಿ ಸರ್ಕಾರವು ಆಡಳಿತ ಸೌಧದ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಇದೀಗ ಕಾಂಗ್ರೆಸ್‌ ಸರ್ಕಾರ ಉದ್ಘಾಟನೆ ಅವಕಾಶ ಪಡೆಯಲಿದೆ.

46 ಇಲಾಖೆಗಳು: ನಗರದ ಚಿತ್ತಾಪುರ ರಸ್ತೆಯಲ್ಲಿ ಸುಮಾರು 56 ಎಕರೆ ವಿಶಾಲ ಜಾಗದಲ್ಲಿ ಆಡಳಿತ ಸಂಕೀರ್ಣ ನಿರ್ಮಾಣ ಮಾಡಲಾಗುತ್ತಿದೆ. ಇದ­ಕ್ಕಾಗಿ ಸುಮಾರು ರೂ.45 ಕೋಟಿ ಅಂದಾಜು ವೆಚ್ಚವಾಗಲಿದ್ದು, ಸರ್ಕಾರ­ದಿಂದ ರೂ.25 ಕೋಟಿ ಅನುದಾನ ಮಂಜೂರಾಗಿದೆ.

ಮೂರು ಮಹಡಿಗಳನ್ನು ಹೊಂದಿರುವ ಈ ಆಡಳಿತ ಸಂಕೀರ್ಣ­ದಲ್ಲಿ ಒಟ್ಟು 46 ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ ಕಾರ್ಯಾಲಯ, ಸಭಾಂಗಣ, ಸಹಾಯಕ ಆಯುಕ್ತರ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಸೂರಿನಲ್ಲಿ ಜನರಿಗೆ ಲಭ್ಯವಾಗಲಿವೆ.

2014 ರ ನವೆಂಬರ್‌ನಲ್ಲಿ ಜಿಲ್ಲಾ ಸಂಕೀರ್ಣದ ಕೆಳಮಹಡಿ ಹಾಗೂ 2015ರ ಜನವರಿಯಲ್ಲಿ ಎರಡನೇ ಮತ್ತು ಮೂರನೇ ಮಹಡಿಯ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ.

ವಿಳಂಬವಾದ ಕಾಮಗಾರಿ: ಜಿಲ್ಲೆಯಾಗಿ ನಾಲ್ಕು ವರ್ಷ ಪೂರೈಸಿದರೂ ಜಿಲ್ಲಾ ಸಂಕೀರ್ಣದ ನಿರ್ಮಾಣ ಆಗಿಲ್ಲ. 2012 ರ ಸೆಪ್ಟೆಂಬರ್ 17 ರಂದು ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಈ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿದ್ದರು. ಗೃಹ ಮಂಡಳಿಯಿಂದ ನಿರ್ಮಿಸಲಾಗುತ್ತಿರುವ ಈ ಸಂಕೀರ್ಣದ ಕಾಮಗಾರಿಯನ್ನು ವರ್ಷದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿತ್ತು.

ನಂತರ ನಗರ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆಯ ಚುನಾ­ವಣೆಗಳು ಬಂದಿದ್ದರಿಂದ ಅನುದಾನ ಬಿಡುಗಡೆಯೂ ವಿಳಂಬವಾಯಿತು. ಹೀಗಾಗಿ ಇದುವರೆಗೂ ನೆಲಮಹಡಿಯ ನಿರ್ಮಾಣವೂ ಆಗಿಲ್ಲ.

2014 ರ ನವೆಂಬರ್‌ನಲ್ಲಿ ಮೊದಲ ಮಹಡಿಯ ನಿರ್ಮಾಣ ಆಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಜಿಲ್ಲೆಯಾದ ನಂತರ ಜಿಲ್ಲಾ ಕಚೇರಿ­ಗಳು ಪ್ರಾರಂಭವಾಗಿದ್ದು, ಬಹುತೇಕ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಂಥಾಲಯ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಸೇರಿದಂತೆ ಬಹಳಷ್ಟು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಬಾಡಿಗೆಯನ್ನೂ ನೀಡಲಾಗುತ್ತಿದೆ.

ಆದಷ್ಟು ಬೇಗ ಜಿಲ್ಲಾ ಸಂಕೀರ್ಣ ನಿರ್ಮಾಣವಾದಲ್ಲಿ ಬಾಡಿಗೆ ಕಟ್ಟುವುದೂ ತಪ್ಪಲಿದೆ. ಜೊತೆಗೆ ಜನರಿಗೆ ಒಂದೇ ಕಡೆ ಎಲ್ಲ ಇಲಾಖೆಗಳೂ ಲಭ್ಯವಾಗಲಿವೆ. ಆದಷ್ಟು ಶೀಘ್ರದಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣವಾಗಲಿ ಎಂಬುದು ನಾಗರಿಕರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.