ADVERTISEMENT

ಮೌನ ಬದುಕಿಗೆ ಸಂಸಾರದ ಸರಿಗಮ

ಬೌದ್ಧಧರ್ಮದ ಅನ್ವಯ ನವ ದಾಂಪತ್ಯಕ್ಕೆ ಅಡಿಯಿಟ್ಟ ಮೂಗ ದಂಪತಿ

ಮಲ್ಲೇಶ್ ನಾಯಕನಹಟ್ಟಿ
Published 19 ಜೂನ್ 2018, 9:30 IST
Last Updated 19 ಜೂನ್ 2018, 9:30 IST
ಯಾದಗಿರಿಯಲ್ಲಿನ ಅಂಬೇಡ್ಕರ್ ನಗರದಲ್ಲಿ ಸೋಮವಾರ ಬೌದ್ಧಧರ್ಮದ ಸಂಪ್ರದಾಯದಂತೆ ಬಸವರಾಜ್‌–ಉಮಾದೇವಿ ಅವರು ವಿವಾಹವಾದರು
ಯಾದಗಿರಿಯಲ್ಲಿನ ಅಂಬೇಡ್ಕರ್ ನಗರದಲ್ಲಿ ಸೋಮವಾರ ಬೌದ್ಧಧರ್ಮದ ಸಂಪ್ರದಾಯದಂತೆ ಬಸವರಾಜ್‌–ಉಮಾದೇವಿ ಅವರು ವಿವಾಹವಾದರು   

ಯಾದಗಿರಿ: ಹುಟ್ಟಿನಿಂದಲೂ ಅವರದ್ದು ಮೌನ ಬದುಕು. ಇಷ್ಟು ವರ್ಷ ಸಾಗಿದ ಮೌನದ ಬದುಕಿನ ಹಾದಿಗೆ ಸೋಮವಾರ ಹಿರಿಯರು ಕೂಡಿಕೊಂಡು ಅವರಿಗೆ ಮದುವೆ ಮಾಡಿಸಿದರು. ಇಬ್ಬರೂ  ಸಂತಸದಿಂದ ಸತಿಪತಿಯಾದರು.

ನಗರದ ಅಂಬೇಡ್ಕರ್‌ ನಗರದಲ್ಲಿ ಸೋಮವಾರ ನಡೆದ ಮೂಕ ಜೋಡಿಯ ಮದುವೆಯ ಚಿತ್ರಣ ಇದು. ಅಂಬೇಡ್ಕರ್ ನಗರದ ನಿವೃತ್ತ ಪೌರಕಾರ್ಮಿಕ ಮಲ್ಲಿಕಾರ್ಜುನ ಅವರಿಗೆ ಐವರು ಪುತ್ರರಲ್ಲಿ ಮೂವರು ಮೂಗರಿದ್ದಾರೆ. ಮೊದಲ  ಪುತ್ರ ಮಲ್ಲಿಕಾರ್ಜುನ ಮೂಗ. ಅನಾರೋಗ್ಯದ ಪರಿಣಾಮ ಮೃತಪಟ್ಟಿದ್ದಾರೆ. ಉಳಿದವರು ರವಿಕುಮಾರ್, ಮಂಜುನಾಥ, ಬಸವರಾಜ್, ವಿನೋದ್. ಮೂರನೇಯ ಪುತ್ರ  ಬಸವರಾಜ ಅವರು ಹುಟ್ಟಿನಿಂದಲೂ ಮೂಗರಾಗಿದ್ದು, ಅವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಬಸವರಾಜ  ಅವರಿಗೆ ಈಗ 23 ವರ್ಷ. ಅದೇ ಬಡಾವಣೆಯ ಹನುಮಂತಪ್ಪ ಅವರ ಪುತ್ರಿ ಯುವತಿ ಉಮಾದೇವಿ ಅವರಿಗೆ 19 ವರ್ಷ. ಇಬ್ಬರಿಗೂ ಕಿವಿ ಕೇಳುತ್ತದೆ. ಸಂಜ್ಞೆಗಳ ಮೂಲಕ ಮನದಿಚ್ಛೆ ವ್ಯಕ್ತಪಡಿಸುತ್ತಾರೆ. ಮಗನಿಗೆ ಮದುವೆ ವಯಸ್ಸಾದ ಮೇಲೆ ತಂದೆ ಮಲ್ಲಿಕಾರ್ಜುನಪ್ಪ ಅವರಿಗೆ ಚಿಂತೆ ಆಗಿತ್ತು. ಮೂಗನಾಗಿರುವ ಮಗನಿಗೆ ಹೆಣ್ಣು ತುರುವುದು ಎಲ್ಲಿಂದ? ಉಳಿದ ಸಹೋದರರು ಮದುವೆಯಾದ ಮೇಲೆ ಈತನ ಪರಿಸ್ಥಿತಿಯೇನು? ಎಂಬುದು ಅವರನ್ನು ಚಿಂತೆಗೀಡು ಮಾಡಿತ್ತು.

