ADVERTISEMENT

ಪ್ರಥಮ ಸ್ವಾತಂತ್ರ್ಯ ಸಂಗ್ರಾಮ: ಸುರುಪುರ ವಿಜಯೋತ್ಸವ ಫೆ.8ರಂದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 11:40 IST
Last Updated 6 ಫೆಬ್ರುವರಿ 2013, 11:40 IST

ಯಾದಗಿರಿ 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸುರಪುರ ಅರಸರು ಆಂಗ್ಲರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಸವಿ ನೆನಪಿಗಾಗಿ ಫೆ.8ರಂದು ಬೆಳಗ್ಗೆ 10 ಗಂಟೆಗೆ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸುರಪುರ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಭಾಸ್ಕರರಾವ್ ಮೂಡಬೂಳ ತಿಳಿಸಿದರು.

ಇಲ್ಲಿಯ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲೂ ನಡೆದಿದೆ. ಸುರಪುರ ದೊರೆಗಳು ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ್ದಾರೆ.

ಆದರೆ ಸುರಪುರ ದೊರೆಗಳ ಬಗ್ಗೆ ಇತಿಹಾಸದಿಂದ ಅಪಚಾರವಾಗಿದೆ. ಸುರಪುರ ಇತಿಹಾಸವನ್ನು ಮುಚ್ಚಿಡಲಾಗಿದೆ. ಸ್ವಾತಂತ್ರ್ಯಾ ನಂತರವೂ ಇದು ಮುಂದುವರಿದಿದೆ. ಆದರೆ ಸುರಪುರ ದೊರೆಗಳು ಬ್ರಿಟಿಷರ ವಿರುದ್ಧ ಹೋರಾಡಿ ಗೆದ್ದ ಬಗ್ಗೆ ಅನೇಕ ಪುರಾವೆಗಳಿವೆ.

ADVERTISEMENT

ಈ ಬಗ್ಗೆ ಯುವ ಜನಾಂಗಕ್ಕೆ ತಿಳಿಸುವ ನಿಟ್ಟಿನಲ್ಲಿ 6 ವರ್ಳಿಂದ ಸುರಪುರ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

155 ವಷ9ಗಳ ಹಿಂದೆ ನಡೆದ ಪ್ರಥಮ ಸ್ವಾತಂತ್ಯ್ತ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸುರಪುರ ಸಂಸ್ಥಾನದ ಸೈನಿಕರು ಆಂಗ್ಲರನ್ನು ಸದೆಬಡಿದರು. 5 ಫೆ.1858ರಂದು ಬ್ರಿಟಿಷ್ ಸೇನಾನಿ ನ್ಯೂಬೆರಿಯನ್ನು ಕೊಂದು ವಿಜಯದ ಕೇಕೆ ಹಾಕಿದ ಸ್ಥಳ ಸುರಪುರ ತಾಲೂಕಿನ ರುಕ್ಮಾಪುರ ಎಂಬ ಗ್ರಾಮ. ಅಲ್ಲಿಯೇ ನ್ಯೂಬೆರಿ ಸಮಾಧಿ ಇದೆ.

ಸ್ವಾತಂತ್ರ್ಯದ ಕ್ರಾಂತಿಯನ್ನು ಕರ್ನಾಟಕದಲ್ಲಿ ಸಾಕಾರಗೊಳಿಸಿದ ಎಲ್ಲಾ ಸೇನಾನಿಗಳ ಬಲಿದಾನವನ್ನು ಗೌರವಿಸುವ ಸಲುವಾಗಿ ಮತ್ತು ಪ್ರಥಮ ಸ್ವಾತಂತ್ರ್ಯ ಯುದ್ಧದ ವಿಜಯದ ನೆನಪಿಗಾಗಿ 6ನೇ ವರ್ಷದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಹಾನ್ ಬಲಿದಾನಿ ಭೀಮರಾವ ಮುಂಡರಗಿ ಅವರ ವಂಶಸ್ಥರಾದ ವೆಂಕಟರಾವ ಲಕ್ಷ್ಮಣರಾವ ನಾಡಗೌಡ, ಹುತಾತ್ಮ ಯೋಧರಾದ ಕವಡಿಮಟ್ಟಿಯ ಶರಣಬಸವ ಕೆಂಗೂರಿ ಅವರ ತಾಯಿ ಮಲ್ಲಮ್ಮ, ಸಗರ ಗ್ರಾಮದ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳ ಅವರ ಪತ್ನಿ ಗಂಗಾದೇವಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಫೆ.8ರಂದು ಮೆರವಣಿಗೆ ನಡೆಯಲಿದ್ದು, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಚಾಲನೆ ನೀಡಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಸುರಪುರ ಸಂಸ್ಥಾನದ ರಾಜಾ ವೆಂಕಟಪ್ಪ ನಾಯಕ ತಾತಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈಶಾನ್ಯ ವಲಯ ಐಜಿಪಿ ಮಹ್ಮದ್ ವಜೀರ ಅಹ್ಮದ್, ಇತಿಹಾಸ ಸಂಶೋಧಕ ಕಷ್ಣ ಕೋಲಾರ, ಬಳ್ಳಾರಿ ಕೃಷ್ಣದೇವರಾಯ ವಿವಿ ಕುಲಸಚಿವ ಡಾ.ರಂಗರಾಜ ವನದುರ್ಗ, ಗಂಗಾಧರ ಆವಂತಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಕಷ್ಣಾ ಸುಬೇದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.