ವಿಶೇಷ ವರದಿ
ಶಹಾಪುರ: ಹೈದರಾಬಾದ ಕರ್ನಾಟಕದ ಪ್ರದೇಶದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಕೆಂಡದಂತಹ ಬಿಸಿಲಿಗೆ ಬೆದರಿ ಆರು ಜಿಲ್ಲೆಗಳಲ್ಲಿ ಮಾತ್ರ ರಾಜ್ಯ ಸರ್ಕಾರಿ ಕಚೇರಿಯಗಳ ಅವಧಿಯನ್ನು(ಟೈಮ್) ಬೆಳಿಗ್ಗೆ 8ರಿಂದ ಮಧ್ಯಾಹ್ನ 2ಗಂಟೆಗೆ ಮುಂದುರೆಸುವ ಓಬಿರಾಯನ ಕಾಲದ ಪದ್ಧತಿಗೆ ಮಂಗಳ ಹಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಕಚೇರಿ, ಜೀವ ವಿಮಾ ಕಚೇರಿ, ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳು ಪೂರ್ವ ನಿಗದಿಯಂತೆ ಕಾರ್ಯವನ್ನು ನಡೆಸುತ್ತಲೇ ಬರುತ್ತಲಿವೆ. ಜನರ ಸೇವೆಗಾಗಿ ರಾಜ್ಯ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿರುವಾಗ ಬೇಸಿಗೆ ಸಮಯವೆಂದು ವಿನಾಯಿತಿ ನೀಡುವುದು ಇದ್ಯಾವ ನ್ಯಾಯ ?. ದೇಶದ ರಾಜ್ಯಧಾನಿ ದೆಹಲಿ, ರಾಜಸ್ಥಾನ ಮುಂತಾದ ರಾಜ್ಯದಲ್ಲಿ ಇಲ್ಲಿನ ಪ್ರದೇಶಕಿಂತ ಅಧಿಕವಾಗಿ ಬಿಸಿಲು ಇದ್ದರು ಅಲ್ಲಿ ಯಾವುದೇ ಸರ್ಕಾರಿ ಕಚೇರಿಯ ಸಮಯವನ್ನು ಬದಲಾವಣೆ ಮಾಡಿದ ಉದಾಹರಣೆಯಿಲ್ಲ ಎನ್ನುತ್ತಾರೆ ಭಾಸ್ಕರರಾವ ಮುಡಬೂಳ.
ಎರಡು ತಿಂಗಳ ಕಾಲ ಸರ್ಕಾರಿ ನೌಕರರಿಗೆ ವೇತನ ಸಹಿತ ಅಲಿಖಿತ ರಜೆ ನೀಡಿದಂತೆ ಆಗುತ್ತದೆ. ಕರ್ತವ್ಯದ ಹಾಜರಾಗಿ ಪುಸ್ತಕಕ್ಕೆ ಸಹಿ ಹಾಕಲು ತಡವಾಗಿ ಬರುವುದು ನಂತರ ಮಾಯವಾಗಿ ಬಿಡುತ್ತಾರೆ. ಹೆಚ್ಚಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಜಿಲ್ಲಾ ಇಲ್ಲವೆ ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡುತ್ತಿದ್ದಾರೆ. ಬಸ್ ಪ್ರಯಾಣದಲ್ಲಿ ಕಚೇರಿಯ ಹೆಚ್ಚಿನ ಸಮಯದ ನುಂಗಿ ಹಾಕುವುದರಿಂದ ಜನರ ಸಮಸ್ಯೆಗಳನ್ನು ಬಗೆಹರಿಸುವುದು ದೂರದ ಮಾತು. ಹಳ್ಳಿಯಿಂದ ತಾಲ್ಲೂಕು ಕೇಂದ್ರಕ್ಕೆ ಬಡ ರೈತ ಕಂದಾಯ ಇಲಾಖೆ ಇಲ್ಲವೆ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದರೆ ಅಧಿಕಾರಿಗಳು ನಾಪತ್ತೆ. ಸೈಟ್ ಮೇಲೆ ಹೋಗಿದ್ದಾರೆ ಇಲ್ಲವೆ ಮಿಟಿಂಗ್ ತೆರಳಿದ್ದಾರೆ ಎನ್ನುವ ಸಿದ್ಧವಾದ ಉತ್ತರವನ್ನು ಸಿಬ್ಬಂದಿಯಿಂದ ಕೇಳಿ ಬರುವುದು ಸಾಮಾನ್ಯ.
