ADVERTISEMENT

ನಿರ್ವಹಣೆ ಕೊರತೆ: ನೀರು ಪೋಲು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 10:36 IST
Last Updated 19 ಜೂನ್ 2013, 10:36 IST

ಕೆಂಭಾವಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಉಪಕಾಲುವೆ ಸಂಪೂರ್ಣ ಹದಗೆಟ್ಟಿದ್ದು, ಉಪಯೋಗಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿತ್ಯ ಸಾವಿರಾರು ಕ್ಯೂಸೆಕ್ ನೀರು ಪೋಲಾಗುತ್ತಿದೆ. 

ಸರ್ಕಾರ ಕಳೆದ ವರ್ಷ ನಾರಾಯಣಪುರ ಎಡದಂಡೆ 26 ಕಿ.ಮೀ. ಕಾಲುವೆಯನ್ನು ಸುಮಾರು ರೂ. 210 ಕೋಟಿ ಅಂದಾಜು ವೆಚ್ಚದಲ್ಲಿ ನವೀಕರಣಗೊಳಿಸಿತು. ಆದರೆ ಉಪಕಾಲುವೆಗಳು ಮಾತ್ರ 30 ವರ್ಷಗಳಿಂದ ನವೀಕರಣ ಆಗದೇ ಉಳಿದಿವೆ. ಕಳೆದ ಬಾರಿ ಕೇಂದ್ರ ಸರ್ಕಾರ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಇಂಡಿ, ಶಹಾಪುರ, ಜೇವರ್ಗಿ, ಶಾಖಾ ಕಾಲುವೆಗಳು ಸೇರಿದಂತೆ ಎಲ್ಲ ಕಾಲುವೆಗಳ ನವೀಕರಣಕ್ಕಾಗಿ ಸುಮಾರು ರೂ.3 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಕೇಂದ್ರದಿಂದ ಅಧ್ಯಯನ ತಂಡ ಕೂಡ ಕೆಂಭಾವಿಯಲ್ಲಿ 2-3 ತಿಂಗಳು ಬೀಡು ಬಿಟ್ಟು ಕಾಲುವೆಗಳ ಸ್ಥಿತಿ ಅಧ್ಯಯನ ನಡೆಸಿ ಹೋಗಿದ್ದರಿಂದ ಇದೇ ಹಣಕಾಸು ವರ್ಷದಲ್ಲಿ ಕಾಲುವೆಗಳಿಗೆ ನವೀಕರಣ ಭಾಗ್ಯ ದೊರೆಯಲಿದೆ ಎಂದುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ.

ರಾಜ್ಯ ಸರ್ಕಾರ ಪ್ರತಿ ವರ್ಷ ಈ ಕಾಲುವೆಗಳ ವಾರ್ಷಿಕ ನಿರ್ವಹಣೆ ಕಾಮಗಾರಿಗಳಿಗಾಗಿ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತದೆ. ವಾರ್ಷಿಕ ನಿರ್ವಹಣೆ ನೆಪದಲ್ಲಿ ಹಣ ಮಾತ್ರ ಹಾಳಾಗುತ್ತಿದೆ. ಆದರೆ ಉಪಕಾಲುವೆಗಳ ಸ್ಥಿತಿ ಮಾತ್ರ ಇನ್ನಷ್ಟು ಹದಗೆಡುತ್ತದೆಯೇ ಹೊರತು ಅಭಿವೃದ್ಧಿ ಆಗುತ್ತಿಲ್ಲ. ಕಾಲುವೆಗೆ ಮಾರ್ಚ್ ಕೊನೆ ವಾರದಲ್ಲಿ ನೀರು ನಿಲ್ಲಿಸಲಾಗುತ್ತದೆ. ನಂತರ ಕಾಲುವೆಗಳ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗುತ್ತದೆ. ಮೇ, ಜೂನ್ ತಿಂಗಳಲ್ಲಿ ಕೆಲಸ ಪ್ರಾರಂಭಿಸಲಾಗುತ್ತದೆ. ಜುಲ್ಯೆ ತಿಂಗಳಲ್ಲಿ ಕಾಲುವೆಗೆ ನೀರು ಬಿಡುತ್ತಾರೆ ಎಂಬ ನೆಪ ಹೇಳಿ ಗುತ್ತಿಗೆದಾರರು ಅವಸರದಿಂದ ಕೆಲಸ ಮಾಡಿ ಮುಗಿಸಿ ಬಿಡುತ್ತಾರೆ.

“ಬ್ಯಾಸಗಿ ಒಳಗ ಅವಸರದಾಗ ನಾಲಿ ರಿಪೇರಿ ಮಾಡಿ ಬಿಡತ್ತಾರ. ಆದರ ನೀರ ಬಿಟ್ಟ ಮ್ಯೋಲ ಅವು ಒಡೆದ ಹೊಲಾ, ಗದ್ಯಾಗ ನೀರ ಹೊಕ್ಕೊಂಡ ಬಿಡತ್ತಾವ್ರಿ. ಅದಕ್ಕ ಇದಕೊಂದ ಕಾಯಂ ಪರಿಹಾರ ಬೇಕ ನೋಡ್ರಿ” ಎಂದು ರ‌್ಯೆತ ನಾಗಪ್ಪ ತೆಗ್ಗಳ್ಳಿ ಹೇಳುತ್ತಾರೆ.
 
ಕೂಡಲೇ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳ ನವೀಕರಣಕ್ಕಾಗಿ ಹಣ ಬಿಡುಗಡೆ ಮಾಡಬೇಕು. ಕಾಲುವೆಗಳನ್ನು ನವೀಕರಣಗೊಳಿಸಿ, ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ಮಾಡಬೇಕು ಎನ್ನುವುದು ಈ ಭಾಗದ ರೈತರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.