ADVERTISEMENT

ಧಾರಣೆ ಕುಸಿತ: ನೆಲ ಕಚ್ಚಿದ ಟ್ರ್ಯಾಕ್ಟರ್ ಖರೀದಿ...!

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 10:15 IST
Last Updated 7 ಜನವರಿ 2012, 10:15 IST

ಶಹಾಪುರ: ಪ್ರಸಕ್ತ ಸಾಲಿನಲ್ಲಿ ಸಂಪೂರ್ಣವಾಗಿ ಕೈಕೊಟ್ಟ ಮಳೆಯಿಂದ ಅದರ ನೇರ ಪರಿಣಾಮ  ವಾಣಿಜ್ಯ ಕ್ಷೇತ್ರಗಳಿಗೂ ಚಾಚಿಕೊಂಡಿದೆ. ನೆಲಕಚ್ಚಿದ ಬತ್ತದ ಧಾರಣೆಯೂ ಇತರ ವಾಣಿಜ್ಯ ಬೆಳೆಗಳಾದ ಹತ್ತಿ. ಮೆಣಸಿನಕಾಯಿ, ತೊಗರಿಗೂ ವ್ಯಾಪಿಸಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಆಧುನಿಕ ಕೃಷಿಯ ಬಳಕೆಯ ಸಲುವಾಗಿ ಟ್ರ್ಯಾಕ್ಟರ್ ಖರೀದಿ ಮಂಕಾಗಿದೆ.

 ಶಹಾಪುರ ಪಟ್ಟಣದಲ್ಲಿ ವಿವಿಧ ಕಂಪನಿಯ ಟ್ಯಾಕ್ಟರ್ ಶೋ ರೂಂಗಳಿವೆ. ನೂರಾರು ಟ್ರ್ಯಾಕ್ಟರ್‌ಗಳನ್ನು ಖರೀದಿಸುತ್ತಿದ್ದ ರೈತರು ಸಲಾಮ್ ಹೊಡೆದಿದ್ದಾರೆ. ಈಗ ಕೇವಲ ಬೆರಳೆಣಿಕೆಯಷ್ಟು ಮಾತ್ರ ಅಲ್ಲೊಂದು ಇಲ್ಲೊಂದು ಮಾರಾಟ ನಡೆದಿವೆ.

ಮುಖ್ಯವಾಗಿ ಕಳೆದ ಎರಡು ವರ್ಷಗಳ ಹಿಂದೆ ಕೆಲ ಟ್ರ್ಯಾಕ್ಟರ್ ಕಂಪನಿಯ ಡೀಲರ್‌ಗಳು ಬ್ಯಾಂಕ್ ಮೂಲಕ ಸಾಲದ ವ್ಯವಸ್ಥೆಯ ಅಕ್ರಮ ಒಪ್ಪಂದ ಮಾಡಿಕೊಂಡು ಆ ಮೂಲಕ ಸಣ್ಣ ರೈತರಿಗೂ ಸಾಲದ ಸೌಲಭ್ಯ ನೀಡಿದ್ದರು. ಡೀಲರ್‌ಗಳು ಸಹ ಒಂದು ಟ್ರ್ಯಾಕ್ಟರ್ ಮಾರಾಟ ಮಾಡಿಸಿದರೆ 15ರಿಂದ 20ಸಾವಿರ ರೂಪಾಯಿ ದಲ್ಲಾಳಿಗಳಿಗೆ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

 ಆರಂಭದಲ್ಲಿ ಖುಷಿ ವ್ಯಕ್ತಪಡಿಸಿದ ರೈತರು ನಂತರ ಕಂತು ಪಾವತಿಗೆ ಬಂದಾಗ ಹೈರಾಣಗೊಂಡರು. ಎಸ್‌ಬಿಎಚ್ ಬ್ಯಾಂಕ್ ಒಂದರಲ್ಲಿಯೇ ಸುಮಾರು ಎರಡು ಕೋಟಿಯಷ್ಟು ಟ್ರ್ಯಾಕ್ಟರ್ ಸಾಲವಿದೆ ಎಂದು ಬ್ಯಾಂಕಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಲ್ಲಾಳಿಗಳು ನಮಗೆ ಮೋಸ ಮಾಡಿದರು ಅದರ ಅರಿವು ನಮಗಿರಲಿಲ್ಲ.  ಅಸಲು ಹಾಗೂ ಬಡ್ಡಿ ಸೇರಿಸಿ ಒಟ್ಟು ಹಣ ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ಸೂಚಿಸುತ್ತಿದ್ದು ರೈತರು ತೊಂದರೆಗೆ ಸಿಲುಕಿದ್ದಾರೆ. ಸಾಲ ಮರು ಪಾವತಿ ಮಾಡದ ಅಸಹಾಯಕ ಸ್ಥಿತಿಯಲ್ಲಿರುವ ರೈತರು ಸಾಲ ಪಡೆದ ಬ್ಯಾಂಕಿನವರು ಭೂಮಿ ಹರಾಜಿಗೆ ಮುಂದಾಗುವ ಭೀತಿ ಮೂಡಿದೆ ಎನ್ನುತ್ತಾರೆ ರೈತ ನಾಗಪ್ಪ.

