ADVERTISEMENT

ಬಿಸಿಯೂಟ ಇಲ್ಲದ ಶಾಲೆಗೆ ಸಿಇಓ ಭೇಟಿ

ಆಳಂದ: ಹಂಚಿಕೆಯಾಗದ ಆಹಾರ ಧಾನ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:54 IST
Last Updated 19 ಜುಲೈ 2013, 9:54 IST
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಗುರುವಾರ ಆಳಂದ ತಾಲ್ಲೂಕಿನ ಕೊಡಲ ಹಂಗರಗಾ ಪ್ರೌಢ ಶಾಲೆಗೆ ಬೇಟಿ ನೀಡಿ ಅಲ್ಲಿನ ಬಿಸಿಯೂಟದ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಬಿಸಿಯೂಟದ ಅಧಿಕಾರಿ ಸಿದ್ದರಾಮ ಚನ್ನಗೊಂಡ, ಎಇಓ ಅಬ್ದುಲ್ ಸಲಾಂ ಇದ್ದರು
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಗುರುವಾರ ಆಳಂದ ತಾಲ್ಲೂಕಿನ ಕೊಡಲ ಹಂಗರಗಾ ಪ್ರೌಢ ಶಾಲೆಗೆ ಬೇಟಿ ನೀಡಿ ಅಲ್ಲಿನ ಬಿಸಿಯೂಟದ ವ್ಯವಸ್ಥೆಯ ಪರಿಶೀಲನೆ ನಡೆಸಿದರು. ಬಿಸಿಯೂಟದ ಅಧಿಕಾರಿ ಸಿದ್ದರಾಮ ಚನ್ನಗೊಂಡ, ಎಇಓ ಅಬ್ದುಲ್ ಸಲಾಂ ಇದ್ದರು   

ಆಳಂದ:  ತಾಲ್ಲೂಕಿನ ಕೆಲವು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಇನ್ನು ಮಕ್ಕಳಿಗೆ ಬಿಸಿಯೂಟ ಆರಂಭವಾಗದಿರುವುದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಕೊಡಲ ಹಂಗರಗಾ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಸ್ಥಳದಲ್ಲಿಯೇ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ತಾಲ್ಲೂಕಿನ ಕೊಡಲ ಹಂಗರಗಾ ಶಾಲೆಯಲ್ಲಿ ಸಿಇಓ  ಆಕುರಾತಿ ಅವರು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಕಳೆದ ಮೂರು ದಿನಗಳಿಂದ ಬಿಸಿಯೂಟ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಅವರ ಗಮನಕ್ಕೆ ತಂದರು. ಆಗ, `ಯಾವ ಕಾರಣದಿಂದ ಬಿಸಿಯೂಟವನ್ನು ಸ್ಥಗಿತಗೊಳಿಸಲಾಗಿದೆ? ಎಂದು ಜೊತೆಗೆ ಇದ್ದ ತಾಲ್ಲೂಕು ಬಿಸಿಯೂಟ ಅಧಿಕಾರಿ ಸಿದ್ದರಾಮ ಚನ್ನಗೊಂಡ ಅವರನ್ನು ಪ್ರಶ್ನಿಸಿದರು.

ಅವರು, `ಆಹಾರ ಧಾನ್ಯದ ವಿತರಣೆಯ ಗೊಂದಲದಿಂದ ಸಮಸ್ಯೆಯಾಗಿದೆ' ಎಂದು ವಿವರಣೆ ನೀಡಿದರು. `ತಾಲ್ಲೂಕಿನ ಪಡಸಾವಳಿ, ನಿಂಬಾಳ, ಮಟಕಿ , ಕೊರಳ್ಳಿ, ಆಳಂದ ಮತ್ತಿತರ ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸಿಗುತ್ತಿಲ್ಲ' ಎಂದು ವಿಚಾರಿಸಿದಾಗ ಚನ್ನಗೊಂಡ ವಿವರಣೆ ಕೊಡಲು ತಡವರಿಸಿದರು.

ಆಗ ಸಿಇಓ `ಮಕ್ಕಳ ಹಾಜರಾತಿ ಉತ್ತಮಗೊಳ್ಳಲು ಈ ಯೋಜನೆಯಿದೆ. ಆರಂಭದಲ್ಲಿಯೇ ಬಿಸಿಯೂಟ ನೀಡುವಲ್ಲಿ ವಿಳಂಬವಾದರೇ ಹೇಗೆ? ಹೀಗಾಗ ಕೂಡದು ` ಎಂದು ಎಚ್ಚರಿಸಿದರು.

`ಎನ್‌ಜಿಓ ಸಹಯೋಗದಲ್ಲಿ ಇರುವ ಶಾಲೆಗಳಲ್ಲಿ ಈ ಸಮಸ್ಯೆಯಾಗಿದೆ, ಕೆಲವು ಕಡೆ ಪ್ರಾಥಮಿಕ ಶಾಲೆಗಳಿಂದ ಆಹಾರ ಧಾನ್ಯ ಪಡೆದು ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ' ಎಂದು ನಂತರ  ಚನ್ನಗೊಂಡ ವಿವರಿಸಿದರು.

`ಶಾಲೆಗಳು ಆರಂಭಗೊಂಡು ಒಂದು ತಿಂಗಳಾದರೂ ಇನ್ನು ಏಕೆ ಪ್ರೌಢಶಾಲೆಗಳಿಗೆ ಆಹಾರ ಧಾನ್ಯ ಸರಬರಾಜು ಆಗಿಲ್ಲ. ತಕ್ಷಣ ಅಗತ್ಯ ಕ್ರಮಕೈಗೊಳ್ಳಿ' ಎಂದು ಆಕುರಾತಿ  ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಬ್ದುಲ್ ಸಲಾಂ ಅವರಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ನೋಡಲ್ ಅಧಿಕಾರಿ ಹೊನ್ನಲಿಂಗಪ್ಪ ಮತ್ತು ಇತರರು ಸಿಇಓ ಅವರ ಜೊತೆಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.