ಯಾದಗಿರಿ: ಕೃಷ್ಣಾ-ಭೀಮೆಯರ ನಾಡಿನಲ್ಲಿ ನೀರಿಗೆ ಹಾಹಾಕಾರ ಮಾತ್ರ ತಪ್ಪಿಲ್ಲ. ನೀರು ಕುಡಿಸಲು ಸರ್ಕಾರ ಕೋಟ್ಯಂತರ ಖರ್ಚು ಮಾಡಿ ಯೋಜನೆಗಳನ್ನು ರೂಪಿಸಿದ್ದರೂ, ರೈಲ್ವೆ ಇಲಾಖೆಯ ತಾಂತ್ರಿಕ ಅನುಮತಿಗಾಗಿ ಕಾದು ಕುಳಿತುಕೊಳ್ಳುವಂತಾಗಿದೆ.
ಜಿಲ್ಲೆಯ ಯಾದಗಿರಿ ತಾಲ್ಲೂಕಿನಲ್ಲಿ ನೀರಿಗೆ ಜನರು ಪರದಾಡುವುದು ತಪ್ಪಿಲ್ಲ. ತಾಲ್ಲೂಕಿನ ಯರಗೋಳ, ಆನೂರ ಕೆ, ಗೊಂದಡಗಿ ಗ್ರಾಮಗಳ ಬಳಿ ರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆಯಡಿ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕಾಮಗಾರಿ ಆರಂಭಿಸಲಾಯಿತು. ಈ ಎಲ್ಲ ಯೋಜನೆಗಳ ಸಿವಿಲ್ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ರೈಲು ಹಳಿಗಳ ಕೆಳಗೆ ಪೈಪ್‌ಲೈನ್ ಹಾಕುವ ಕೆಲಸ ಮಾತ್ರ ಬಾಕಿ ಉಳಿದಿದೆ. ಆದರೆ, ರೈಲ್ವೆ ಇಲಾಖೆಯಿಂದ ಮಾತ್ರ ಇದುವರೆಗೆ ಅನುಮತಿ ದೊರೆಯುತ್ತಿಲ್ಲ. ಇಷ್ಟೊಂದು ಸಣ್ಣ ಕೆಲಸಕ್ಕಾಗಿ ಇಡೀ ಯೋಜನೆಯೇ ಸ್ಥಗಿತಗೊಳ್ಳುವಂತಾಗಿದೆ.
ಆನೂರ ಕೆ, ಯರಗೋಳ ಹಾಗೂ ಗೊಂದಡಗಿ ಗ್ರಾಮಗಳ ಬಳಿ ಕೋಟ್ಯಂತರ ಹಣ ಖರ್ಚು ಮಾಡಿ, ನೀರಿನ ಟ್ಯಾಂಕ್, ಗ್ರಾಮಗಳಿಗೆ ಪೈಪ್‌ಲೈನ್ ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇವಲ ರೈಲು ಹಳಿಗಳ ಕೆಳಗೆ ಪೈಪ್‌ಲೈನ್ ಅಳವಡಿಸಲು ರೈಲ್ವೆ ಇಲಾಖೆಯ ಅನುಮತಿ ಪಡೆಯುವುದೇ ಬಹುದೊಡ್ಡ ಕೆಲಸವಾಗಿ ಪರಿಣಮಿಸಿದೆ.
ಹಣ ಪಾವತಿ: ರೈಲು ಹಳಿಗಳ ಕೆಳಗೆ ಪೈಪ್‌ಲೈನ್ ಅಳವಡಿಸಲು ರೈಲ್ವೆ ಇಲಾಖೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಠೇವಣಿಯನ್ನೂ ಇಡಲಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆಯೇ ರೂ 1.34 ಕೋಟಿ ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಿದ್ದು, ಪೈಪ್‌ಲೈನ್ ಅಳವಡಿಸಲು ಅನುಮತಿ ನೀಡುವಂತೆ ಅಧಿಕಾರಿಗಳು ಪದೇ ಪದೇ ಮನವಿ ಮಾಡುತ್ತಲೇ ಇದ್ದಾರೆ.
ಆದರೆ, ರೈಲ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆಯೇ ಹೊರತು, ಅವುಗಳಿಗೆ ಮಂಜೂರಾತಿ ನೀಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಸುಮಾರು 40 ಹಳ್ಳಿಗಳ ರೈತರು ಈಗಲೂ ನೀರಿಗಾಗಿ ಪರಿತಪಿಸುವಂತಾಗಿದೆ.
ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ಅಧಿಕಾರಿಗಳು, ವಿಭಾಗೀಯ ಮಹಾಪ್ರಬಂಧಕರಿಗೆ ಜಿಲ್ಲಾಧಿಕಾರಿಗಳೂ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವೂ, ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಮನವಿ ಕೂಡ ಮಾಡಿತ್ತು. ಇಷ್ಟೆಲ್ಲ ಆದರೂ ರೈಲ್ವೆ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ರಾಜ್ಯ ಸರ್ಕಾರದ ಕೋಟ್ಯಂತರ ಹಣ, ರೈಲ್ವೆ ಇಲಾಖೆ ಕಟ್ಟಿರುವ ಠೇವಣಿ ಹಣಗಳೆಲ್ಲವೂ ವ್ಯರ್ಥವಾಗುತ್ತಿವೆ ಎನ್ನುವುದು ಜನರ ಆಕ್ರೋಶ.
