ADVERTISEMENT

ಮುಗಿಯದ ಕಾಮಗಾರಿ: ಕಾಲುವೆಗೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 9:59 IST
Last Updated 19 ಜುಲೈ 2013, 9:59 IST
ಕೆಂಭಾವಿ ಸಮೀಪ ಉಪ ಕಾಲುವೆಯಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದು
ಕೆಂಭಾವಿ ಸಮೀಪ ಉಪ ಕಾಲುವೆಯಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದು   

ಕೆಂಭಾವಿ: ನಾರಾಯಣಪುರ ಎಡದಂಡೆ ಕಾಲುವೆ ಹಾಗೂ ಇಂಡಿ ಶಾಖಾ ಕಾಲುವೆಗಳ ವಾರ್ಷಿಕ ನಿರ್ವಹಣೆ ಕಾಮಗಾರಿ ಪೂರ್ಣಗೊಳ್ಳುವ    ಮುನ್ನವೇ   ನೀರು ಹರಿಸಲಾಗುತ್ತಿದೆ.

ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಯಿಂದ ಶಾಖಾ ಕಾಲುವೆಗೆ ಹರಿಯಬೇಕಾದ ನೀರು ಹಳ್ಳಕ್ಕೆ ಹರಿಯುತ್ತಿದೆ. ವಾರ್ಷಿಕ ನಿರ್ವಹಣೆ ಕಾಮಗಾರಿ ಮುಗಿಯದೇ ಇರುವುದರಿಂದ ನೀರನ್ನು ಶಾಖಾ ಕಾಲುವೆಗಳಿಗೆ ಬಿಡದೇ ಹಳ್ಳಕ್ಕೆ ಹರಿಸಲಾಗುತ್ತಿದೆ.

ಪ್ರತಿ ವರ್ಷ ಕಾಲುವೆಗಳ ನಿರ್ವಹಣೆ ಹಣ ವೆಚ್ಚ ಮಾಡಲಾಗುತ್ತದೆ. ಈ ವರ್ಷವೂ ಕಾಲುವೆ ನಿರ್ವಹಣೆ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಬೇಸಿಗೆ ಅವಧಿಯಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ಮಾಡಲಾಗುತ್ತಿತ್ತು.

ಆದರೆ ಈ ವರ್ಷ ಚುನಾವಣೆಯ ನಿಮಿತ್ತ ಸ್ವಲ್ಪ ತಡವಾಗಿ ಕಾಮಗಾರಿ ಪ್ರಾರಂಭಗೊಂಡಿವೆ. ಪ್ರತಿ ವರ್ಷ ಜುಲೈ ಕೊನೆ ವಾರ ಕಾಲುವೆಗೆ ನೀರು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗಿದ್ದರಿಂದ ಜುಲೈ 12 ರಿಂದ ಕಾಲುವೆಗೆ ನೀರು ಹರಿಸಲಾಗಿದೆ. ಕಾಮಗಾರಿಯು ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳ ಸಮಯ ಬೇಕು.

ನಂತರ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ 30 ದಿನಗಳ ಸಮಯ ನೀಡಲಾಗುತ್ತದೆ. ಕಾಮಗಾರಿಯಲ್ಲಿ ಕಾಲುವೆಗಳ ಹೂಳು, ಜಂಗಲ್ ಕಟಿಂಗ್ ಮತ್ತು ಲೈನಿಂಗ್ ಕಾಮಗಾರಿಗಳು ಸೇರಿರುತ್ತವೆ. ಆದರೆ ಈ ಬಾರಿ ಗುತ್ತಿಗೆದಾರರಿಗೆ ಕಾಲಾವಕಾಶ ನೀಡಿದ್ದರೂ ದಿಢೀರ್ ಕಾಲುವೆಗೆ ನೀರು ಹರಿಸಿದ್ದರಿಂದ ಕಾಮಗಾರಿಗಳು ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಇತ್ತೀಚೆಗಷ್ಟೆ ಕಾಮಗಾರಿಗಳು ಪ್ರಾರಂಭವಾಗಿದ್ದು, ಇನ್ನೂ ಉಪ ಕಾಲುವೆಗಳಲ್ಲಿ ಹೂಳು ತೆಗೆಯುವ ಹಾಗೂ ಲೈನಿಂಗ್ ಹಾಕುವ ಕೆಲಸಗಳು ಮುಗಿದಿಲ್ಲ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಮಗಾರಿಗಳ ಪ್ರಗತಿ, ಮಾಡಬೇಕಾಗಿರುವ ನಿರ್ವಹಣೆ ಕಾಮಗಾರಿಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸದೇ, ಒಂದೇ ದಿನದಲ್ಲಿ ದಿಢೀರ್ ಕಾಲುವೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಯಿತು.