ADVERTISEMENT

ಅದೇ ರೀತಿಯಲ್ಲಿ ಹನುಮಂತಪ್ಪ ಅವರ ಪುತ್ರಿ ಉಮಾದೇವಿ ಅವರೂ ಮೂಗಿ. ಯುವಕ ಬಸವರಾಜ್ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾರೆ. ಉಮಾದೇವಿ ಗೃಹ ಕೆಲಸದಲ್ಲಿ ನಿಪುಣರಾಗಿದ್ದಾರೆ. ಇಬ್ಬರಿಗೂ ಮದುವೆ ಮಾಡಿಸಿದರೆ ಹೇಗೆ? ಎಂಬುದಾಗಿ ಕೆಲವರು ಮಲ್ಲಿಕಾರ್ಜುನ ಅವರಿಗೆ ಸಲಹೆ ಕೊಟ್ಟರು. ಸಲಹೆ ಸರಿ ಅನ್ನಿಸಿದರೂ ಯುವಕ, ಯುವತಿಯರ ಮನದಿಚ್ಛೆ ಅರಿಯಬೇಕಲ್ಲ ಎಂಬುದು ಅವರ ನಿಲುವಾಗಿತ್ತು.

ಮದುವೆ ಆಗುವಂತೆ ತಂದೆ ಅಭಿಪ್ರಾಯ ಕೇಳಿದಾಗ ಬಸವರಾಜ ಅವರಿಗೆ ತಮಾಷೆ ಎನಿಸಿ ನಕ್ಕಿದ್ದರು.  ಆದರೆ, ಸಹೋದರರಿಂದ ಮದುವೆ ವಿಷಯ ಗಂಭೀರ ಎಂಬುದು ಅರಿತು ಒಪ್ಪಿಗೆ ಕೊಟ್ಟ. ಅತ್ತ, ಕೇಳಿದೊಡನೆ ಹನುಮಂತಪ್ಪ ಮಗಳನ್ನು ಧಾರೆಯೆರೆಯಲು ಸಿದ್ಧರಾದರು.
ಆದರೆ, ಒಂದೇ ಜಾತಿಯಾಗಿದ್ದರೂ ಜಾತಿ ಸಂಪ್ರದಾಯಗಳನ್ನು ಮೀರಿ ಅವರು ಬೌದ್ಧಧರ್ಮದ ಸಂಪ್ರದಾಯದಂತೆ ಮಹಾತಪಸ್ವಿ ಬುದ್ಧ, ಅಂಬೇಡ್ಕರ್‌ ಭಾವಚಿತ್ರಗಳಿಗೆ ಹೂಮಾಲೆ ಹಾಕಿ ಇಬ್ಬರೂ ಮಾಲೆ ಬದಲಿಸಿಕೊಂಡು ಸತಿಪತಿಗಳಾದರು. ಶಹಾಪುರದ ಬಂತೇಜೀ
ದಂಪತಿಗೆ ಬೌದ್ಧಧರ್ಮಗಳ ಕೆಲ ಸಾಲು ಬೋಧಿಸಿ ‘ಕಂಕಣ ಭಾಗ್ಯ’ಕಲ್ಪಿಸಿದರು.

