ADVERTISEMENT

ನಮ್ಮ ಹೊಲ ನಮಗ ಕೊಡಿಸಿ ಬಿಡ್ರಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:15 IST
Last Updated 13 ಸೆಪ್ಟೆಂಬರ್ 2011, 9:15 IST

ಯಾದಗಿರಿ: “ಐದ ವರ್ಷದ ಹಿಂದ 60 ಸಾವಿರ ರೂಪಾಯಿಗೆ ಎಕರೆದ್ಹಂಗ ಹೊಲಾ ಕೊಟ್ಟಿವ್ರಿ. 2006 ರಾಗ ಹೊಲ ತೊಗೊಂಡ ಹೋದಾವ್ರ, ಈಗ ಫ್ಯಾಕ್ಟರಿ ಚಾಲೂ ಮಾಡ್ತೇವಿ ಅಂತ ಬಂದಾರ. ಇಲ್ಲಿಗಂಟಾ ಏನ ಆಗೈತಿ ಅನ್ನೋದ ತಿಳಿದ್ಹಂಗ ಆಗಿತ್ತು. ಇನ್ನ ಮ್ಯಾಲರೇ ಫ್ಯಾಕ್ಟರಿ ಚಾಲೂ ಮಾಡ್ತಾರ ಅನ್ನೋ ವಿಶ್ವಾಸ ನಮಗಿಲ್ಲ. ನಿಮ್ಮ ಫ್ಯಾಕ್ಟರಿನೂ ಬ್ಯಾಡ, ನಿಮ್ಮ ನೌಕರಿನೂ ಬ್ಯಾಡ. ನಮ್ಮ ಹೊಲ ನಮಗ ಕೊಡಿಸಿ ಬಿಡ್ರಿ”
ತಾಲ್ಲೂಕಿನ ಮುಷ್ಠೂರಿನಲ್ಲಿ ಆರಂಭವಾಗುತ್ತಿರುವ ಕೀರ್ತಿ ಸಕ್ಕರೆ ಕಾರ್ಖಾನೆಗೆ ಜಮೀನು ನೀಡಿದ ರೈತರು, ಸೋಮವಾರ ನಡೆದ ಪರಿಸರ ಕುರಿತಾದ ಸಾರ್ವಜನಿಕ ಸಭೆಯಲ್ಲಿ ಒತ್ತಾಯಿಸಿದ ಪರಿ ಇದು.

ಸಭೆಯಲ್ಲಿ ಮಾತನಾಡಿದ ಬಹುತೇಕ ರೈತರು, ಮಹಿಳೆಯರು, ತಮ್ಮ ಜಮೀನನ್ನು ವಾಪಸ್ ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ತಮ್ಮ ತಂದೆ, ಗಂಡೆ ತಿಳಿಯದೇ ಜಮೀನು ಮಾರಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು, ತಾವೇ ಜಮೀನು ಕೊಟ್ಟು ತಪ್ಪು ಮಾಡಿದ್ದು, ಹೊಲವನ್ನು ಮರಳಿ ಕೊಡಿಸಿ ಎಂದು ಆಗ್ರಹಿಸಿದರು.

ಸಾಬರೆಡ್ಡಿ ಮಾತನಾಡಿ, 2006 ರಿಂದ ಇಲ್ಲಿಯವರೆಗೆ ಕಾರ್ಖಾನೆ ಆರಂಭವಾಗಲಿಲ್ಲ. ಈಗಲೂ ಆರಂಭವಾಗುತ್ತದೆ ಎನ್ನುವ ವಿಶ್ವಾಸ ರೈತರಲ್ಲಿ ಇಲ್ಲ. ಹಾಗಾಗಿ ಜಮೀನು ಕೊಡಿಸಿದರೆ, ಅದರಲ್ಲಿಯೇ ಕೃಷಿ ಚಟುವಟಿಕೆ ಮಾಡಿಕೊಂಡು ಇರುತ್ತೇವೆ ಎಂದರು.

ಯುವಕ ನಿಂಗಪ್ಪ ಮಾತನಾಡಿ, ನಮ್ಮ ತಂದೆ ಅನಕ್ಷರಸ್ಥರು, ಅವರಿಗೆ ಏನೇನೋ ಹೇಳಿ ಕಡಿಮೆ ಬೆಲೆಯಲ್ಲಿ ಹೊಲ ಖರೀದಿ ಮಾಡಲಾಗಿದೆ. ಕಾರ್ಖಾನೆ ವಿಳಂಬವಾಗುತ್ತಿರುವ ಬಗ್ಗೆ ಯಾವ ರೈತರಿಗೂ ಕಂಪೆನಿಯವರು ತಿಳಿಸಿಲ್ಲ. ಇದರಿಂದ ರೈತರಲ್ಲಿ ಹತಾಶೆ ಮೂಡಿದೆ. ಕೂಡಲೇ ನಮ್ಮ ಜಮೀನು ಮರಳಿ ಕೊಡಿಸಿ ಎಂದು ಒತ್ತಾಯಿಸಿದರು.

ಮಹಿಳೆಯರಾದ ಮರೆಮ್ಮ, ಶಂಕ್ರಮ್ಮ, ಜಂಗಿಮಾಳಮ್ಮ ಮುಂತಾದವರು ಮಾತನಾಡಿ, ಇದ್ದ ಒಂದೆರಡು ಎಕರೆ ಹೊಲವನ್ನು ಫ್ಯಾಕ್ಟರಿಗೆ ಮಾರಿ ಕಂಗಾಲಾಗಿದ್ದೇವೆ. ಮನೆಯಲ್ಲಿನ ಮಕ್ಕಳು ಬೆಂಗಳೂರು, ಹೈದರಾಬಾದ್, ಮತ್ತಿತರ ಊರುಗಳಿಗೆ ದುಡಿಯಲು ಹೋಗಿದ್ದಾರೆ. ಈಗ ಒಂದು ಹೊತ್ತಿನ ಊಟಕ್ಕೆ ತೊಂದರೆ ಅನುಭವಿಸುವಂತಾಗಿದೆ. ಹೊಲವನ್ನು ಕೊಡಿಸಿದರೆ, ಅದರಲ್ಲಿಯೇ ಜೀವನ ಸಾಗಿಸುತ್ತೇವೆ ಎಂದು ಹೇಳಿದರು.

ಮಹಿಳೆಯೊಬ್ಬರು ಆಡಿದ ಮಾತುಗಳು ಸಭೆಯಲ್ಲಿ ಮನಕಲುಕುವಂತಿತ್ತು. “ಇರೋದ ಒಂದ ಎಕರೆ ಹೊಲಾ ಇತ್ರಿ. ನನ್ನ ಗಂಡ ಈ ಫ್ಯಾಕ್ಟರಿಗೆ ಹೊಲಾ ಕೊಟ್ಟಿದ್ದ. ಈಗ ಕುಡಿದ ಸತ್ತ ಹೋಗ್ಯಾನು. ನನ್ನ ಪದರಾಗ ನಾಕ ಮಕ್ಳ ಅದಾವು. ಹೇಂಗ ಜೀವನಾ ಮಾಡೋದ್ರಿ. ನಮ್ಮ ಹೊಲಾ ಕೊಟ್ಟ ಬಿಡ್ರಿ” ಎನ್ನುವ ಮೂಲಕ ತಮ್ಮ ಸಂಕಷ್ಟವನ್ನು ತೋಡಿಕೊಂಡರು.

