ADVERTISEMENT

ಯಾದಗಿರಿ: 140 ಶಾಲಾ ಕಟ್ಟಡಗಳು ಶಿಥಿಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:55 IST
Last Updated 18 ನವೆಂಬರ್ 2017, 9:55 IST
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಣಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಲೆ ದುರಸ್ತಿಗೆ ಸಂಬಂಧಿಸಿದಂತೆ ಸದಸ್ಯೆ ನಾಗಮ್ಮ ಬಸನಗೌಡ ಡಿಡಿಪಿಐ ಬಸವರಾಜ ಗೌನಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಣಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಲೆ ದುರಸ್ತಿಗೆ ಸಂಬಂಧಿಸಿದಂತೆ ಸದಸ್ಯೆ ನಾಗಮ್ಮ ಬಸನಗೌಡ ಡಿಡಿಪಿಐ ಬಸವರಾಜ ಗೌನಳ್ಳಿ ಅವರನ್ನು ತರಾಟೆಗೆ ತೆಗೆದುಕೊಂಡರು   

ಯಾದಗಿರಿ: ‘ಜಿಲ್ಲೆಯಲ್ಲಿ ಒಟ್ಟು 140 ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ಇದ್ದರೂ, ಕಟ್ಟಡಗಳ ದುರಸ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಶಾಲಾ ಮಕ್ಕಳು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ’ ಎಂದು ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಗೌನಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಾಳೆಬೆಳಗುಂದಿಯಲ್ಲಿ ಎರಡು ವರ್ಷಗಳ ಹಿಂದೆ ಆರಂಭಿಸಿರುವ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಅಲ್ಲಿನ ಮಕ್ಕಳ ಕಲಿಕೆಗೆ ಗ್ರಾಮದ ಹನುಮಂತ ದೇಗುಲವೇ ಆಧಾರವಾಗಿದೆ. ಒಂದು ಶಾಲೆ ಕಟ್ಟಡ ಪೂರ್ಣಗೊಳಿಸಲು ಎರಡು ವರ್ಷ ಬೇಕೇ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭೀಮರೆಡ್ಡಗೌಡ ಪ್ರಶ್ನಿಸಿದರು.

ಯಾದಗಿರಿ ತಾಲ್ಲೂಕಿನ ಅರಿಕೇರಾ (ಕೆ), ಮದ್ದರಕಿ, ಮೂಡಬೂಳ ಸೇರಿದಂತೆ ವಿವಿಧ ಶಾಲೆಗಳ ಕಟ್ಟಡಗಳು ಕೂಡ ಅಪಾಯದ ಸ್ಥಿತಿಯಲ್ಲಿವೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ’ ಎಂದು ಸದಸ್ಯರಾದ ರಾಜಶ್ರೀ, ನಾಗಮ್ಮ ಬಸನಗೌಡ, ಶಿವಲಿಂಗಪ್ಪ ಆರೋಪಿಸಿದರು.

ADVERTISEMENT

‘ಶಾಲೆ ಕಟ್ಟಡ ದುರಸ್ತಿಗೆ ಇಲಾಖೆಯಲ್ಲಿ ಅನುದಾನ ಇಲ್ಲ. ಅನುದಾನ ನೀಡುವಂತೆ ಹೈದರಾಬಾದ್‌ ಕರ್ನಾಟಕ  ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಡಿಡಿಪಿಐ ಬಸವರಾಜ ಗೌನಳ್ಳಿ ಉತ್ತರಿಸಿದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಪಡೆಯಲು ಅವಕಾಶ ಇದ್ದರೆ ಪ್ರಸ್ತಾವ ಸಲ್ಲಿಸುವಂತೆ ಪ್ರಭಾರ ಸಿಇಒ ಜೆ.ಮಂಜುನಾಥ್ ಡಿಡಿಪಿಐಗೆ ಸೂಚಿಸಿದರು.

