ADVERTISEMENT

ನೀಡಿದ್ದ ಭರವಸೆ ಈಡೇರಿಸಿದ ಸರ್ಕಾರ: ಶಾಸಕ ಮಾಲಕರಡ್ಡಿ

₹198 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಡಾ.ಎ.ಬಿ.ಮಾಲಕರಡ್ಡಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 13:05 IST
Last Updated 23 ಮಾರ್ಚ್ 2018, 13:05 IST

ಯಾದಗಿರಿ:‘ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಗಳಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. ಜನಪರ, ರೈತಪರ ಕಾಳಜಿಯುಳ್ಳ ಸರ್ಕಾರ ನಮ್ಮದು’ ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಹೇಳಿದರು.

ನಗರದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ನಡೆದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೃಷ್ಣಾ ಭಾಗ್ಯ ಜಲ ನಿಗಮ ಸೇರಿದಂತೆ ವಿವಿಧ ಇಲಾಖೆಯ ₹198 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಇಲ್ಲಿಯವರೆಗೆ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕ್ಷೀರ ಭಾಗ್ಯ, ಅನ್ನಭಾಗ್ಯ, ಶಾದಿಭಾಗ್ಯ, ಕೃಷಿಭಾಗ್ಯ ಸೇರಿದಂತೆ ಹಲವು ಯೋಜನೆಗಳು ಬಡ ಜನರಿಗೆ ಉಪಯೋಗವಾಗಿವೆ’ ಎಂದರು.

ADVERTISEMENT

‘ಬಡ ಗರ್ಭಿಣಿಯರು ಅಪೌಷ್ಟಿಕತೆ ಕೊರತೆಯಿಂದ ನರಳಬಾರದು ಎಂಬ ಉದ್ದೇಶದಿಂದ ಮಾತೃಪೂರ್ಣ ಯೋಜನೆ ಜಾರಿಗೆ ತಂದಿದ್ದು, ಇದು ಗರ್ಭಿಣಿಯರಿಗೆ ವರದಾನವಾಗಿದೆ. ಯಾದಗಿರಿ ಮತಕ್ಷೇತ್ರದಲ್ಲಿ ಎರಡು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ರೈತಾಪಿ ಜನರಿಗೆ ಕುಡಿಯುವ ನೀರು ಹಾಗೂ ಜಮೀನುಗಳಿಗೆ ಉಪಯೋಗವಾಗಿದೆ’ ಎಂದು ಹೇಳಿದರು.

‘ಕಳೆದ ಒಂದೂವರೆ ವರ್ಷದಿಂದ ಯಾದಗಿರಿ ಮತಕ್ಷೇತ್ರ ವ್ಯಾಪ್ತಿಯ ಯಾದಗಿರಿಯಲ್ಲಿ ₹30 ಕೋಟಿ, ಶಹಾಪುರ ತಾಲ್ಲೂಕಿನ ಹಳ್ಳಿಗಳಲ್ಲಿ ₹36 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ₹58 ಕೋಟಿ ವೆಚ್ಚದ ಕಾಮಗಾರಿಗಳು ಸೇರಿದಂತೆ ಒಟ್ಟು ₹198 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.

ಬೀದರ್–ಕಲಬುರ್ಗಿ –ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಮರಡ್ಡಿ ತಂಗಡಗಿ, ನಗರಸಭೆ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ವಕ್ಫ್ ಮಂಡಳಿ ಅಧ್ಯಕ್ಷ ಜಿಲಾನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಷು ರಾಠೋಡ, ಬೀದರ, ಕಲಬುರ್ಗಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಲಕೇರಾ, ಸುಭಾಷ್ ಕರಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.