ADVERTISEMENT

ಮುಳ್ಳಿನ ಬೇಲಿ ಸ್ಥಳವೇ ಮೀನು ಮಾರುಕಟ್ಟೆ!

ಮಲ್ಲೇಶ್ ನಾಯಕನಹಟ್ಟಿ
Published 5 ಜೂನ್ 2017, 6:33 IST
Last Updated 5 ಜೂನ್ 2017, 6:33 IST
ಯಾದಗಿರಿಯ ಶಾಸ್ತ್ರಿ ವೃತ್ತದ ಬಳಿ ಇರುವ ತಾತ್ಕಾಲಿಕ ಮೀನು ಮಾರುಕಟ್ಟೆ
ಯಾದಗಿರಿಯ ಶಾಸ್ತ್ರಿ ವೃತ್ತದ ಬಳಿ ಇರುವ ತಾತ್ಕಾಲಿಕ ಮೀನು ಮಾರುಕಟ್ಟೆ   

ಯಾದಗಿರಿ: ಜಿಲ್ಲೆಯಲ್ಲಿ ಮೀನು ಕೃಷಿಗೆ ವಿಪುಲ ಅವಕಾಶಗಳಿದ್ದರೂ, ನಗರದಲ್ಲಿ ಮೀನು ಮಾರುಕಟ್ಟೆ ಇಲ್ಲದಿರುವುದು ಮೀನು ಪ್ರಿಯರ ಹಾಗೂ ಮಾರಾಟಗಾರರ ನಿರಾಸೆಗೆ ಕಾರಣವಾಗಿದೆ. ಮೀನುಗಾರ ಮಹಿಳೆಯರು ನಸುಕಿನಲ್ಲಿ ನಗರಕ್ಕೆ ಬಂದು ಶಾಸ್ತ್ರಿ ವೃತ್ತದಲ್ಲಿ ಸೇರುತ್ತಾರೆ.

ಬಗೆಬಗೆಯ ಮೀನುಗಳನ್ನು ವಿಂಗಡಿಸಿ ಪಕ್ಕದಲ್ಲೇ ಇರುವ ಬೇಲಿಜಾಗದಲ್ಲಿ ಸಾಲಾಗಿ ಕುಳಿತುಕೊಳ್ಳುತ್ತಾರೆ. ಭೀಮಾ, ಕೃಷ್ಣಾ ನದಿ, ನಾರಾಯಣಪುರ ಜಲಾಶಯ, ಕೆರೆ, ಕೃತಕ ಹೊಂಡಗಳಲ್ಲಿನ ಮೀನುಗಳನ್ನು ಇಲ್ಲಿಗೆ ಮಾರಾಟಕ್ಕೆ ತರುತ್ತಾರೆ. ಇಡೀ ಜಿಲ್ಲೆಯಲ್ಲಿ ಎಲ್ಲೇ ಮೀನು ಹಿಡಿದರೂ ನಗರದಲ್ಲಿನ ಮುಳ್ಳು ಬೇಲಿಯ ಸ್ಥಳವೇ ಅವುಗಳ ಮಾರಾಟದ ಕೇಂದ್ರ ಸ್ಥಾನ.

‘ಮೀನು ಮಾರುಕಟ್ಟೆ ಸೌಲಭ್ಯ ಇಲ್ಲದ ಕಾರಣ ಮೀನು ಮಾರಾಟಗಾರರು ಖಾಸಗಿಯವರ ನಿವೇಶನದಲ್ಲಿನ ಮುಳ್ಳು ಬೇಲಿಯನ್ನೇ ಸ್ವಚ್ಛಗೊಳಿಸಿಕೊಂಡು ತಾತ್ಕಾಲಿಕವಾಗಿ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಮೀನು ಖರೀದಿಸಲು ಹೊಸಬರು ಹೋದರೆ ಇಡೀ ನಗರ ಸುತ್ತಿ ಬರಿ ಕೈಯಲ್ಲಿ ವಾಪಸ್ ಬರುವುದು ಖಚಿತ. ಬೇಲಿಯಲ್ಲಿನ ಮಾರುಕಟ್ಟೆ ಕಾಣುವುದಾರೂ ಹೇಗೆ’ ಎನ್ನುತ್ತಾರೆ ನಗರದ ನಿವಾಸಿಗಳಾದ ವಿಶ್ವನಾಥ ಮಗ್ಗದ, ಮಂಜುನಾಥ.

ADVERTISEMENT

‘ಜಿಲ್ಲೆಯಲ್ಲಿ ಕಬ್ಬಲಿಗ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಬಹುತೇಕ ಕಬ್ಬಲಿಗ ಕುಟುಂಬಗಳು ಮೀನುಗಾರಿಕೆಯನ್ನೇ ನೆಚ್ಚಿಕೊಂಡು ಬದುಕುತ್ತಾ ಬಂದಿವೆ. ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ನಗರದ ನಿವಾಸಿಗಳಿಗೂ, ಮಾರಾಟಗಾರರಿಗೂ ಅನುಕೂಲ ಆಗಲಿದೆ’ ಎನ್ನುತ್ತಾರೆ ಕಬ್ಬಲಿಗ ಸಮುದಾಯದ ರವಿ ಹೊನಗೇರಾ.

