ADVERTISEMENT

ಮಕ್ಕಳಿಗೆ ಖುಷಿ ನೀಡುವ ಕಾಜೋಲ್ ಸವಾರಿ!

ಗೆಜ್ಜೆಗಳ ಘಲ್‌.. ಘಲ್‌.. ಶಬ್ದ ಕಿವಿದುಂಬುತ್ತಿದ್ದಂತೆ ಸಂಭ್ರಮಿಸುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 14 ಮೇ 2018, 9:27 IST
Last Updated 14 ಮೇ 2018, 9:27 IST
ಯಾದಗಿರಿಯಲ್ಲಿ ಮಗುವನ್ನು ಹೊತ್ತು ಸವಾರಿ ಸಾಗಲು ಅನುವಾಗುತ್ತಿರುವ ಒಂಟೆ ಕಾಜೋಲ್
ಯಾದಗಿರಿಯಲ್ಲಿ ಮಗುವನ್ನು ಹೊತ್ತು ಸವಾರಿ ಸಾಗಲು ಅನುವಾಗುತ್ತಿರುವ ಒಂಟೆ ಕಾಜೋಲ್   

ಯಾದಗಿರಿ: ಬೇಸಿಗೆ ಬಂದೊಡನೆ ನಗರಕ್ಕೆ ಕಾಜೋಲ್ ಬಂದು ನೆಲೆಸುತ್ತಾಳೆ! ನಗರದ ಮಕ್ಕಳಿಗೆ ಅವಳೆಂದರೆ ಅಚ್ಚುಮೆಚ್ಚು. ಕಾಜೋಲ್‌ಗೂ ಇಲ್ಲಿನ ಮಕ್ಕಳೆಂದರೆ ಬಲು ಪ್ರೀತಿ. ಕೆಲ ಮಕ್ಕಳು ಅವಳಿಗೆ ಸಿಹಿತಿಂಡಿ ತಿನಿಸಿ ಮುದ್ದು ಮಾಡುತ್ತಾರೆ. ಸಿಹಿ ತಿಂಡಿ ಮೆಲ್ಲುವ ಅವಳು ಮಕ್ಕಳನ್ನು ಮೇಲೆ ಕೂರಿಸಿಕೊಂಡು ಬೀದಿ ಸುತ್ತುವುದೆಂದರೆ ಬಲು ಇಷ್ಟ. ಆದರೆ, ಕಾಜೋಲ್‌ ಮೇಲೆ ಒಂದು ಸುತ್ತಿನ ಸವಾರಿ ಮಾಡಲು ಅವಳ ಮಾಲೀಕ ಸೋಹನ್‌ಗೆ ₹ 20 ನೀಡಲೇಬೇಕು.

ಮಕ್ಕಳ ಪ್ರೀತಿಗೆ ಪಾತ್ರವಾಗಿರುವ ‘ಕಾಜೋಲ್‌’ ಮಹಾರಾಷ್ಟ್ರದಿಂದ ನಗರಕ್ಕೆ ಬಂದಿರುವ ಒಂಟೆಯ ಮುದ್ದಿನ ಹೆಸರು.

ಪ್ರತಿವರ್ಷ ಬೇಸಿಗೆಯಲ್ಲಿ ಬರುವ ಒಂಟೆ ನಗರದ ಆಕರ್ಷಣೆ ಪಡೆಯುತ್ತಿದೆ. ಈ ಒಂಟೆ ಬೀದಿಗಿಳಿಯಿತೆಂದರೆ ಸಾಕು ಬೇಸಿಗೆ ರಜೆಯಲ್ಲಿರುವ ಮಕ್ಕಳು ಇದರ ಹಿಂದೆ ಹಿಂದೆಯೇ ಗುಂಪು ಗೂಡುತ್ತವೆ. ರಸ್ತೆಯಲ್ಲಿ ಘಲ್‌.. ಘಲ್‌.. ಗೆಜ್ಜೆನಾದದ ಶಬ್ದ ಕಿವಿಗಪ್ಪಳಿಸುತ್ತಿದ್ದಂತೆ ಮನೆಯೊಳಗಿನಿಂದಲೇ‘ಕಾಜೋಲ್‌’ ಬಂದಳು ಎಂದು ಕೂಗುತ್ತಾ ಖುಷಿಯಿಂದ ಓಡುತ್ತವೆ. ಅದರ ಹಿಂದೆ ಸುತ್ತುವರಿದು ಸವಾರಿಗಾಗಿ ತಡವರಿಸುತ್ತಾರೆ. ಒಬ್ಬೊಬ್ಬರಾಗಿ ಮೇಲೇರಿ ಸಂಭ್ರಮಿಸುತ್ತಾರೆ.

ADVERTISEMENT

ಬೀದಿಯಲ್ಲಿ ಕಾಜೋಲ್ ನ ನಡಿಗೆಯೂ ಆಕರ್ಷಣೀಯವಾಗಿರುತ್ತದೆ. ನಿಧಾನವಾಗಿ ಹೆಜ್ಜೆ ಮೇಲೊಂದು ಹೆಜ್ಜೆ ಹಾಕುತ್ತಾ ಉದ್ದನೆಯ ಕತ್ತನ್ನು ಮೇಲೆ ಕೆಳಗೆ ಬಳಕಿಸುತ್ತಾ ಉಸ್‌ ಎಂದು ಉದ್ದನೆಯ ಉಸಿರು ಎಳೆದುಕೊಳ್ಳುತ್ತಾ ಸಾಗುತ್ತದೆ. ಅದರ ಎರಡು ಮುಂಗಾಲಿಗೆ ಕಟ್ಟಿರುವ ಗೆಜ್ಜೆಗಳ ಘಲ್‌.. ಘಲ್‌.. ಶಬ್ದ ಅದರ ನಡಿಗೆಯ ಲಯಕ್ಕೆ ತಕ್ಕಂತೆ ಹೊರಹೊಮ್ಮುತ್ತವೆ.