ತಾಲ್ಲೂಕು ಪಂಚಾಯಿತಿ ಸದಸ್ಯ ಹಣಮಂತ ಲಿಂಗೇರಿ, ಇಂತಹ ಕಾರ್ಖಾನೆಗಳಿಗೆ ಜಮೀನು ಖರೀದಿಸುವ ಪ್ರಕ್ರಿಯೆಯಲ್ಲಿ ಸರ್ಕಾರವೇ ಮಧ್ಯ ಪ್ರವೇಶ ಮಾಡಬೇಕು. ಆದರೆ ಇಲ್ಲಿ ಕಾರ್ಖಾನೆಯವರೇ ನೇರವಾಗಿ ರೈತರಿಂದ ಹೊಲ ಖರೀದಿ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಸೇರಿದ ಬಹುತೇಕ ರೈತರು, ತಮ್ಮಲ್ಲಿದ್ದ ಒಂದೆರಡು ಎಕರೆಯನ್ನೂ ಕಾರ್ಖಾನೆಗೆ ನೀಡಿದ್ದಾರೆ. ಅವರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಮಾತನಾಡಿದ ಎನ್ವಿರಾನ್‌ಮೆಂಟಲ್ ಆಂಡ್ ಪಾವರ್ ಟೆಕ್ನಾಲಾಜೀಸ್ ಲಿಮಿಟೆಡ್‌ನ ಅಧ್ಯಕ್ಷ ಕ್ಯಾ. ಎಸ್. ರಾಜಾರಾವ್, ಕೀರ್ತಿ ಸಕ್ಕರೆ ಕಾರ್ಖಾನೆಯೂ ಇಲ್ಲಿಯ ಪರಿಸರಕ್ಕೆ ತೊಂದರೆ ಆಗದೇ ಇರುವ ರೀತಿಯಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲಿದೆ. 13.1 ಹೆಕ್ಟೇರ್ ಪ್ರದೇಶದಲ್ಲಿ ಹಸಿರು ಪಟ್ಟಿ ನಿರ್ಮಿಸಲಾಗುವುದು. ಹೊರಗಿನಿಂದ ಕಾರ್ಖಾನೆ ಕಾಣದಷ್ಟು ಹಸಿರು ಗಿಡಗಳನ್ನು ಬೆಳೆಸಲಾಗುವುದು ಎಂದು ತಿಳಿಸಿದರು.

ನಿತ್ಯ 3,500 ಟನ್ ಕಬ್ಬು ಅರೆಯುವ ಹಾಗೂ 20 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಈ ಕಾರ್ಖಾನೆಯಿಂದ 17,731 ಟನ್ ಬೂದಿ ಉತ್ಪಾದನೆ ಆಗಲಿದ್ದು, ಅದನ್ನು ಸಿಮೆಂಟ್ ಕಾರ್ಖಾನೆ, ಅಥವಾ ಇಟ್ಟಿಗೆ ತಯಾರಿಗೆ ಬಳಕೆ ಮಾಡಲಾಗುತ್ತದೆ. ಕಬ್ಬಿನ ಸಿಪ್ಪೆಯನ್ನು ಜೈವಿಕ ಗೊಬ್ಬರವಾಗಿ ತಯಾರಿಸಲು ಬಳಸಲಾಗುತ್ತದೆ. ನಿತ್ಯ 401 ವಾಹನಗಳು ಓಡಾಡಲಿದ್ದು, ಇದರಿಂದ ರಸ್ತೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ವಿವರಿಸಿದರು.

ಈ ಹಂತದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ನಿಮ್ಮ ಫ್ಯಾಕ್ಟರಿಯೂ ಬೇಡ. ನೌಕರಿಯೂ ಬೇಡ. ನಮ್ಮ ಹೊಲವನ್ನು ನಮಗೆ ಕೊಡಿಸಿ ಎಂದು ಗಲಾಟೆ ಆರಂಭಿಸಿದರು. ಕೆಲ ಸಂಘಟನೆಗಳ ಮುಖಂಡರು, ರೈತ ಮುಖಂಡರು ರೈತರ ಮನವೊಲಿಕೆಗೆ ಮುಂದಾದರು. ಕೊನೆಗೆ ಸಹಾಯಕ ಆಯುಕ್ತೆ ಕವಿತಾ ಮನ್ನಿಕೇರಿ ಅವರೇ ರೈತರನ್ನು ಸಮಾಧಾನ ಪಡಿಸುವಲ್ಲಿ ಯಶಸ್ವಿಯಾದರು.

