ADVERTISEMENT

ರೈಲು ಸೌಲಭ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 9:25 IST
Last Updated 7 ಮಾರ್ಚ್ 2011, 9:25 IST
ರೈಲು ಸೌಲಭ್ಯ ಕಲ್ಪಿಸಲು ಆಗ್ರಹ
ರೈಲು ಸೌಲಭ್ಯ ಕಲ್ಪಿಸಲು ಆಗ್ರಹ   

ಯಾದಗಿರಿ: ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಗೆ ರೈಲ್ವೆ ಸೌಲಭ್ಯ ಕಲ್ಪಿಸು ವಂತೆ ಆಗ್ರಹಿಸಿ ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಭಾನುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿಯ ಶಾಸ್ತ್ರಿ ವೃತ್ತದ ಮೆರವಣಿಗೆ ಆರಂಭಿಸಿದ ಸಮಿತಿ ಸದಸ್ಯರು, ರೈಲು ನಿಲ್ದಾಣದವರೆಗೆ ತೆರಳಿ ಸಾಂಕೇತಿಕ ಧರಣಿ ನಡೆಸಿದರು. ನಂತರ ರೈಲ್ವೆ ಅಧಿಕಾರಿಗಳ ಮೂಲಕ ರೈಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಯಾದಗಿರಿಯಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆಗ್ರಹಿಸಿ ಗುಂತ ಕಲ್ಲಿನಲ್ಲಿರುವ ದಕ್ಷಿಣ ಮಧ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಹಾಗೂ ಸಿಕಂದರಾಬಾದಿನಲ್ಲಿರುವ ವಲಯ ವ್ಯವಸ್ಥಾಪಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು.

ದಕ್ಷಿಣ ಮಧ್ಯ ರೈಲ್ವೆ ವಲಯ ಕಚೇರಿ ಹಾಗೂ ವಿಭಾಗೀಯ ಕಚೇರಿ ಗಳು ಆಂಧ್ರಪ್ರದೇಶದಲ್ಲಿ ಇರುವುದ ರಿಂದ ಆಂಧ್ರಪ್ರದೇಶದ ಸಣ್ಣ ರೈಲು ನಿಲ್ದಾಣಗಳಲ್ಲಿಯೂ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡಲಾಗುತ್ತಿದೆ. ಗುಂತಕಲ್ ವಿಭಾಗದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುವ ಯಾದಗಿರಿ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಆಗುತ್ತಿಲ್ಲ. ರೈಲ್ವೆ ಅಧಿಕಾರಿಗಳ ಮಲತಾಯಿ ಧೋರಣೆ ಸರಿಯಲ್ಲ ಎಂದು ತಿಳಿಸಿದರು.

ಕರ್ನಾಟಕ ಎಕ್ಸ್‌ಪ್ರೆಸ್, ರಾಜಧಾನಿ ಎಕ್ಸ್‌ಪ್ರೆಸ್, ಗರೀಬ್ ರಥ ಎಕ್ಸ್‌ಪ್ರೆಸ್, ಬೆಂಗಳೂರು-ಗೋರಖಪುರ ಸಾಪ್ತಾ ಹಿಕ ಎಕ್ಸ್‌ಪ್ರೆಸ್, ರಾಜಕೋಟ್- ಕೊಯಿಮತ್ತೂರ ಸಾಪ್ತಾಹಿಕ ಎಕ್ಸ್‌ಪ್ರೆಸ್, ಬೆಂಗಳೂರು-ಅಹ್ಮದಾ ಬಾದ ಸಾಪ್ತಾಹಿಕ ಎಕ್ಸ್‌ಪ್ರೆಸ್, ಮಧುರೈ-ಕುರ್ಲಾ ಸಾಪ್ತಾಹಿಕ ಎಕ್ಸ್‌ಪ್ರೆಸ್, ಮುಂಬೈ-ಕನ್ಯಾಕುಮಾರಿ ಜಯಂತಿ ಎಕ್ಸ್‌ಪ್ರೆಸ್ ರೈಲುಗಳು ಯಾದಗಿರಿ ಮೂಲಕ ಹಾದು ಹೋಗು ತ್ತಿದ್ದರೂ ನಿಲುಗಡೆ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ಹೈದರಾಬಾದ-ಕೊಲ್ಹಾಪುರ ರಾಯಲ್‌ಸೀಮಾ ಎಕ್ಸ್‌ಪ್ರೆಸ್ ನಿತ್ಯ ಸಂಚರಿಸುವ ರೈಲನ್ನು ರದ್ದು ಮಾಡಿ, ವಾರಕ್ಕೆ ಎರಡು ದಿನ ಮಾಡಲಾಗಿದೆ. ಈ ರೈಲು ಮೊದಲಿನಂತೆ ಸಂಚರಿಸಲು ಕ್ರಮ ಕೈಗೊಳ್ಳಬೇಕು.