ಜಿ.ಪಂ ಅಧ್ಯಕ್ಷ ಬಸರಡ್ಡಿ ಪಾಟೀಲ ಮಾತನಾಡಿ, ‘ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಕ್ರಿಯಾಯೋಜನೆಯ ವರದಿಯನ್ನು ಸಿದ್ಧಪಡಿಸಿ  ಶೀಘ್ರ ವರದಿ ಸಲ್ಲಿಸಬೇಕು. 2018ರ ಫೆಬ್ರುವರಿ ಅಂತ್ಯದೊಳಗೆ ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಈ ಹಿಂದೆ ಆರೋಗ್ಯ ಇಲಾಖೆಗೆ ವಿವಿಧ ಕಾಮಗಾರಿಗಳಿಗೆ ಅನುಮೋದನೆಗೊಂಡಿದ್ದ ₹2 ಕೋಟಿ ಅನುದಾನ ವಾಪಸ್ ಪಡೆಯಲು ಮೇಲಧಿಕಾರಿಗಳಿಗೆ ಪತ್ರ ಬರೆಯಲು ಕ್ರಮ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನರಸಿಂಹಲು ಅವರಿಗೆ ಸೂಚಿಸಿದರು.

‘ಟಾಸ್ಕ್‌ಫೋರ್ಸ್‌ ನಿಂದ 60 ಕಾಮಗಾರಿಗಳಲ್ಲಿ 59 ಕ್ರಿಯಾಯೋಜನೆ ಆಗಿವೆ. ಶಿರವಾಳ ಗ್ರಾಮದ ಒಂದು ಕಾಮಗಾರಿಯ ಕ್ರಿಯಾಯೋಜನೆ ವರದಿ ಸಲ್ಲಿಸುವುದು ಬಾಕಿ ಉಳಿದಿದೆ.

ಜಿಲ್ಲೆಯಲ್ಲಿ ಸುವರ್ಣ ಗ್ರಾಮ ಕುರಿತು ಕ್ರಿಯಾಯೋಜನೆ ಶೀಘ್ರ ಮುಗಿಸಿ ವರದಿ ಸಲ್ಲಿಸಿದರೆ ಎಚ್‌.ಕೆ.ಆರ್‌.ಡಿ.ಬಿ ಯೋಜನೆ ಅಡಿ ಬೇಕಾಗುವ ಅನುದಾನಕ್ಕೆ ಅನುಮೋದನೆ ದೊರಕಿಸಲು ಅನುಕೂಲವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಪ್ರಭಾರ ಸಿಇಒ ಸದಸ್ಯರಿಗೆ ವಿವರಿಸಿದರು. ಜಿ.ಪಂ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಉಪ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ, ಯೋಜನಾಧಿಕಾರಿ ಸುನಿಲ್ ಬಿಸ್ವಾಸ್ ಇದ್ದರು.

‘ಕಾಲ್‌ ರಿಸೀವ್‌ ಮಾಡಲ್ರಿ ಸಾಹೇಬ್ರಾ’
‘ನೀವಾದ್ರೂ ಫೋನ್‌ ಲಿಫ್ಟ್‌ ಮಾಡೀರಿ ಆದ್ರೆ ಸಾಹೇಬ್ರಾ ನಿಮ್‌ ಅಧಿಕಾರಿಗಳು ನನ್‌ ಪೋನ್‌ ರಿಸೀವ್‌ ಮಾಡವಲ್ರು. ಇದರಿಂದ ಭಾಳ್ ಬ್ಯಾಸರ ಬಂದೈತ್ರಿ. ಕನಿಷ್ಠ ಫೋನ್‌ ಆದ್ರೋ ತಗೋರೀ ಅಂತಾ ಆದೇಶ ಮಾಡ್ರಿ...’

ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಮರ್ಲಿಂಗಪ್ಪ ಕರ್ನಾಳ ಸಿಇಒಗೆ ಈ ಪರಿಯಾಗಿ ಮನವಿ ಮಾಡಿದರು. ಜನಪ್ರತಿನಿಧಿಗಳ ಮೊಬೈಲ್ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಸ್ಪಂದಿಸುವಂತೆ ಪ್ರಭಾರ ಸಿಇಒ ಮಂಜುನಾಥ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.