ADVERTISEMENT

ಯುರೇನಿಯಂ ಗಣಿಗಾರಿಕೆ ಚರ್ಚೆ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 9:20 IST
Last Updated 12 ಸೆಪ್ಟೆಂಬರ್ 2011, 9:20 IST

ಶಹಾಪುರ: ಗೋಗಿ ಯುರೇನಿಯಂ ಗಣಿಗಾರಿಕೆ ಪ್ರದೇಶದಲ್ಲಿ  ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಕೇವಲ ಭರವಸೆ ನೀಡಿ ಕೈ ತೊಳೆದುಕೊಳ್ಳುವುದನ್ನು ನಿಲ್ಲಿಸಲಿ. ಕೇವಲ  ಸಭೆ ನಡೆಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಕುಡಿಯುವ ನೀರಿಗಾಗಿ ಹಿಂದೆ ನೀಡಿದ ಭರವಸೆ ಏನಾಯಿತು ಎಂದು ಯುರೇನಿಯಂ ಗಣಿಗಾರಿಕೆ ಸಂಬಂಧದ ಸಭೆಯಲ್ಲಿ ದಲಿತ ಮುಖಂಡ ಚಂದ್ರು ಚಕ್ರವರ್ತಿ ಏರು ಧ್ವನಿಯಲ್ಲಿ ವಾದಕ್ಕೆ ಇಳಿದರು.

ಆಗ ಜೀವ ವೈವಿದ್ಯ ಮಂಡಳಿಯ ಉಪಾಧ್ಯಕ್ಷ ಅನಂತ ಹೆಗಡೆ ಅಶೀಸರ, ನಿಮ್ಮ ಸಮಸ್ಯೆಯ ನೋವು ನಮಗೂ ಗೊತ್ತಾಗುತ್ತದೆ. ನಾನು ಇದರ ಬಗ್ಗೆ ಪರಿಶೀಲನೆ ಮಾಡಲು ಬಂದಿದ್ದೇನೆ. ಎಲ್ಲರೂ ಕೂಡಿ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಹೇಳಿದರು.

ಅದಕ್ಕೆ ತೃಪ್ತರಾಗದೆ ಅಲ್ಲಿ ನೆರೆದ ಜನತೆ ಗಲಾಟೆ ಎಬ್ಬಿಸಿ ಮಾತಿಗೆ ಮಾತು ಬೆಳೆಸಿದರು. ಆಗ ಸಭೆ ಗೊಂದಲದ ಗೂಡಾಯಿತು. ಕೊನೆಗೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅನಂತ ಹೆಗಡೆ ಹೊರ ನಡೆದ ಪ್ರಸಂಗ ಜರುಗಿತು.

ಇದಕ್ಕೆ ಮೊದಲು ಯುರೇನಿಯಂ ಗಣಿಗಾರಿಕೆ ಕೇವಲ ಗೋಗಿ ಗ್ರಾಮದ ಜನತೆಯ ಪ್ರಶ್ನೆಯಲ್ಲ. ಅದರ ಸುತ್ತಮುತ್ತಲಿನ ಶಹಾಪುರ, ದಿಗ್ಗಿ, ಉಮರದೊಡ್ಡಿ, ಸೈದಾಪುರ, ಭೀಮರಾಯನಗುಡಿ ಹೀಗೆ ಹತ್ತಾರು ಹಳ್ಳಿಗಳು ಹಾಗೂ ಪಟ್ಟಣದ ಜನತೆಗೂ ಇದು ಗಂಡಾಂತರ ತರುವ ಅಪಾಯವಿದೆ.

ಸರ್ಕಾರದ ಪರಿಹಾರ ನಮಗೆ ಬೇಕಿಲ್ಲ. ಬದುಕುವ ಹಕ್ಕಿಗೆ ಅವಕಾಶ ನೀಡಿ ಎಂದು `ಭೂಮಿ ತಾಯಿ ಹೋರಾಟ ಸಮಿತಿ~ ಸಂಚಾಲಕ ಮಲ್ಲಪ್ಪ ಪರಿವಾಣ, ಡಾ.ಬಸವರಾಜ ಇಜೇರಿ, ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ, ರಕ್ಷಣಾ ವೇದಿಕೆ ಸಂಚಾಲಕ ಶರಣು ಗದ್ದುಗೆ, ಚಂದಪ್ಪ ಸೀತ್ನಿ, ಬಸವರಾಜ ಸಗರ ಒತ್ತಾಯಿಸಿದರು.

ಗೈರು ಹಾಜರಿ: ಯುರೇನಿಯಂ ಗಣಿಗಾರಿಕೆ ಅಪಾಯದ ಬಗ್ಗೆ ನಡೆದ ಸಭೆಯಲ್ಲಿ ಜನರ ನೋವಿಗೆ ಸ್ಪಂದಿಸಬೇಕಾದ ಸ್ಥಳೀಯ ಜನಪ್ರತಿಧಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಕೇವಲ ಬೆರಳೆಣಿಕೆಯ ಜನಪ್ರತಿನಿಧಿಗಳು ಮಾತ್ರ ಆಗಮಿಸಿ ಮೌನವಹಿಸಿ ಕುಳಿತಿದ್ದು ಕಂಡು ಬಂದಿತು.

ಸಭೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಆದರೆ ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದೆ ಅರ್ಧಕ್ಕೆ ಮೊಟಕುಗೊಂಡದ್ದು ಜನರಲ್ಲಿ ಬೇಸರ ಮೂಡಿಸಿತು. ಸಾರ್ವಜನಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಬಂದವರ ಜೊತೆ ಗೊಂದಲ ಉಂಟು ಮಾಡಿದ್ದು ಸರಿಯಲ್ಲ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.