‘ಕಿವುಡರು ಮಾತ್ರ ಮೂಗರಾಗುವುದು ಹೆಚ್ಚು. ಏಕೆಂದರೆ ಶಬ್ದದಲೆಗಳು ಕಿವಿತಂತುಗಳ ಮೇಲೆ ಬೀಳದೇ ಇದ್ದಾಗ ಮಾತು ಕಲಿಕೆ ಕಷ್ಟಸಾಧ್ಯ. ಹಾಗಾಗಿ, ಹುಟ್ಟು ಕಿವುಡರು ಮೂಗರಾಗುತ್ತಾರೆ. ಆದರೆ, ಕೇವಲ ಧ್ವನಿಪೆಟ್ಟಿಗೆಯಲ್ಲಿನ ಸಮಸ್ಯೆಯಿಂದಾಗಿ ಕೆಲವರು ಮೂಗತನ ಅನುಭವಿಸುತ್ತಾರೆ. ಆಗಾಗ ಕಿವಿ ಮೇಲೆ ಶಬ್ದದಲೆಗಳು ಬೀಳುವುದರಿಂದ ಅವರು ಮಾತು ಕಲಿಕೆಗೆ ಮುಂದಾಗುತ್ತಾರೆ. ಆದರೆ, ಮಾತನಾಡಲು ಅಸಾಧ್ಯವಾದಾಗ ಸಂಜ್ಞೆಗಳ ಮೂಲಕ ಮಾತುನಾಡಲು ಆರಂಭಿಸುತ್ತಾರೆ. ಈ ಕಾರಣಕ್ಕಾಗಿಯೇ ಬ್ರೈಲ್‌ ಲಿಪಿ
ಮೂಗರ ಸಂಪರ್ಕ ಭಾಷೆಯಾಗಿದೆ. ಸಂಜ್ಞೆಗಳಿಂದ ಅವರು ಹೆಚ್ಚು ಸ್ಪಷ್ಟತೆ ಪಡೆಯುತ್ತಾರೆ’ ಎನ್ನುತ್ತಾರೆ ಖಾಸಗಿ ಆಸ್ಪತ್ರೆಯ ಕಿವಿ ತಜ್ಞ ವೈದ್ಯ ಡಾ.ಸಂಗಮೇಶ್.

ಜತೆಗೆ ನಾವಿದ್ದೇವೆ: ರವಿ

ಸಹೋದರ ಬಸವರಾಜ್ ಮತ್ತು ಅವರ ಸಂಸಾರಕ್ಕೆ ಊರುಗೋಲಿನಂತೆ ನಾವು ಜತೆಗಿರುತ್ತೇವೆ ಎಂಬುದಾಗಿ ಬಸವರಾಜ್‌ ಅವರ ಅಣ್ಣ ರವಿಕುಮಾರ್ ಹೇಳುತ್ತಾರೆ. ಮಕ್ಕಳಾದ ಮೇಲೆ ವೃದ್ಧಾಪ್ಯದಲ್ಲಿ ಈ ಇಬ್ಬರಿಗೂ ಮಕ್ಕಳು ಆಸರೆಯಾಗಲಿದ್ದಾರೆ ಎಂಬ ಸದುದ್ದೇಶದಿಂದಲೇ ಮದುವೆ ಮಾಡಿಸಿದ್ದೇವೆ. ಒಂದೇ ಬಡಾವಣೆಯಲ್ಲಿ ಹುಟ್ಟಿ ಬೆಳೆದಿರುವ ಇವರು ಹೊಂದಿಕೊಂಡು ಸಂಸಾರ ಸಾಗಿಸಲಿದ್ದಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಅವರು.

ಮೂಕರು ಎಂದು ನಿರ್ಲಕ್ಷಿಸಿದರೆ ಅವರ ಬದುಕು ಬರಡಾಗುತ್ತಿತ್ತು. ಈ ಮದುವೆ ಸಮಾಜಕ್ಕೂ ಮಾದರಿಯಾಗಿದೆ
ಮಲ್ಲಿಕಾರ್ಜುನ, ವರನ ತಂದೆ, ಯಾದಗಿರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.