ಪರಿಸರ ಅಧಿಕಾರಿ ಸಿ.ಎಂ. ಸತೀಶ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ವೆಂಕಟೇಶ ವೇದಿಕೆಯಲ್ಲಿದ್ದರು.

`ಜಮೀನು ವಾಪಸ್ ಕೊಡಿಸುವುದು ಕಷ್ಟ~
ಯಾದಗಿರಿ: ಮುಷ್ಠೂರಿನಲ್ಲಿ ಕೀರ್ತಿ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ಸಂಬಂಧಿಸಿದ ಪ್ರಕ್ರಿಯೆ ಇದೀಗ ಸರ್ಕಾರದ ಮಟ್ಟದಲ್ಲಿದ್ದು, ಈ ಹಂತದಲ್ಲಿ ಭೂಮಿಯನ್ನು ವಾಪಸ್ ಕೊಡಿಸುವುದು ಜಿಲ್ಲಾಡಳಿತಕ್ಕೆ ಕಷ್ಟದ ಕೆಲಸ. ಈ ಸಭೆಯಲ್ಲಿ ವ್ಯಕ್ತವಾದ ಜನರ ಅಭಿಪ್ರಾಯಗಳನ್ನು ಕ್ರೋಡಿಕರಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರನೀತ್ ತೇಜ್ ಮೆನನ್ ತಿಳಿಸಿದರು.

ಗುಲ್ಬರ್ಗ ಜಿಲ್ಲಾಧಿಕಾರಿಗಳು, ಸರ್ಕಾರದಿಂದ ಈಗಾಗಲೇ ಕಾರ್ಖಾನೆಯವರು ಅನುಮತಿ ಪಡೆದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಜಮೀನು ಹಸ್ತಾಂತರಕ್ಕೆ ಜಿಲ್ಲಾಡಳಿತವೂ ಪರವಾನಿಗೆ ನೀಡಿದೆ. ಇಲ್ಲಿ ಅಭಿಪ್ರಾಯ ಮಂಡಿಸಿದ ಬಹುತೇಕ ರೈತರು, ತಮ್ಮ ಸ್ವಇಚ್ಛೆಯಿಂದ ಜಮೀನು ನೀಡಿರುವುದು ಸ್ಪಷ್ಟವಾಗುತ್ತದೆ. ಇಂತಹ ಜಮೀನನ್ನು ಮತ್ತೆ ಮರಳಿ ಕೊಡಿಸುವುದು ಸುಲಭದ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದರು.

29 ಕುಟುಂಬಗಳ 58 ಜನರು ಸ್ವಂತ ಜಮೀನನ್ನು ಕಾರ್ಖಾನೆಗೆ ನೀಡಿದ್ದಾರೆ. ಎಲ್ಲರ ಬಳಿಯೂ ಹೊಲವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಜಮೀನು ಮಾರಿದವರು ಬೇರೆಡೆ ಹೊಲ ಖರೀದಿಸಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಯಾರ ಬಳಿ ಜಮೀನು ಇಲ್ಲವೋ ಅಂಥವರ ಬಗ್ಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು.

ಜಮೀನು ಪಡೆದು 6 ವರ್ಷವಾದರೂ ಕಾರ್ಖಾನೆ ಆರಂಭಿಸದೇ ಇರುವುದು ಆಕ್ಷೇಪಣೆಗೆ ಅರ್ಹವಾದ ವಿಷಯ. ಈ ಬಗ್ಗೆ ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.