ADVERTISEMENT

ಲೋಕಸಭೆ ಚುನಾವಣೆ: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 9:08 IST
Last Updated 8 ಮಾರ್ಚ್ 2014, 9:08 IST

ಯಾದಗಿರಿ: ಲೋಕಸಭೆಗೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿ­ಕಾರಿ­ ಕಚೇರಿ ಸಭಾಂಗಣದಲ್ಲಿ ಶುಕ್ರ­ವಾರ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಪೂರ್ವ ಭಾವಿ ಸಭೆ ನಡೆಸಿದರು.

ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ ಮಾತನಾಡಿ, ಚುನಾವಣೆ ಅಧಿಸೂಚನೆ ಮಾ. 19ರಂದು ಪ್ರಕ­ಟಿಸಲಾಗುತ್ತಿದ್ದು, ನಾಮಪತ್ರಗಳನ್ನು ಸ್ವೀಕರಿಸಲು ಮಾ. 26 ಕೊನೆಯ ದಿನ. 27 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆ­ಯಲು ಮಾ.29 ಕೊನೆಯ ದಿನ. ಮತದಾನ ಏಪ್ರಿಲ್‌ 17 ರಂದು ನಡೆಯಲಿದ್ದು, ಮೇ 16ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಕೇಂದ್ರ ಸ್ಥಾನದ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಕಾರಿಯಾಗಿ­ರುವುದ­ರಿಂದ ಅವರ ಕಾರ್ಯಾಲಯದಲ್ಲಿ ನಾಮಪತ್ರ ಸ್ವೀಕರಿಸಲಾ
ಗುವುದು ಎಂದರು.

ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ಜಿಲ್ಲೆಯ ಸುರಪುರ, ಶಹಾಪುರ ಹಾಗೂ ಯಾದಗಿರಿ ವಿಧಾನಸಭಾ ಕ್ಷೇತ್ರಗಳು ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ. ಇನ್ನುಳಿದ ಗುರುಮ­ಠಕಲ್‌ ವಿಧಾನ ಸಭಾ ಕ್ಷೇತ್ರವು ಗುಲ್ಬರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ ಎಂದು ಹೇಳಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಯಾದಗಿರಿ ಜಿಲ್ಲೆಯಾ­ದ್ಯಂತ ಒಟ್ಟು 1,006 ಮತಗಟ್ಟೆ ಇದ್ದು, 4,17,780 ಪುರುಷರು ಹಾಗೂ 4,11,853 ಮಹಿಳೆಯರು ಸೇರಿದಂತೆ ಒಟ್ಟು 8,29,633 ಮತದಾರರಿದ್ದಾರೆ ಎಂದು ಹೇಳಿದರು.

ನೀತಿ ಸಂಹಿತೆ ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗದಂತೆ  ನೋಡಿಕೊಳ್ಳಲು ಸೂಚನೆ ನೀಡಿದರು.

ಸಂಚಾರ ದಳ, ಎಸ್.ಎಸ್.ಟಿ. ಹಾಗೂ  ಎಂ.ಸಿ.ಸಿ. ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲಕಾಲಕ್ಕೆ ಸಭೆಯ ಕರೆದು ಚುನಾವ­ಣೆಗೆ ಸಂಬಂಧಪಟ್ಟ ಕಾರ್ಯವನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.

ಸಹಾಯಕ ಆಯುಕ್ತ ಬಿ.ಪಿ. ವಿಜಯ, ವಿಶೇಷ ಭೂಸ್ವಾಧೀನ ಅಧಿಕಾರಿ ಶಿವನಾಂದ ಕರಾಳೆ, ಜಿಲ್ಲಾ ಸಮಾಜ  ಕಲ್ಯಾಣಾಧಿಕಾರಿ ರಾಮಣ­ಗೌಡ, ಜಿಲ್ಲಾ ಪಂಚಾಯಿತಿ ಯೋಜನಾ­ಧಿಕಾರಿ ಬಸವರಾಜ, ಸೇರಿ
ದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.