ಗ್ರಾಮೀಣ ಪ್ರದೇಶದಲ್ಲಿ ಬಸ್ ಸೌಕರ್ಯ ಹಾಗೂ ಹಾಳಾದ ರಸ್ತೆ ದಾಟಿ ಬರಲು ಹಲವು ಗಂಟೆಗಳು ಬೇಕು. ನಿಗದಿಪಡಿಸಿದ ಸಮಯಕ್ಕೆ ಕೋರ್ಟ್ ಕಲಾಪ ಪ್ರಾರಂಭವಾಗುವುದರಿಂದ ಕಕ್ಷಿದಾರರ ಮತ್ತಷ್ಟು ತೊಂದರೆ ಅನುಭವಿಸಬೇಕು. ಬಸ್ ಸಿಕ್ಕಿಲ್ಲವೆಂದು ವಕೀಲರಿಗೆ ಹೇಳಿದರೆ ಅದೆಲ್ಲ ನಮಗೆ ಗೊತ್ತಿಲ್ಲ ನಿಗದಿಪಡಿಸಿದ ಸಮಯಕ್ಕೆ ಹಾಜರಾಗಬೇಕು ಎಂದು ಹೇಳುತ್ತಾರೆ. ಓಬಿರಾಯನ ಕಾಲದಲ್ಲಿ ಮಾಡಿದ ಪದ್ಧತಿಯನ್ನು ಮುಂದುವರಿಸುವುದು ಖಡಾ ಖಂಡಿತ ಬೇಡ. ಕೆಲ ವ್ಯಕ್ತಿಗಳ ಅನುಕೂಲಕ್ಕಾಗಿ ಸಾರ್ವಜನಿಕರನ್ನು ತೊಂದರೆಪಡಿಸುವುದು ಸರಿಯಲ್ಲವೆಂದು ಸಲಾದಪೂರ ಗ್ರಾಮದ ರೈತ ಮುಖಂಡ ಹಣಮಂತ ತಿಳಿಸಿದ್ದಾರೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬ್ಯಾಡಗಿ ಮೇಣಸಿನಕಾಯಿ, ಹತ್ತಿ, ಸಜ್ಜೆ, ಜೋಳ, ಭತ್ತ ಮುಂತಾದ ಬೆಳೆಗಳ ಕಟಾವ ಹಾಗೂ ಕೃಷಿ ಕಾರ್ಯದಲ್ಲಿ ಬಿರು ಬಿಸಿಲು ಲೆಕ್ಕಿಸದೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ. ನೆರಳಿನಲ್ಲಿ ಕುಳಿತು ಕೆಲಸ ನಿರ್ವಹಿಸಲು ಸರ್ಕಾರಿ ಎಂಬ ಬಿಳಿಯಾನೆ ಅಧಿಕಾರಿಗಳಿಗೆ ತೊಂದರೆಯಾದರು ಏನು ಎನ್ನುತ್ತಾರೆ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ.
ವಿನಾಯ್ತಿ ನೀಡಿ: ಹೈದರಾಬಾದ ಕರ್ನಾಟಕ ಪ್ರದೇಶದ ಜನತೆಗೆ ಕೊನೆ ಪಕ್ಷದ ಬಿಸಿಲಿನ ಬವಣೆ ಹಾಗೂ ಸಮುರ್ಪಕವಾಗಿ ನೀರು ಪೂರೈಸಿಕೊಳ್ಳಲು ಲೋಡ್ ಶೆಡ್ಡಿಂಗ್‌ಅನ್ನು ರದ್ದುಪಡಿಸಿ ನಿರಂತರವಾಗಿ ವಿದ್ಯುತ್ ಒದಗಿಸಬೇಕೆಂದು ಸಾರ್ವಜನಿಕರು ಇಂಧನ ಖಾತೆ ಸಚಿವೆ ಶೋಭಾ ಕರದ್ಲಾಂಜೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.