
ವಂಚನೆ
ಯಾದಗಿರಿ: ವೇದಿಕ ಆಯುಕ್ಯೂರ್ ಹೆಲ್ತ್ ಮಳಿಗೆಯ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ₹ 39 ಲಕ್ಷ ಪಡೆದು ವಂಚಿಸಿದ ಆರೋಪದಡಿ ದೆಹಲಿ ಮತ್ತು ಮುಂಬೈ ಮೂಲದ ಐವರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರಪುರ ತಾಲ್ಲೂಕಿನ ಕೆಂಭಾವಿಯ ಕಾಂತಮ್ಮ ಬಿರಾದಾರ, ಭೀಮನಗೌಡ ಬಿರಾದಾರ ಮತ್ತು ಅವಿನಾಶ ಬಿರಾದಾರ ವಂಚನೆಗೆ ಒಳಗಾದ ಸಂತ್ರಸ್ತರು. ವಂಚನೆ ಆರೋಪದಡಿ ವೇದಿಕ್ ಆಯುರ್ ಕ್ಯುಆರ್ ಹೆಲ್ತ್ ಆ್ಯಂಡ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಎಕ್ಸಿಸ್ ಇ–ಕಾರ್ಪ್ ಸೊಲ್ಯೂಶನ್ಸ್ ಪ್ರೈವೇಟ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಮಹಮದ್ ಫೈಜಾನ್, ವ್ಯವಸ್ಥಾಪಕ ಮುಖೇಶ ಕುಮಾರ್ ತ್ಯಾಗಿ, ಮುಂಬೈನ ಅನಿಲ್ ಜಾಧವ, ಆನಂದ ತಾವಡೆ ಹಾಗೂ ಸಂಜನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂತಮ್ಮ ಅವರು ವ್ಯಾಪಾರಿ ಆಗಿದ್ದು, ಶಹಾಪುರ, ವಿಜಯಪುರ ಹಾಗೂ ಕಲಬುರಗಿಯಲ್ಲಿ ಶಾಪ್‌ಗಳನ್ನು ನಡೆಸುವ ಇಚ್ಛೆ ಹೊಂದಿದ್ದರು. ಎಕ್ಸಿಸ್ ಇ–ಕಾರ್ಪ್ ಕಂಪನಿಯ ಪ್ರಚಾರಕರಾದ ಅನಿಲ್, ಸಂಜಾನಾ ಸೇರಿ ಇತರರು ಕಾಂತಮ್ಮ ಅವರನ್ನು ಭೇಟಿಯಾದರು. ಎಕ್ಸಿಸ್‌ನ ಸೂಪರ್ ಬಜಾರ್ ಫ್ರಾಂಚೈಸಿ ದೇಶದಾದ್ಯಂತ ಇದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಫ್ರಾಂಚೈಸಿ ಕೊಡಲಾಗಿದು ಎಂದು ಪ್ರಚಾರಕರು ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫ್ರಾಂಚೈಸಿ ಒಪ್ಪಂದ ಪಡೆಯಲು ಕಂಪನಿಗೆ ಮುಂಗಡವಾಗಿ ₹ 25 ಲಕ್ಷ ಪಾವತಿ ಮಾಡಬೇಕು. ಕಂಪನಿಯ ಸದಸ್ಯರಿಗೆ ಪ್ರತಿ ತಿಂಗಳು ₹ 1 ಲಕ್ಷದಂತೆ 35 ತಿಂಗಳು ಆದಾಯ ರೂಪದಲ್ಲಿ ಕೊಡಲಾಗುವುದು. ಕಿರಾಣಿ ಮಾರಾಟದ ವಸ್ತುಗಳ ಮೇಲೆ ಶೇ 5ರಷ್ಟು ಲಾಭಾಂಶ, ಪ್ರತ್ಯೇಕವಾಗಿ ₹ 5 ಲಕ್ಷ ಹೂಡಿಕೆ ಮಾಡಿದರೆ ಪ್ರತಿ 15 ದಿನಗಳಿಗೆ ₹ 19 ಸಾವಿರದಂತೆ ತಿಂಗಳಿಗೆ ₹ 38 ಸಾವಿರ ಕೊಡುವುದಾಗಿ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಸೂಚಿಸಿದ ಕಂಪನಿಯ ಖಾತೆಗೆ ಕಾಂತಮ್ಮ, ಅವಿನಾಶ ಹಾಗೂ ಇತರರು ಹಂತ– ಹಂತವಾಗಿ ₹ 39 ಲಕ್ಷ ಹಣ ವರ್ಗಾವಣೆ ಮಾಡಿದ್ದರು. ಫ್ರಾಂಚೈಸಿ ಕೊಡದೆ ಹಾಗೂ ಹಣವೂ ಮರಳಿಸದೆ, ಮಳಿಗೆ ನಡೆಸಲು ₹ 40 ಸಾವಿರ ತಿಂಗಳ ಬಾಡಿಗೆ ಹಣವು ಕಟ್ಟಡ ಮಾಲೀಕರಿಗೂ ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತರು ದೂರು ಐವರ ವಿರುದ್ಧ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.