ಪ್ರತಿ ಸಭೆಯಲ್ಲೂ ಅದೇ ಮಾಹಿತಿ: ಕಳೆದ ಎರಡೂವರೆ ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ, ತ್ರೈಮಾಸಿಕ ಕೆಡಿಪಿ ಸಭೆಗಳಲ್ಲಿ ತಪ್ಪದೇ ಈ ವಿಷಯ ಪ್ರಸ್ತಾಪವಾಗುತ್ತದೆ. ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಅಧಿಕಾರಿಗಳು ರೈಲ್ವೆ ಅನುಮತಿ ವಿಷಯ ಹೇಳುತ್ತಾರೆ.
ಕೇವಲ ಸಭೆಗಳಲ್ಲಿನ ಚರ್ಚೆಗೆ ಸೀಮಿತವಾಗುವ ಈ ವಿಷಯ ಪರಿಹಾರ ಆಗುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ, ಅಧಿಕಾರಿಗಳು ರೈಲ್ವೆ ಇಲಾಖೆಯತ್ತ ಬೊಟ್ಟು ಮಾಡುತ್ತಲೇ ಹೊರಟಿದ್ದು, ತಾಲ್ಲೂಕಿನ ಜನರಿಗೆ ಮಾತ್ರ ನೀರು ಕುಡಿಸುವುದು ಸಾಧ್ಯವಾಗುತ್ತಿಲ್ಲ.
ಖರ್ಗೆ ಕಾಳಜಿ ಬೇಕು: ಜಿಲ್ಲೆಯ ಗುರುಮಠಕಲ್ ಕ್ಷೇತ್ರದಿಂದಲೇ ರಾಜಕೀಯ ಉತ್ತುಂಗಕ್ಕೆ ಏರಿರುವ ಮಲ್ಲಿಕಾರ್ಜುನ ಖರ್ಗೆ, ಸದ್ಯಕ್ಕೆ ರೈಲ್ವೆ ಖಾತೆಯ ಸಚಿವರಾಗಿದ್ದಾರೆ. ಜಿಲ್ಲೆಗೆ ಈಗಾಗಲೇ ಹಲವಾರು ಯೋಜನೆಗಳನ್ನು ತಂದಿರುವ ಖರ್ಗೆ, ಕುಡಿಯುವ ನೀರಿನ ವಿಷಯದಲ್ಲೂ ವಿಶೇಷ ಕಾಳಜಿ ತೋರಬೇಕು ಎನ್ನುವುದು ಜಿಲ್ಲೆಯ ಜನರ ಒತ್ತಾಯ.
`ಯಾದಗಿರಿ ತಾಲ್ಲೂಕಿನ ಮೂರು ಯೋಜನೆಗಳು ಪೂರ್ಣಗೊಂಡರೆ, ಸುಮಾರು 40 ಗ್ರಾಮಗಳ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಹುದಾಗಿದೆ. ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದರೂ, ರೈಲ್ವೆ ಅಧಿಕಾರಿಗಳ ಮೊಂಡುತನದಿಂದಾಗಿ ಯೋಜನೆಯ ಲಾಭ ಜನರಿಗೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿಯೇ ರೈಲ್ವೆ ಸಚಿವರಾಗಿ ಖರ್ಗೆ ಅಧಿಕಾರ ವಹಿಸಿಕೊಂಡಿದ್ದು, ಈಗಲಾದರೂ ಜಿಲ್ಲೆಯ ನೀರಿನ ಸಮಸ್ಯೆ ಪರಿಹರಿಸಲು ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಕೂಡಲೇ ಯೋಜನೆಗೆ ಅಗತ್ಯವಾಗಿರುವ ರೈಲ್ವೆ ಇಲಾಖೆಯ ಅನುಮತಿ ಒದಗಿಸಬೇಕು' ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ದೇವರಾಜ ನಾಯಕ ಮನವಿ ಮಾಡುತ್ತಾರೆ.
ಇದು ಕೇವಲ ಒಂದೆರಡು ಹಳ್ಳಿಗಳ ಸಮಸ್ಯೆ ಆಗಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು. ಆದರೆ ಸಿವಿಲ್ ಕಾಮಗಾರಿ ಮುಗಿದಿದ್ದು, ಕೇವಲ ರೈಲ್ವೆ ಹಳಿಗಳ ಕೆಳಗೆ ಪೈಪ್‌ಲೈನ್ ಅಳವಡಿಸುವುದು ಬಾಕಿ ಇದೆ. ಇದಕ್ಕಾಗಿಯೇ ಮೂರು ವರ್ಷಗಳಿಂದ ಯೋಜನೆ ಆರಂಭವಾಗದೇ ಉಳಿಯುವಂತಾಗಿದೆ. ಜಿಲ್ಲೆಯ ಬಗ್ಗೆ ಖರ್ಗೆ ಅವರಿಗೆ ಸಾಕಷ್ಟು ಮುತುವರ್ಜಿ ಇದ್ದು, ಈ ವಿಷಯದಲ್ಲೂ ಅದನ್ನು ತೋರ್ಪಡಿಸಬೇಕು ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.