ಯಾದಗಿರಿ: ಸುಮಾರು ರೂ.3 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಯೋಜನೆಯಿಂದ ಕೊನೆಗೂ ಗ್ರಾಮಸ್ಥರು ನೀರು ಪಡೆಯುವ ದಿನಗಳ ಬಂದಂತಾಗಿದೆ. ಸಮೀಪದ ಕಂದಳ್ಳಿಯಲ್ಲಿ ಭೀಮಾ ಬ್ಯಾರೇಜ್‌ನಿಂದ ಮೂರು ಹಳ್ಳಿಗಳಿಗೆ ನೀರು ಪೂರೈಸುವ ಈ ಯೋಜನೆ ಪೂರ್ಣಗೊಂಡು ವರ್ಷಗಳೇ ಕಳೆದಿದ್ದರೂ, ಇದೀಗ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಲಾನಿ ಅವರ ಭೇಟಿಯಿಂದಾಗಿ ಗ್ರಾಮಗಳ ಜನರಿಗೆ ನೀರು ಸಿಗುವ ಭರವಸೆ ಮೂಡಿದೆ.
ಗುರುವಾರ ಕಂದಳ್ಳಿ ಬಳಿ ಇರುವ ಭೀಮಾ ಬ್ಯಾರೇಜ್‌ನಿಂದ ನೀರು ಪೂರೈಕೆ ಮಾಡುವ ಯೋಜನೆ ಸ್ಥಳಕ್ಕೆ ಭೇಟಿ ನೀಡಿದ ಎಸ್.ಎ. ಜಿಲಾನಿ,
ಮಂಗಳವಾರದ ಒಳಗೆ ಕೋನಳ್ಳಿ, ಕಂದಳ್ಳಿ ಹಾಗೂ ವಡಗೇರಾ ಗ್ರಾಮಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಕುಡಿಯುವ ನೀರಿನ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೇಳಿದರೆ ಹಾರಿಕೆ ಉತ್ತರ ಕೊಡುತ್ತಾರೆ ಎಂದು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ದೂರಿದರು.
ಇದರಿಂದ ಕೆಂಡಾಮಂಡಲವಾದ ಜಿಲಾನಿ, ಅಧಿಕಾರಿಗಳ ಮೇಲೆ ಹರಿಹಾಯ್ದರು. ನಿಗದಿ ಪಡಿಸಿದ ದಿನದಂದು ಈ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡದಿದ್ದರೆ, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಜೊತೆಗೆ ಸ್ಥಳದಲ್ಲಿಯೇ ವಾಸ್ತವ್ಯ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಂದಳ್ಳಿ ಗ್ರಾಮಸ್ಥರು, ನಮಗೆ ಬ್ಯಾರೇಜ್ ನೀರು ಬೇಡ. ಭೀಮಾ ನದಿಯ ಪಕ್ಕದಲ್ಲಿ ಕೊಳವೆಬಾವಿ ಹಾಕಿಸಿಕೊಡಿ ಸಾಕು. ಆ ನೀರನ್ನೇ ನಾವು ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ನಾಳೆಯೊಳಗೆ ಈ ಕೆಲಸ ಮಾಡಿ ವರದಿ ನೀಡುವಂತೆ ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಕೋನಳ್ಳಿ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು. ಅದೇ ರೀತಿಯಾಗಿ ವಡಗೇರಾ ಗ್ರಾಮದಲ್ಲಿ ಮೂರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಬ್ಯಾರೇಜ್‌ನಿಂದ ಬರುವ ನೀರನ್ನು ಈ ಘಟಕಗಳಲ್ಲಿ ಶುದ್ಧೀಕರಿಸಿ, ಸರಬರಾಜು ಮಾಡಬೇಕು ಎಂದು ಸೂಚನೆ ನೀಡಿದರು.
ನೀರು ಬಿಡಲು ಸಕಾಲದಲ್ಲಿ ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆೆ ಎಂದು ಅಧಿಕಾರಿಗಳು ಗಮನ ಸೆಳೆದರು. ಕೂಡಲೇ ಜೆಸ್ಕಾಂ ಅಧಿಕಾರಿಗಳು ಕರೆಯಿರಿ ಎಂದಾಗ, ಸ್ಥಳದಲ್ಲಿ ಯಾವೊಬ್ಬ ಜೆಸ್ಕಾಂ ಅಧಿಕಾರಿಗಳು ಇರಲಿಲ್ಲ.
ದಿನದ 24 ಗಂಟೆ ವಿದ್ಯುತ್ ನಿರಂತರ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಮೂರು ಗ್ರಾಮಗಳ ಜನರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.