‘ಮುಳ್ಳಿನ ಬೇಲಿಯೇ ಮೀನು ಮಾರುಕಟ್ಟೆ ಆಗಿರುವುದರಿಂದ ಸ್ವಚ್ಛತೆ ಇಲ್ಲದಾಗಿದೆ. ಮಾರಾಟ ಮಾಡುವ ಮಹಿಳೆಯರು ಮೀನಿನ ತ್ಯಾಜ್ಯವನ್ನು ಸಂಜೆ ಅಲ್ಲಿಯೇ ಸುರಿದು ಹೋಗುತ್ತಾರೆ. ಮೀನುತ್ಯಾಜ್ಯ ಕೊಳೆತು ಇಡೀ ನಗರ ದುರ್ನಾತ ಬೀರುತ್ತಿದೆ. ಇಂತಹ ಅವ್ಯವಸ್ಥೆಯಲ್ಲೇ ಮೀನುಮಾರಾಟ ನಿತ್ಯ ಸಾಗಿದೆ.

ಇದು ಮೀನು ಖರೀದಿಸುವವರಿಗೆ ಅಸಹನೀಯ ಹುಟ್ಟಿಸುತ್ತದೆ. ಇದರಿಂದ ನಾಗರಿಕರು ಮೀನುಮಾರುಕಟ್ಟೆಯತ್ತ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಾರೆ’ ಎಂದು ವಿವೇಕಾನಂದ ಬಡಾವಣೆಯ ನಿವಾಸಿಗಳಾದ ರಾಘವೇಂದ್ರ, ಸಾಯಿನಾಥ ಹೇಳುತ್ತಾರೆ.

ಹುಸಿ ಭರವಸೆಗಳು: ಯಾದಗಿರಿ ಜಿಲ್ಲೆಯಾಗಿ ಮೇಲ್ದರ್ಜೆಗೇರಿ ಏಳು ವರ್ಷ ಕಳೆದರೂ ನಗರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಲು ಜಿಲ್ಲಾಡಳಿತ ಮುಂದಾಗಿಲ್ಲ. ಒಂದು ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ಯಾವ ಮಾರುಕಟ್ಟೆಗಳನ್ನು ನಿರ್ಮಾಣಗೊಳಿಸಿಲ್ಲ.

ಪ್ರಾದೇಶಿಕ ಆಯುಕ್ತರು ಸಹ ಮುಳ್ಳುಬೇಲಿಯಲ್ಲಿನ ಮೀನುಮಾರುಕಟ್ಟೆ ಸ್ಥಿತಿಗತಿಯನ್ನು ನೋಡಿ ಹೋಗಿದ್ದಾರೆ. ಆದರೂ, ಇದುವರೆಗೂ ಮೀನು ಮಾರುಕಟ್ಟೆಗಾಗಿ ಜಿಲ್ಲಾಡಳಿತ ಕನಿಷ್ಠ ನಿವೇಶನ ನೀಡುವಂತೆ ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ಕಳುಹಿಸಿಲ್ಲ.

ಮಿನಿ ವಿಧಾನಸೌಧ ನಿರ್ಮಿಸಿಕೊಂಡಿರುವುದು ಹೊರತುಪಡಿಸಿದರೆ, ಸಾರ್ವಜನಿಕ ಸೇವೆಯಲ್ಲಿ ಜಿಲ್ಲಾಡಳಿತದ ಸಾಧನೆ ಶೂನ್ಯ. ಸಚಿವ, ಶಾಸಕರುಗಳು ಕೊಟ್ಟ ಭರವಸೆಗಳು ಹುಸಿಯಾಗಿವೆ ಎಂದು ಟೋಕ್ರಿ ಕೋಲಿ ಕಬ್ಬಲಿಗ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ ಮುದ್ನಾಳ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಸ್ತಾವ ಬಂದಿಲ್ಲ: ಸಚಿವ
ಮೀನು ಮಾರುಕಟ್ಟೆಗಾಗಿ ಇಲ್ಲಿಯವರೆಗೂ ಜಿಲ್ಲೆಯಿಂದ ಸರ್ಕಾರಕ್ಕೆ ಯಾವುದೇ ಪ್ರಸ್ತಾವ ಬಂದಿಲ್ಲ. ಜಿಲ್ಲಾಕೇಂದ್ರದಲ್ಲಿ ಮೀನುಮಾರುಕಟ್ಟೆ ನಿರ್ಮಾಣ ಮಾಡುವುದು ಸರ್ಕಾರದ ಜವಾಬ್ದಾರಿ.

ಈ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್‌ ಅವರೊಂದಿಗೂ ಚರ್ಚೆ ನಡೆಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ನಿವೇಶನ ಕೊರತೆ
ಮೀನುಗಾರಿಕೆ ಇಲಾಖೆಯಿಂದ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ಅಗತ್ಯ ಅನುದಾನ ಇದೆ. ಆದರೆ, ನಿವೇಶನ ಕೊರತೆ ಇದೆ. ನಿವೇಶನ ಇಲಾಖೆ ಅಥವಾ ಮೀನು ಸಹಕಾರಿ ಸಂಘದ ಹೆಸರಲ್ಲಿ ಇರಬೇಕು. ಆದರೆ, ನಿವೇಶನ ಸಿಗದೇ ಇರುವುದರಿಂದ ಮಾರುಕಟ್ಟೆ ನಿರ್ಮಾಣ ವಿಳಂಬವಾಗುತ್ತಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.