ADVERTISEMENT

ಮುಖ್ಯಗುರು -ಶಿಕ್ಷಕರ ನಡುವೆ ಮಾರಾಮಾರಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 8:20 IST
Last Updated 22 ಜೂನ್ 2011, 8:20 IST

ಕಾಳಗಿ: ರಾಷ್ಟ್ರದ ಭವಿಷ್ಯ ರೂಪಿಸುವ ಜವಾಬ್ದಾರಿ ಹೊತ್ತ ಶಿಕ್ಷಕರು ಮುಗ್ಧ ಮಕ್ಕಳ ಪಾಲಿಗೆ ಮಾರ್ಗದರ್ಶಕರು. ಅಷ್ಟೇ ಅಲ್ಲ ತಪ್ಪು ತಿದ್ದಿ ಸರಿ ದಾರಿಗೆ ತರುವ ಕರ್ತವ್ಯ ಅವರದು. ಇದರಿಂದಲೇ ಅವರಿಗೆ `ಗುರುಗಳು~ ಎಂಬ ಹಣೆಪಟ್ಟಿ ಬಂದದ್ದು.

ಅದನ್ನು ಬಿಟ್ಟು ಪರಸ್ಪರ ಹೊಡೆದಾಡಿ ಇಡೀ ಶಿಕ್ಷಣ ಸಮುದಾಯಕ್ಕೆ ಕೆಟ್ಟ ಹೆಸರು ತರುವ ಕೆಲಸವೊಂದು ಮಾಡುತ್ತಾರೆ ಎಂದರೆ ಇಂಥಹ ಶಿಕ್ಷಕರು ನಮ್ಮ ಮಕ್ಕಳ ಮಧ್ಯೆ ಇದ್ದು ಅದೆಂಥ ಶಿಕ್ಷಣ ಕೊಡಲು ಸಾಧ್ಯವಿದೆ ಎಂಬುದು ಪಾಲಕರಾದ ನಾವುಗಳೆಲ್ಲ ಅರಿಯಬೇಕಾಗಿದೆ.

ಈ ಮಾತು ಉಪದೇಶ ಎಂದುಕೊಂಡಿದ್ದೀರಾ... ಅಲ್ಲ. ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಪ್ರಭಾರಿ ಮುಖ್ಯಗುರು ಮತ್ತು ಸಹ ಶಿಕ್ಷಕರ ನಡುವಿನ ಮಾರಾಮಾರಿ ಗುದ್ದಾಟವೇ ಈ ಮಾತನ್ನು ನೆನಪಿಸದೆ ಇರದು.

ವಿವರ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ಯಾಂಪಸ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯು ಕಳೆದ ವರ್ಷದಿಂದ ಒಂದಿಲ್ಲಾ ಒಂದು ಸುದ್ದಿಗೆ ಹೆಸರುವಾಸಿ. ಅಂದಹಾಗೆ ಸೇವಾ ಪುಸ್ತಕ ಬರವಣಿಗೆ ಹಾಗೂ ಇತರೆ ವಿಷಯಗಳಲ್ಲಿ ಪ್ರಭಾರಿ ಮುಖ್ಯಗುರು ನಿಂಗಣ್ಣ ಜಗತಿ ಮತ್ತು ಸಹ ಶಿಕ್ಷಕ ದತ್ತಾತ್ರೇಯ ತ್ರಿಮುಖೆ ನಡುವೆ ಹಲವು ದಿನಗಳಿಂದ ಸೃಷ್ಟಿಯಾದ ಮುಸುಕಿನ ಗುದ್ದಾಟ ಮಂಗಳವಾರ ಇವರಿಬ್ಬರನ್ನು ಹೊಡೆದಾಡಲು ಹಚ್ಚಿ ನೋಡುಗರಿಗೆ ಅಪಹಾಸ್ಯ ಉಂಟುಮಾಡಿತು.

ಸಿಬ್ಬಂದಿ ಎದುರಿಗೆ ಪರಸ್ಪರ ಬೈಗುಳ, ಜಗ್ಗಾಟ, ಹೊಡೆದಾಟ ಶುರುವಾಗಿ ಯಾರು ಬಿಡಿಸಿದರೂ ಬಿಡದ ಕಗ್ಗಂಟ್ಟಾಗಿ ಕೆಲಕಾಲ ಬೀಗ ಜಡಿದ ಕೋಣೆಯಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಪ್ರಭಾರಿ ಮುಖ್ಯಗುರುವಿಗೆ ಬಂದೊದಗಿತ್ತು. ಹಲವು ಶಿಕ್ಷಕರು ದಿಕ್ಕು ತೋಚದೆ ಮೌನವಾಗಿದ್ದರು.

ಮಕ್ಕಳೆಲ್ಲ ಎಂದಿನಂತೆ ತರಗತಿ ಕೋಣೆಯಲ್ಲೇ ಇದ್ದುಕೊಂಡು ಎಲ್ಲವೂ ಗಮನಿಸುತ್ತಿದದ್ದು ಕಂಡುಬಂತು. ವಿಷಯ ಅರಿಯುತ್ತಿದ್ದಂತೆ ಆಗಮಿಸಿದ ಪಾಲಕರಾದ ಮಾಣಿಕರಾವ ಜಾಧವ ಹಾಗೂ ಅಣ್ಣರಾವ ನಾಟಿಕಾರ  ಘಟನೆಯ ವಿವರ ಅರಿತು ಇಬ್ಬರನ್ನು ಸಮಜಾಯಿಸಿದರು. ಇಂತಹ ಅವ್ಯವಸ್ಥೆ ಮರುಕಳಿಸದಂತೆ ಎಲ್ಲ ಶಿಕ್ಷಕರಲ್ಲಿ ಮನವಿ ಮಾಡಿದರು. ಆದರೂ ಇವರಿಬ್ಬರ ಮುಸುಕು ಮಾತ್ರ ಕರಗಿರಲಿಲ್ಲ. ನಂತರ ಬಂದ ಜೈಕರವೇ ಕಾರ್ಯಾಧ್ಯಕ್ಷ ಸುರೇಶ ಮೋರೆ ಪರಿಸ್ಥಿತಿ ಅರಿತು ಒಬ್ಬರನ್ನೊಬ್ಬರಿಗೆ ಸಿಹಿ ತಿನ್ನಿಸಿ ಒಂದಾಗಿಸಿದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.