ಕೃಷಿ ಕಾರ್ಮಿಕರ ಸಮಸ್ಯೆಯಿಂದ ಬಸವಳಿದ ರೈತರು ಒಕ್ಕಲುತನಕ್ಕೆ ಗುಡ್‌ಬೈ ಹೇಳಿ ಆಧುನಿಕ ಕೃಷಿ ಯಂತ್ರಗಳಾದ ಟ್ರ್ಯಾಕ್ಟರ್ ಖರೀದಿಸಿದರು. ಬತ್ತ ನಾಟಿ ಮಾಡಿ ಕೈಸುಟ್ಟುಕೊಂಡರು. ದುಬಾರಿ ಬೆಲೆಯ ರಸಗೊಬ್ಬರ ಖರೀದಿಸಿ ಮಗುವಿನಂತೆ ಜೋಪಾನ ಮಾಡಿದ ಬೆಳೆ ಕೈಗೆ ಬಂದಾಗ ಧಾರಣೆ ಕುಸಿತದ ಬಿಸಿಯಿಂದ ನಲುಗಿದರು. ಅಲ್ಲದೆ ಚಿನ್ನದ ಬೆಲೆಯಂತೆ ಏರುಮುಖದಲ್ಲಿರುವ ಡಿಸೇಲ್ ಬೆಲೆ ಯಿಂದ ಕಂಗಾಲಾಗಿ ಸಾಕಪ್ಪ ಸಾಕು ಟ್ರ್ಯಾಕ್ಟರ್ ಬಳಕೆ ಹಾಗೂ ಖರೀದಿ ಎನ್ನುವಂತಾಗಿದೆ ನಮ್ಮ ಸ್ಥಿತಿ ಎನ್ನುತ್ತಾರೆ ರೈತ ಶಿವಲಿಂಗಪ್ಪ.

ಅನಾವಶ್ಯಕವಾಗಿ ಸಣ್ಣ ರೈತರು ಟ್ರ್ಯಾಕ್ಟರ್ ಖರೀದಿಸಿ ಬಾಡಿಗೆ ಕೆಲಸದಿಂದ ಕೈ ತುಂಬಾ ಕೆಲಸ ಸಿಗುತ್ತದೆ ಎನ್ನುವುದಕ್ಕೆ ತಣೀರು ಎರಚಿದಂತೆ ಆಗಿದೆ. ಕಚ್ಚಾ ಸಾಮಗ್ರಿಗಳ ಸರಬರಾಜು ಮಾಡುವ ಸಲುವಾಗಿ ಗುತ್ತಿಗೆದಾರರು ಬಾಡಿಗೆ ಪಡೆದುಕೊಳ್ಳುತ್ತಿದ್ದರು. ಸಮರ್ಪಕವಾಗಿ ಯೋಜನೆ ಹಣ ಬಿಡುಗಡೆಯಾಗದ ಕಾರಣ ಟ್ರ್ಯಾಕ್ಟರ್  ಬಾಡಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ಮನೆಯ ಮುಂದೆ ನಿಲ್ಲಿಸಿದ್ದೇವೆ ಎನ್ನುತ್ತಾರೆ ಟ್ರ್ಯಾಕ್ಟರ್ ಮಾಲಕ ಯಲ್ಲಪ್ಪ.

ಮರಳು (ಉಸುಕು) ದಂಡ:
ಮರಳು ಮಾಫಿಯಾದ ರುಚಿಕಂಡ ಕೆಲ ರೈತರು ನದಿ, ಹಾಗೂ ಹಳ್ಳದ ತಟದಲ್ಲಿನ ಮರಳು ತುಂಬಿಕೊಂಡು ಪಟ್ಟಣದ ಪ್ರದೇಶಕ್ಕೆ ಮಾರಾಟ ಮಾಡಿ ಒಂದಿಷ್ಟು ಲಾಭ ಪಡೆಯುವಷ್ಟರಲ್ಲಿ ನಿದ್ದೆಯಿಂದ ಆಗಾಗ ಎಚ್ಚರಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿ ಎಚ್ಚೆತ್ತು. ಪರವಾನಿಗೆ ಇಲ್ಲದೆ ಹಾಗೂ ರಾಜಸ್ವ ಭರಿಸಿಲ್ಲವೆಂದು ಅನಧಿಕೃತ ಮರಳು ಸಾಕಾಣಿಕೆ ತಡೆಗೆ ಸಾವಿರಾರು ರೂಪಾಯಿ ದಂಡ ವಿಧಿಸಿದ್ದಾರೆ. ಇದರಿಂದ ಮರಳು ಮಾರಾಟ ದಂಧೆಗೂ ಬ್ರೇಕ್ ಹಾಕಿದಂತೆ ಆಗಿದೆ.

ಒಟ್ಟಿನಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಿದ ರೈತರ ಪಾಡು ಹೇಳ ತೀರದಾಗಿದೆ. ಮುಂದೇನು ಎಂಬ ಚಿಂತೆ ಆವರಿಸಿದೆ. 
              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.