ADVERTISEMENT

ಯಾದಗಿರಿಯಲ್ಲಿ ಹೈಟೆಕ್ ಗ್ರಂಥಾಲಯ; ಎಚ್‌ಕೆಆರ್‌ಡಿಬಿಯಿಂದ ₹1.75 ಕೋಟಿ ಅನುದಾನ

ಸತೀಶ್‌ ಬಿ
Published 6 ಮೇ 2019, 5:29 IST
Last Updated 6 ಮೇ 2019, 5:29 IST
ಯಾದಗಿರಿಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡ
ಯಾದಗಿರಿಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಹಳೆಯ ಕಟ್ಟಡ   

ಯಾದಗಿರಿ: ಓದುಗರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ನಗರದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣ ಆಗಲಿದೆ.

ಗ್ರಂಥಾಲಯ ನಿರ್ಮಾಣಕ್ಕೆ ಈಗಾಗಲೇ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ವತಿಯಿಂದ ₹ 1.75 ಕೋಟಿ ಅನುದಾನ ಬಿಡುಗಡೆ ಆಗಿದೆ. ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ.

ನಗರದ ಹೈದರಾಬಾದ್ ರಸ್ತೆಯ ಹೊಸಳ್ಳಿ ಕ್ರಾಸ್ ಬಳಿಯ ನಜರತ್ ಕಾಲೊನಿಯಲ್ಲಿ ಗ್ರಂಥಾಲಯ ನಿರ್ಮಾಣ ಆಗಲಿದೆ. ಸುಮಾರು 4 ಲಕ್ಷ ಪುಸ್ತಕಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ.

ADVERTISEMENT

ಇಲ್ಲಿನ ಸೇಡಂ ರಸ್ತೆಯ ಕನಕ ವೃತ್ತದ ಬಳಿ ಜಿಲ್ಲಾ ಗ್ರಂಥಾಲಯದಹಳೆಯ ಕಟ್ಟಡ ಇದೆ. ಅದರಲ್ಲಿ 25 ಸಾವಿರ ಪುಸ್ತಕಗಳು ಇವೆ. ಆದರೆ, ಚಿಕ್ಕ ಕಟ್ಟಡ ಆಗಿರುವುದರಿಂದ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಲು ಆಗಿಲ್ಲ. ಅಲ್ಲದೆ, ಕಟ್ಟಡ ಶಿಥಿಲಗೊಂಡಿರುವುದರಿಂದ ಅದನ್ನು ಬೇಗ ಸ್ಥಳಾಂತರಿಸಬೇಕು ಎನ್ನುತ್ತಾರೆ ಅಧಿಕಾರಿಗಳು.

ಅದೇ ರೀತಿ ನಗರದ ಸೇಡಂ ರಸ್ತೆಯ ಸಿ.ಎಂ.ಪಾಟೀಲ ಆಸ್ಪತ್ರೆ ಬಳಿ ಇರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಆಡಳಿತ ಕಚೇರಿಯ ಕಟ್ಟಡದ ಕೆಲವು ಕೊಠಡಿಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಇಲ್ಲಿರುವ ಪುಸ್ತಕಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ್ದು, ವಿದ್ಯಾರ್ಥಿಗಳು, ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಮಾತ್ರ ಅನುಕೂಲ ಆಗುತ್ತಿದೆ.

ನೂತನ ಕಟ್ಟಡ ನೆಲ ಮಹಡಿ ಮತ್ತು ಮೊದಲ ಮಹಡಿಯನ್ನು ಒಳಗೊಂಡಿದೆ. ಕಟ್ಟಡ ನಿರ್ಮಾಣ ಆದ ನಂತರ ಎರಡೂ ಕಡೆ ಇರುವ ಪುಸ್ತಕಗಳ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಎಂ.ಎಸ್.ರೆಬಿನಾಳ ಹೇಳಿದರು.

ಹೈಟೆಕ್ ಗ್ರಂಥಾಲಯದಲ್ಲಿ ವಾಚಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಈಗಿರುವ ಹಳೆಯ ಗ್ರಂಥಾಲಯದಲ್ಲಿ ಪುಸ್ತಕಗಳು, ನಿಯತಕಾಲಿಕೆಗಳಿಗೆ ಪ್ರತ್ಯೇಕ ಸ್ಥಳ ಇರಲಿಲ್ಲ. ಇದರಿಂದ ಓದಲು ಕಿರಿಕಿರಿ ಆಗುತ್ತಿತ್ತು. ಹೊಸ ಗ್ರಂಥಾಲಯದಲ್ಲಿ ಅದು ತಪ್ಪುತ್ತದೆ ಎಂದರು.

ನೂತನ ಕಟ್ಟಡದಲ್ಲಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗುವುದು. ಅಲ್ಲದೆ, ಪೂರಕ ಮಾಹಿತಿ ಕೇಂದ್ರ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಅವರಿಗೆ ಅನುಕೂಲವಾಗುವಂತೆ ಡಿಜಿಟಲ್ ಲೈಬ್ರರಿ, ಇ–ರೀಡಿಂಗ್ ವಿಭಾಗಗಳನ್ನು ಆರಂಭಿಸಲಾಗುವುದು ಎಂದು ವಿವರಿಸಿದರು.

ನೂತನ ಲೈಬ್ರರಿ ನಿರ್ಮಾಣ ಆದರೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಆಡಳಿತ ಕಚೇರಿಯಲ್ಲಿ ಸಾಕಷ್ಟು ಸ್ಥಳಾವಕಾಶ ಸಿಗುತ್ತದೆ. ಇದರಿಂದ ತಾಲ್ಲೂಕು ಗ್ರಂಥಾಲಯಗಳಿಗೆ ಕಳಿಸುವ ಪುಸ್ತಕಗಳನ್ನು ಸಂಗ್ರಹಿಸಲು ಅನುಕೂಲ ಆಗುತ್ತದೆ ಎಂದರು.

*
ಹೈಟೆಕ್‌ ಗ್ರಂಥಾಲಯ ನಿರ್ಮಾಣದಿಂದ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರಿಗೆ ಅನುಕೂಲ ಆಗುತ್ತದೆ. ಶೀಘ್ರ ಕಾಮಗಾರಿ ಆರಂಭವಾಗಲಿದ್ದು, ಎಂಟು ತಿಂಗಳಲ್ಲಿ ಮುಗಿಯಲಿದೆ.
ಎಂ.ಎಸ್.ರೆಬಿನಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.