ADVERTISEMENT

ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದದ ಶಂಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 8:35 IST
Last Updated 6 ಜೂನ್ 2011, 8:35 IST

ಯಾದಗಿರಿ: ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿರುವ ಬಗ್ಗೆ ಜನರಲ್ಲಿ ಶಂಕೆ ವ್ಯಕ್ತವಾಗುತ್ತಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ. ಶಕೀಲ್ ನವಾಜ್ ಹೇಳಿದರು.

ನಗರದ ಮಿಲನ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವೂ 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್, ಆದರ್ಶ ಹೌಸಿಂಗ್ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಳುಗಿದೆ. ಇತ್ತ ರಾಜ್ಯದ ಬಿಜೆಪಿ ಸರ್ಕಾರವೂ ಭ್ರಷ್ಟಾಚಾರ, ಭೂಹಗರಣ, ಅಕ್ರಮ ಗಣಿಗಾರಿಕೆ, ಸ್ವಜನ ಪಕ್ಷಪಾತಗಳಲ್ಲಿ ಸಿಲುಕಿದೆ.
 
ಎರಡೂ ಪಕ್ಷಗಳು ತಮ್ಮ ಹಗರಣ ಮುಚ್ಚಿಕೊಳ್ಳಲು ಪರಸ್ಪರ ಒಪ್ಪಂದ ಮಾಡಿಕೊಂಡಂತೆ ಕಾಣುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರದ ಹಲವಾರು ಹಗರಣಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅನೇಕ ದಾಖಲೆಗಳನ್ನು ನೀಡಿದ್ದರೂ, ಕೇಂದ್ರ ಸರ್ಕಾರ, ರಾಜ್ಯದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕ್ರಮ ಕೈಗೊಳ್ಳುತ್ತಿಲ್ಲ. ಉಭಯ ಪಕ್ಷಗಳಲ್ಲಿ ಒಳಒಪ್ಪಂದ ಏರ್ಪಟ್ಟಿರುವ ಶಂಕೆಗೆ ಇದು ಪುಷ್ಟಿ ನೀಡುತ್ತಿದೆ ಎಂದು ವಿಶ್ಲೇಷಿಸಿದರು.

ಜೆಡಿಎಸ್ ಪಕ್ಷ ಆರಂಭದಿಂದಲೂ ರೈತರು, ಗ್ರಾಮೀಣ ಜನರ ಪರವಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಇದೀಗ ರಾಜ್ಯ ಸರ್ಕಾರ ನಡೆಸುತ್ತಿರುವ ಅನ್ಯಾಯವನ್ನು ರಾಜ್ಯದ ಹಳ್ಳಿ ಹಳ್ಳಿಗಳಿಗೆ ತಲುಪಿಸಲು ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಜುಲೈ 1ರಿಂದ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಜೆಡಿಎಸ್ ಕಾರ್ಯಕರ್ತರು ಗ್ರಾಮಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರ ಮಧ್ಯೆ ಬೆರೆಯಬೇಕು. ಅಂದಾಗ ಮಾತ್ರ ಪಕ್ಷ ಬೇರು ಮಟ್ಟದಿಂದ ಸಂಘಟನೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ಮಾಡಿದರು.

ಎಚ್‌ಕೆಡಿಬಿ ಮಾಜಿ ಅಧ್ಯಕ್ಷ ನಾಗನಗೌಡ ಕಂದಕೂರ ಮಾತನಾಡಿ, ಕೆಲವೊಂದು ತಪ್ಪು ನಿರ್ಧಾರಗಳಿಂದಾಗಿ ಜೆಡಿಎಸ್‌ಗೆ ಹಿನ್ನಡೆಯಾಗಿದೆ. ಆದರೆ ತಪ್ಪಿನ ಅರಿವಾದ ಹಿನ್ನೆಲೆಯಲ್ಲಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರ ಸ್ವಾಮಿ ಮುಂದಾಗಲಿಲ್ಲ. ಒಂದು ವೇಳೆ ಬಿಜೆಪಿ ಅಧಿಕಾರ ನೀಡಿದ್ದರೆ, ರಾಜ್ಯದಲ್ಲಿ ಕೋಮುವಾದ ತಾಂಡವವಾಡುತ್ತಿತ್ತು. ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಚೆನ್ನೂರ ಮಾತನಾಡಿ, ಪಕ್ಷದ ಸಂಘಟನೆಗೆ ಎಲ್ಲರೂ ಕೈಜೋಡಿಸಬೇಕು. ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷೆ ಮಾಡುವಂತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಮತ್ತೊಮ್ಮೆ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಎಲ್ಲ ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದರು.


ಜೆಡಿಎಸ್ ಮುಖಂಡ ಎ.ಸಿ. ಕಾಡ್ಲೂರ ಮಾತನಾಡಿ, ಅಭಿವೃದ್ಧಿ ಕಾರ್ಯ ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಕುಮಾರಸ್ವಾಮಿ ಅನುಭವಿ ವ್ಯಕ್ತಿಯಾಗಿದ್ದಾರೆ. ಅವರ ಕೈ ಬಲಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ನಗರ ಘಟಕದ ಅಧ್ಯಕ್ಷ ವಿಶ್ವನಾಥ ಸಿರವಾರ, ಪುರಸಭೆ ಮಾಜಿ ಅಧ್ಯಕ್ಷ ಅಜೀಜ್ ಅಹ್ಮದ್ ಶಹನಾ, ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮಣ್ಣ ಹೆಡಗಿಮದ್ರಿ, ಸಲೀಂ ಗೋಗಿ, ಚೆನ್ನಪ್ಪಗೌಡ ಮೋಸಂಬಿ, ಜಿ. ತಮ್ಮಣ್ಣ, ಮೂರ್ತಿ ಅನಪೂರ, ಅಬ್ದುಲ್ ಗಫಾರ್, ಇನಾಯತ್, ದಾವೂದ್ ಸಾಬ್, ಫಯಾಜ್, ಇಸಾಕ್ ಅಹ್ಮದ್ ಜಮಖಂಡಿ, ಶರಣಗೌಡ ಕಂದಕೂರ ಮುಂತಾದವರು ವೇದಿಕೆಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT