ADVERTISEMENT

ದೋರನಹಳ್ಳಿ ಗ್ರಾಪಂ: ಅನುದಾನ ದುರ್ಬಳಕೆ:ಅಧ್ಯಕ್ಷ ಸೇರಿ ಮೂವರ ಸದಸ್ಯತ್ವ ವಜಾಕ್ಕೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 7:45 IST
Last Updated 18 ಆಗಸ್ಟ್ 2012, 7:45 IST

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ಸದಸ್ಯರಾದ ಅಖಂಡಯ್ಯಗುಡಿ, ಬಸಪ್ಪ ಹಳ್ಳದ ಅಧಿಕಾರ ಹಾಗೂ ಹಣ ದುರುಪಯೋಗಪಡಿಸಿಕೊಂಡಿರುವ ಬಗ್ಗೆ  ವಿಚಾರಣೆಯಿಂದ ತಿಳಿದು ಬಂದಿದ್ದು ಮೂವರ ಸದಸ್ಯತ್ವ ವಜಾಗೊಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಪ್ರದಾನ ಕಾರ್ಯದರ್ಶಿಯವರಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಅವರು ಹಣ ದುರ್ಬಳಕೆಗೆ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಅದರಂತೆ ಪಂಚಾಯತ್ ರಾಜ್ ಅಧಿನಿಯಮ ಪ್ರಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯತ್ವದಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಅಖಂಡಯ್ಯಗುಡಿ ಹಾಗೂ ಬಸಪ್ಪ ಹಳ್ಳದ ಅವರು 13ನೇ ಹಣಕಾಸಿನ ಆಯೋಗದ ಅನುದಾನದಡಿಯಲ್ಲಿ ಕಾಮಗಾರಿ ನಿರ್ವಹಿಸಿ ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಪ್ರತ್ಯೇಕವಾಗಿ ಇಲ್ಲವೆ ಪರೋಪಕ್ಷವಾಗಿ ಏಜೆಂಟ್ ಇಲ್ಲವೆ ಪಾಲುದಾರ ಅಥವಾ ನೌಕರನ ಮೂಲಕ ಯಾವುದೇ ಕಾಮಗಾರಿ ಮತ್ತು ಸರಕು ಸೇವೆಯನ್ನು ಪೂರೈಯಿಸುವುದಕ್ಕಾಗಲಿ ಕೆಲಸ ನಿರ್ವಹಿಸಿದ್ದರೆ ಸದಸ್ಯತ್ವ ರದ್ದಾಗುತ್ತದೆ.

ಇವೆಲ್ಲ ಅಂಶಗಳನ್ನು ಸಮಗ್ರವಾಗಿ ತನಿಖೆ ಮಾಡಿ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸದಸ್ಯತ್ವದಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಳಂಬ: ದೋರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಅಖಂಡಯ್ಯಗುಡಿ, ಬಸಪ್ಪ ಹಳ್ಳದ ಎನ್ನುವರ ಮೇಲೆ  ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿ 10 ದಿನಗಳೇ ಸಂದಿವೆ ಆದರೆ  ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸದೆ ರಾಜಕೀಯ ಒತ್ತಡದಿಂದ ವಿಳಂಬ ಮಾಡುತ್ತಿದ್ದಾರೆ.

ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದೆ ತಾ.ಪಂ. ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಇಡೀ ಹಗರಣದ ಬಗ್ಗೆ ಹೋರಾಟ ನಡೆಸಿರುವ ದಲಿತ ಮುಖಂಡ ಮಾನಪ್ಪ ಹಾಲಬಾವಿ ಹಾಗೂ ಮರೆಪ್ಪ ಪೂಜಾರಿ ಆಗ್ರಹಿಸಿದ್ದಾರೆ.

ಸಂಪೂರ್ಣವಾಗಿ ಅಕ್ರಮದ ಹೂರಣ ಹೊರತೆಗೆದು ಕ್ರಮ ತೆಗೆದುಕೊಳ್ಳಲು ಶಿಫಾರಸು ಮಾಡಿದರೂ ಜಿಲ್ಲಾ ಪಂಚಾಯಿತಿಯ ಕೆಲ ಅಧಿಕಾರಿಗಳು ಇನ್ನಿಲ್ಲದ ಸಬೂಬು ಹೇಳಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಇದೇ ಕಾರಣದಿಂದ ಪಂಚಾಯಿತಿ ಅಭಿವೃದ್ಧಿ  ಅಧಿಕಾರಿಯನ್ನು ಅಮಾನತುಗೊಳಿಸಿಲ್ಲವೆಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.