ADVERTISEMENT

ರೈತರ ತೊಗರಿ ಹಣ ಪಾವತಿಗೆ ಒತ್ತಾಯ

ಕಾಂಗ್ರೆಸ್ ಕಿಸಾನ್ ಘಟಕದ ಪದಾಧಿಕಾರಿಗಳಿಂದ ಜಿಲ್ಲಾಡಳಿತಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:55 IST
Last Updated 4 ಮೇ 2018, 12:55 IST

ಯಾದಗಿರಿ: ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ಸರ್ಕಾರ ಖರೀದಿಸಿರುವ ತೊಗರಿ ಹಣವನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ ಬುಧವಾರ ಕಾಂಗ್ರೆಸ್ ಕಿಸಾನ್ ಘಟಕದ ಪದಾಧಿಕಾರಿಗಳು, ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಸರ್ಕಾರ ರೈತರಿಂದ ತೊಗರಿ ಖರೀದಿಸಿ ನಾಲ್ಕು ತಿಂಗಳು ಕಳೆದಿದ್ದರೂ, ರೈತರಿಗೆ ತೊಗರಿ ಹಣ ನೀಡಿಲ್ಲ. ಇನ್ನೊಂದು ವಾರ ಕಳೆದರೆ ಮುಂಗಾರು ಹಂಗಾಮು ಆರಂಭವಾಗಲಿದೆ. ಕೃಷಿ ಚಟುವಟಿಕೆ ಹಮ್ಮಿಕೊಳ್ಳಲು ರೈತರ ಬಳಿ ಬಿಡಿಗಾಸು ಇಲ್ಲ. ರೈತರು ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ದಲ್ಲಾಳಿಗಳ ಬಳಿ ಸಾಲಕ್ಕಾಗಿ ಕೈಚಾಚಬೇಕಾದಂತಹ ಪರಿಸ್ಥಿತಿಗೆ ಸರ್ಕಾರ ರೈತರನ್ನು ದೂಡಿದೆ’ ಎಂದು ರೈತರು ದೂರಿದರು.

‘ಕಕ್ಕೇರಾ ಹುಣಸಗಿ, ಹಸನಾಪುರ ಸೇರಿದಂತೆ ಹಲವು ತೊಗರಿ ಖರೀದಿ ಕೇಂದ್ರಗಳಲ್ಲಿನ ಅಧಿಕಾರಿಗಳಿಗೆ ತೊಗರಿ ಖರೀದಿ ಹಣ ಪಾವತಿಗೆ ಸಂಬಂಧಿಸಿದಂತೆ ವಿಚಾರಿಸಿದರೆ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ತೊಗರಿ ಖರೀದಿ ಹಣಕ್ಕೆ ಸಂಬಂಧಿಸಿದಂತೆ ವಿಚಾರಿಸುವ ರೈತರನ್ನು ಅಧಿಕಾರಿಗಳು ದಬಾಯಿಸುತ್ತಿದ್ದಾರೆ. ಇದರಿಂದಾಗಿ ತೊಗರಿ ಮಾರಾಟ ಮಾಡಿರುವ ರೈತರು ಗೊಂದಲಕ್ಕೆ ಸಿಲುಕಿದ್ದು, ಸಂಕಷ್ಟ ಎದುರಿಸುವಂತಾಗಿದೆ’ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ADVERTISEMENT

ಚುನಾವಣೆ ಮುಗಿಯುತ್ತಿದ್ದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ನೊಂದ ರೈತರು ಜಿಲ್ಲಾಡಳಿತ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುರಪುರ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಮಾರ್ತಾಂಡಪ್ಪ ಯಾಳಗಿ ದೇವಾಪುರ, ಮಾರ್ತಾಂಡಪ್ಪ ಪೂಜಾರಿ, ದೇವಿಂದ್ರಪ್ಪ ಕರಿಕೇರಿ, ದೇವಿಂದ್ರಪ್ಪ, ಹೊನ್ನಪ್ಪ, ಮಲ್ಲಿಕಾರ್ಜುನ, ಶಂಕ್ರಮ್ಮ, ಭೀಮಣ್ಣ, ದೇವಿಂದ್ರಪ್ಪ ಬಾಗಲಿ, ಲಿಂಗೋಜಿರಾವ ಮತ್ತಿತರರು ಇದ್ದರು.

**
ದೇವರಾಜ ಅರಸು ಹೊರತುಪಡಿಸಿದರೆ ಇದುವರೆಗೂ ಒಬ್ಬ ಮುಖ್ಯಮಂತ್ರಿಯೂ ರಾಜ್ಯದಲ್ಲಿನ ರೈತರ ಹಿತ ಕಾಪಾಡಿಲ್ಲ  – ಮಾರ್ತಾಂಡಪ್ಪ ಯಾಳಗಿ, ಅಧ್ಯಕ್ಷ , ಕಾಂಗ್ರೆಸ್ ಕಿಸಾನ್ ಘಟಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.