ಒಂದೆಡೆ ಕಾಮಗಾರಿ ಅಪೂರ್ಣವಾಗುತ್ತಿದ್ದರೆ, ಜೇವರ್ಗಿ, ಶಹಾಪುರ, ಮುಡಬಾಳ, ಇಂಡಿ ಏತ ನೀರಾವರಿ ಕಾಲುವೆಗಳು ಹದಗೆಟ್ಟು ಹಳ್ಳದಂತಾಗಿವೆ. ಇದುವರೆಗೂ ವಾರ್ಷಿಕ ನಿರ್ವಹಣೆ ಕಾಮಗಾರಿ ಮಾಡದಿರುವುದರಿಂದ ಜಾಲಿಗಿಡಗಳು ಕಾಲುವೆಯನ್ನು ಆಕ್ರಮಿಸಿಕೊಂಡಿವೆ. ಕಾಂಕ್ರಿಟ್ ಪೂರ್ಣ ಕಿತ್ತು ಹೋಗಿದ್ದು, ಹಳ್ಳವಾಗಿ ಮಾರ್ಪಟ್ಟಿವೆ. ಇದರಿಂದ ನೀರು ಸಂಪೂರ್ಣ ಪೋಲಾಗುವಂತಾಗಿದೆ.

ಟೆಂಡರ್ ಕಾಮಗಾರಿಗಳನ್ನು ಗುತ್ತಿಗೆದಾರರು ಶೇ 35 ರಿಂದ 45 ರಷ್ಟು ಕಡಿಮೆಗೆ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಕಾಲುವೆಗೆ ನೀರು ಹರಿಸಲಾಗಿದ್ದು, ಕಾಮಗಾರಿಗಳು ಎಷ್ಟರ ಮಟ್ಟಿಗೆ ಗುಣಮಟ್ಟದಿಂದ ಕೂಡಿರುತ್ತವೆ ಎಂಬ ಸಂಶಯ ರೈತರದು.

`ಸದ್ಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಆದರೆ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕಾಲುವೆಗೆ ನೀರು ಹರಿಸಲಾಗಿದ್ದು, ಕಾಮಗಾರಿಗಳು ಅಪೂರ್ಣವಾಗಿಯೇ ಉಳಿಯುತ್ತವೆ. ಕೆಲಸ ಮಾಡಿದಷ್ಟು ಹಣವನ್ನು  ಗುತ್ತಿಗೆದಾರರಿಗೆ ನೀಡುತ್ತೇವೆ' ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

`ನಮ್ಮ ಉಪ ಕಾಲುವೆ ಹೂಳು ತೆಗೆದಿಲ್ಲ. ಜಂಗಲ್ ಕತ್ತರಿಸಿಲ್ಲ. ಅಲ್ಲಲ್ಲಿ ನೀರ ಹೊಲದಾಗ ನುಗ್ಗತಾವ. ಅಲ್ಲಿ ರಿಪೇರಿ ಮಾಡಿಲ್ಲ. ನೀರ ಬಿಡಲಾಕ ಮುಂದಾಗ್ಯಾರ. ನಮ್ಮ ಜಮೀನಿಗಿ ನೀರ ಬರತಾವ ಅಂತ ಭರೋಸಾ ಇಲ್ಲ' ಎಂದು ರೈತ ನಾಗಪ್ಪ ಶಾಖಾಪುರ ಹೇಳುತ್ತಾರೆ.

ನೀರಿಗಾಗಿ ಇಂಡಿ ಭಾಗ ರೈತರ ಬೇಡಿಕೆ ಹೆಚ್ಚಾಗಿದ್ದು, ಜುಲೈ 18 ರಂದು ಇಂಡಿ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್ ಕೊಣ್ಣುರ ಹೇಳಿದ್ದಾರೆ.

ಎರಡು ಮೋಟಾರ್‌ಗಳ ಮೂಲಕ 600 ಕ್ಯೂಸೆಕ್ ನೀರು ಹರಿಸಲಾಗುವುದು ಎಂದಿರುವ ಅವರು, ಕಾಮಗಾರಿಗಳು ಕೆಲವೆಡೆ ನಡೆಯುತ್ತಿವೆ. ಅಂತಹ ಕಾಮಗಾರಿ ಗಮನಿಸಿ ಎಷ್ಟು ಕೆಲಸವಾಗಿದೆ. ಅಷ್ಟಕ್ಕೆ ಮಾತ್ರ ಬಿಲ್ ಮಾಡಲಾಗುವುದು ತಿಳಿಸಿದ್ದಾರೆ.
-ಪವನ ಕುಲಕರ್ಣಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.