ದುಡ್ಡಿಲ್ಲದ ಬಡ ಮಕ್ಕಳನ್ನು ಸೋಹನ್‌ ಎಂದೂ ನಿರಾಸೆ ಮಾಡುವುದಿಲ್ಲ. ಉಚಿತವಾಗಿ ಸವಾರಿ ಮಾಡಿಸಿ ಮಕ್ಕಳನ್ನು ಖುಷಿ ಪಡಿಸುತ್ತಾರೆ. ಹಾಗಾಗಿ, ಕಾಜೋಲ್‌ನಷ್ಟೇ ಸೋಹನ್‌ ಕೂಡ ಮಕ್ಕಳ ಪ್ರೀತಿ ಗಳಿಸಿದ್ದಾರೆ. ಸೋಹನ್ ಮಹಾರಾಷ್ಟ್ರದ ನಾಂದೇಡ್ ನಿವಾಸಿ. ಕಾಜೋಲ್‌ ಮರಿ ಇದ್ದಾಗ ಕೊಂಡುತಂದು ಸಾಕಿದ್ದಾನೆ. ಇಬ್ಬರಿಗೂ ಎಂಟು ವರ್ಷಗಳ ನಂಟು ಇದೆ. ಸೋಹನ್‌ ಹಿಂದಿ ಸಿನಿಮಾ ನಟಿ ಕಾಜೋಲ್‌ ಅವರ ಅಭಿಮಾನಿ. ಹಾಗಾಗಿ, ತಮ್ಮ ಮುದ್ದಿನ ಹೆಣ್ಣು ಒಂಟೆಗೆ ಕಾಜೋಲ್‌ ಎಂದು ನಾಮಕರಣ ಮಾಡಿದ್ದಾರೆ. ಕಾಜೋಲ್‌ ಎಂದೊಡನೆ ಕಿವಿ ನಿಮಿರಿಸಿ ಮುಂದಕ್ಕೆ ಹೆಜ್ಜೆ ಹಾಕುವಷ್ಟು ಹೆಸರು ಒಂಟೆಗೆ ಪರಿಚಯವಾಗಿದೆ.

‘ಈಗ ಸೋಹನ್ ಅವರ ಸಂಸಾರಕ್ಕೆ ಒಂಟೆ ಕಾಜೋಲ್ ಆಧಾರವಾಗಿದೆ. ಕಾಜೋಲ್ ಮಕ್ಕಳ ಸವಾರಿ ನಡೆಸಿ ದಣಿದು ದಿನಕ್ಕೆ ಕನಿಷ್ಠ ₹ 400ರಿಂದ ಗರಿಷ್ಠ ₹ 900 ವರೆಗೂ ಸಂಪಾದಿಸುತ್ತದೆ. ಕೆಲವೊಂದು ಬಾರಿ ₹ 200 ಕೂಡ ಸಿಗುವುದಿಲ್ಲ. ಆಗ ತುಂಬಾ ಬೇಸರವಾಗುತ್ತದೆ’ ಎಂದು ಸೋಹನ್‌ ಹೇಳುತ್ತಾರೆ.

‘ಬೇಸಿಗೆ ಮುಗಿಯುತ್ತಿದ್ದಂತೆ ಕಾಜೋಲ್ ಮಹಾರಾಷ್ಟ್ರದತ್ತ ಮುಖ ಮಾಡುತ್ತಾಳೆ. ಆ ಸಂದರ್ಭದಲ್ಲಿ ಮಕ್ಕಳು ನಿರಾಸೆಯಿಂದ ಕಾಜೋಲ್‌ ನಿರ್ಗಮನವನ್ನು ಅನುಭವಿಸುತ್ತಾರೆ. ಕೆಲವರು ಈ ಸಂದರ್ಭದಲ್ಲಿ ಸೋಹನ್‌ ಅವರಿಗೆ ಮಾಲೆ ಹಾಕಿ ಗೌರವಿಸಿ ಕಳುಹಿಸಿ ಕೊಡುತ್ತಾರೆ. ಇಲ್ಲಿನ ಜನರ ಗೌರವ, ಮಕ್ಕಳ ಪ್ರೀತಿ ಕಾರಣವಾಗಿ ಅವರು ಪ್ರತಿವರ್ಷ ಬೇಸಿಗೆಯಲ್ಲಿ ಯಾದಗಿರಿಗೆ ಬರುತ್ತಾರೆ’ ಎಂದು ಬಸವೇಶ್ವರ ನಗರದ ರಾಜಪ್ಪ ಹೇಳುತ್ತಾರೆ.

**
ಉತ್ತರ ಕರ್ನಾಟಕ ನಮ್ಮ ನೆಚ್ಚಿನ ತಾಣ. ಒಂಟೆ ಇಲ್ಲಿನ ಜನರ ಬಲು ಇಷ್ಟದ ಪ್ರಾಣಿ. ಮಕ್ಕಳ ಸವಾರಿ ಖುಷಿಯ ಜತೆಗೆ ನಮ್ಮ ಬದುಕು ಸಾಗುತ್ತದೆ
- ಸೋಹನ್, ಒಂಟೆ ಮಾಲೀಕ

ಮಲ್ಲೇಶ್ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.