ADVERTISEMENT

ದೇಶದ ಬದಲಾವಣೆ ಯುವಕರಿಂದ ಸಾಧ್ಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 10:38 IST
Last Updated 16 ಆಗಸ್ಟ್ 2016, 10:38 IST
ದೇಶದ ಬದಲಾವಣೆ ಯುವಕರಿಂದ ಸಾಧ್ಯ
ದೇಶದ ಬದಲಾವಣೆ ಯುವಕರಿಂದ ಸಾಧ್ಯ   

ಯಾದಗಿರಿ: ದೇಶದ ಯುವ ಪೀಳಿಗೆ ನಮ್ಮ ಅಮೂಲ್ಯ ಸಂಪತ್ತು. ಆಧುನಿಕತೆಯ ಭರಾಟೆಯಲ್ಲಿ ಇತಿಹಾಸವನ್ನು ಮರೆತು ಹೋಗುತ್ತಿರುವ ಯುವಕರು ದೇಶದ ಇತಿಹಾಸ, ಸ್ವಾತಂತ್ರ್ಯ ಬಂದ ಬಗೆ ಮತ್ತು ಹೋರಾಟಗಾರರ ತ್ಯಾಗದ ಬಗ್ಗೆ ಅರಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ 70ನೇ ಸ್ವಾಂತಂತ್ರ್ಯೋತ್ಸವ  ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಾವಿರಾರು ದೇಶ ಭಕ್ತರ ಮತ್ತು ಹೋರಾಟಗಾರರ ತ್ಯಾಗ ಬಲಿದಾನದಿಂದ  ದೇಶಕ್ಕೆ  ಸ್ವಾತಂತ್ರ್ಯ ಸಿಕ್ಕಿದೆ. ಸಿಪಾಯಿ ದಂಗೆ, ಕ್ವಿಟ್ ಇಂಡಿಯಾ ಚಳುವಳಿ, ಸೇರಿದಂತೆ ಹತ್ತು ಹಲವು  ಘಟನೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ದೇಶದ ಮಾಹಾನ್‌ ನಾಯಕರ ಆದರ್ಶಗಳನ್ನು ಪಾಲಿಸಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ವಿಶ್ವದಲ್ಲಿ ಅಹಿಂಸೆ ಮೂಲಕ ಸ್ವಾತಂತ್ರ್ಯ ಪಡೆದ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ  ಭಾರತವು  ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನು ಸಾಕಷ್ಟು ಅಭಿವೃದ್ಧಿ ಹೊಂದುವ ಮೂಲಕ ವಿಶ್ವಕ್ಕೆ  ಭಾರತ ಮಾದರಿಯಾಗಬೇಕಿದೆ. ಇದಕ್ಕೆ ಯುವಕರು ಶ್ರಮ ಅಗತ್ಯ. ಅನಗತ್ಯ ವಿಷಯಗಳಿಗೆ ಭಾವೋದ್ವೇಗಕ್ಕೊಳಗಾಗಿದೆ ನಿಧಾನವಾಗಿ ಪ್ರತಿಯೊಂದು ವಿಷಯಗಳ ಬಗ್ಗೆ ವಿಮರ್ಶೆ ಮಾಡಿ ಉತ್ತಮ ದಾರಿ ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ಮೂರು ವರ್ಷದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನಪರ ಆಡಳಿತ ನೀಡುತ್ತಿದೆ. ಹೊಸ ಯೋಜನೆಗಳನ್ನು ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದರು.

ಹಿಂದುಳಿದ ಪ್ರದೇಶವಾದ ಹೈದರಾಬಾದ್ ಕರ್ನಾಟಕ  ಜನರಿಗೆ 371(ಜೆ) ಕಲಂ ತಿದ್ದು ಪಡಿಯಿಂದ ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಿದೆ. ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕಡೆಗಳಲ್ಲಿ ಉದ್ಯೋಗದಲ್ಲಿನ ಮೀಸಲಾತಿಯಿಂದ  ಸಾಕಷ್ಟು ಅನುಕೂಲವಾಗಿದೆ.

ಈಗಾಗಲೇ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಕೈಗಾರಿಕೆಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಕಾಮಗಾರಿ, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಹೊಸ ಯೋಜನೆಗಳನ್ನು ತರುವ ಮೂಲಕ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದು ಹೇಳಿದರು.

ಶಾಸಕ ಬಾಬುರಾವ್ ಚಿಂಚನಸೂರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಅನಪುರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಷು ರಾಠೋಡ್, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಕ ಅಧಿಕಾರಿ ವಿಕಾಸ ಸುರಾಳಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಇದ್ದರು.

ಗೈರಾದ ಶಾಸಕ ಮಾಲಕ ರೆಡ್ಡಿ ಮತ್ತವರ ಬೆಂಬಲಿಗರು :  ಸಚಿವ ಪ್ರಿಯಾಂಕ್ ಖರ್ಗೆ ಅವರ ಯಾವ ಕಾರ್ಯಕ್ರಮಕ್ಕೂ ಬಂದಿರದ ಶಾಸಕ ಮಾಲಕ ರೆಡ್ಡಿ  ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೂ ಬರಲಿಲ್ಲ. 

ಮಾಲಕರೆಡ್ಡಿ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಶಶಿಧರ ರೆಡ್ಡಿ ಹೊಸಳ್ಳಿ, ಕಾಡಾ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಕಂದಕೂರು ಸೇರಿದಂತೆ ಕೆಲವರ ಗೈರು ಕಾಣುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.