ಈ ಬಾರಿಯ ಬಜೆಟ್‌ನಲ್ಲಿ ರಾಯಚೂರು- ಕಾಚಿಗುಡಾ ರೈಲಿನ ಪ್ರಸ್ತಾಪವಿದ್ದು, ಇದನ್ನು ವಿಕಾರಾಬಾದ-ತಾಂಡೂರು- ಸೇಡಂ-ಯಾದಗಿರಿ ಮೂಲಕ ಸಂಚರಿಸುವಂತೆ ಮಾಡಬೇಕು. ಗುಲ್ಬರ್ಗ-ಬೆಂಗಳೂರು ಇಂಟರ್‌ಸಿಟಿ ರೈಲು ಪ್ರಾರಂಭಿಸಬೇಕು. ಸದ್ಯಕ್ಕೆ ಇರುವ ಗುಲ್ಬರ್ಗ-ರಾಯಚೂರು ಇಂಟರ್‌ಸಿಟಿ ರೈಲಿನ ಹೆಚ್ಚಿನ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ನೀಡದಿದ್ದರೆ ಮಾರ್ಚ್ 27 ರಿಂದ ರೈಲು ತಡೆ, ಸರದಿ ಉಪವಾಸ ಸತ್ಯಾಗ್ರಹವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಮಾತನಾಡಿ, ರೈಲು ಸೌಲಭ್ಯ ಎಲ್ಲರಿಗೂ ಅವಶ್ಯಕ ವಾಗಿದ್ದು, ಇದೊಂದು ಪಕ್ಷಾತೀತ ಹೋರಾಟ. ಇದಕ್ಕೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶೀಘ್ರದಲ್ಲಿಯೇ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡಿ, ಯಾದಗಿರಿಗೆ ಅವಶ್ಯಕವಾಗಿರುವ ರೈಲು ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಸಂಚಾಲಕಿ ನಾಗರತ್ನಾ ಕುಪ್ಪಿ,     ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ, ವೀರಶೈವ ಮಹಾಸಭೆ      ನಗರ ಘಟಕದ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ತಿಪ್ಪಣ್ಣ ಹೂಗಾರ, ನಿವೃತ್ತ ಶಿಕ್ಷಕ ವಿ.ಸಿ. ರೆಡ್ಡಿ, ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಅನಿಲ ಗುರೂಜಿ, ಹಿರಿಯ ಪತ್ರಕರ್ತ ಸಿ.ಎಂ. ಪಟ್ಟೇದಾರ, ಬಿಜೆಪಿ ಪದಾಧಿಕಾರಿ ಗಳಾದ ಲಿಂಗಪ್ಪ ಹತ್ತಿಮನಿ, ಗೋಪಾಲ ದಾಸನಕೇರಿ, ಸುನೀತಾ ಚವ್ಹಾಣ, ನಾಗರಾಜ ಬೀರನೂರ, ನಗರಸಭೆ ಸದಸ್ಯ ವಿನೋದ ಜೈನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.        ಭೀಮು ನಾಯಕ, ಜಯಕರ್ನಾಟಕ ಸಂಘ ಟನೆಯ ಕೃಷ್ಣಮೂರ್ತಿ ಕುಲಕರ್ಣಿ, ಅಂಬರೀಷ್ ಬಿಲ್ಲವ್, ವರ್ತಕರ ಸಂಘದ ಬದ್ರಿನಾರಾಯಣ ಭಟ್ಟಡ, ಸಿದ್ಧರಾಜರೆಡ್ಡಿ          ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.