ADVERTISEMENT

`ಬೇಂದ್ರೆಯಿಂದ ಕನ್ನಡ ಸಾಹಿತ್ಯ ಶ್ರೀಮಂತ'

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 6:12 IST
Last Updated 5 ಜುಲೈ 2013, 6:12 IST

ಸುರಪುರ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಅಗ್ರಗಣ್ಯ ಕವಿಗಳು. ಅವರು ಬರೆದ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನು ಶ್ರೀಮಂತಗೊಳಿಸಿವೆ. ಅವರ ಕಥೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುವ ಗಟ್ಟಿತನ ಹೊಂದಿವೆ ಎಂದು ಸಾಹಿತಿ ಡಾ. ಗಾಳೆಪ್ಪ ಪೂಜಾರಿ ಹೇಳಿದರು.

ಸಗರನಾಡು ಸೇವಾ ಪ್ರತಿಷ್ಠಾನ ಏರ್ಪಡಿಸಿರುವ ಜ್ಞಾನಪೀಠ ಗಾರುಡಿಗರ ದರ್ಶನ ಉಪನ್ಯಾಸ ಮಾಲಿಕೆಯ  ದ. ರಾ. ಬೇಂದ್ರೆ ಕುರಿತು ಇಲ್ಲಿನ ಜ್ಞಾನೋದಯ ಪ್ರೌಢಶಾಲೆಯಲ್ಲಿ ಗುರುವಾರ ವಿಶೇಷ ಉಪನ್ಯಾಸ ನೀಡಿದರು.

ನವೋದಯ ಶೈಲಿಯನ್ನು ಅಳವಡಿಸಿಕೊಂಡಿದ್ದ ಬೇಂದ್ರೆ ಕಥೆ, ಕವನ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಖಲೀಲ ಗಿಬ್ರಾನ್, ಶ್ರೀಅರವಿಂದ, ರವೀಂದ್ರನಾಥ ಠಾಗೋರ್ ಅವರಿಂದ ಪ್ರಭಾವಿತರಾಗಿದ್ದರು ಎಂದು ವಿವರಿಸಿದರು.

ಗರಿ, ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ ಇತರ ನೂರಾರು ಕೃತಿಗಳನ್ನು ರಚಿಸಿದ್ದಾರೆ. ದೇಶಭಕ್ತರಾಗಿದ್ದ ಬೇಂದ್ರೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ಅವರ ಅನೇಕ ಕವನಗಳನ್ನು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿದ್ದು ಎಲ್ಲವೂ ಸುಪರಹಿಟ್ ಆಗಿವೆ ಎಂದು ಹೇಳಿದರು.

ಗುಲ್ಬರ್ಗ ಕನ್ನಡನಾಡು ಒದುಗರ ವೇದಿಕೆ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿ.ಸಿ.ಎನ್. ದೇಶಮುಖ, ಬಸವರಾಜ ಜಮದ್ರಖಾನಿ, ಬಸಪ್ಪ ಗಲಗಿನ್ ವೇದಿಕೆಯಲ್ಲಿದ್ದರು. ಪ್ರಧಾನ ಗುರು ಲಂಕೆಪ್ಪ ಕವಲಿ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಚನ್ನಪ್ಪ ನಾಯಕ ಸ್ವಾಗತಿಸಿದರು. ಮಹೇಶ ಪಾಟೀಲ ನಿರೂಪಿಸಿದರು.

ಹಣಮಂತ್ರಾಯ ಭಜಂತ್ರಿ ವಂದಿಸಿದರು. ಮಲ್ಲಿಕಾರ್ಜುನರೆಡ್ಡಿ ಕೋಳಿಹಾಳ, ತಿರುಪತಿ ನಾಯಕ, ತಿರುಪತಿ ಮುಷ್ಠಳ್ಳಿ, ಸಂದೀಪ ನಾಯಕ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.