ADVERTISEMENT

ವರ್ಷ ಕಳೆದರೂ ಉದ್ಘಾಟನೆಯಾಗದ ಕಟ್ಟಡ!

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:15 IST
Last Updated 1 ಅಕ್ಟೋಬರ್ 2012, 6:15 IST
ವರ್ಷ ಕಳೆದರೂ ಉದ್ಘಾಟನೆಯಾಗದ ಕಟ್ಟಡ!
ವರ್ಷ ಕಳೆದರೂ ಉದ್ಘಾಟನೆಯಾಗದ ಕಟ್ಟಡ!   

ಕಾಳಗಿ: ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದು ವರ್ಷ ಕಳೆದುಹೋದರೂ ಇನ್ನುತನಕ ಉದ್ಘಾಟನೆಯ ಭಾಗ್ಯ ಕಾಣದ ಪೊಲೀಸ್ ಠಾಣೆಯ ಸುಸಜ್ಜಿತ ಕಟ್ಟಡವೊಂದು ವಾಘ್ಧಾರಿ (ಸರಸಂಬಾ) - ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ 10ರ ಬದಿಗಿರುವ ಮಾಡಬೂಳ ತಾಂಡಾದ ರಸ್ತೆಯಲ್ಲಿ ಈಗಲೂ ಕಾಣಬಹುದಾಗಿದೆ.

ಹೌದು, ಕಳೆದ 2006ರ ಮೇ 10ರಂದು ಮಾಡಬೂಳ ಗ್ರಾಮಕ್ಕೆ ವರ್ಗವಾಗಿ ಬಂದು ಇಲ್ಲಿಯೇ ನೆಲೆಯೂರಿದ್ದ ಶಹಾಬಾದ ಗ್ರಾಮೀಣ ಪೊಲೀಸ್ ಠಾಣೆಯು “ಮಾಡಬೂಳ ಪೊಲೀಸ್ ಠಾಣೆ~ ಎಂದು ನಾಮಕರಣಗೊಂಡಿದೆ. ಅಂದಹಾಗೆ ಕಚೇರಿಗೆ ಬೇಕಾಗಿದ್ದ ಅವಶ್ಯಕ ಕಟ್ಟಡ ಇಲ್ಲಿ ಲಭ್ಯವಿರದ ಕಾರಣ ಮಾಡಬೂಳ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ ಬಳಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ.

ಇದರಿಂದಾಗಿ ಮೊದಲೇ ಕೊಠಡಿಗಳ ಕೊರತೆಯಲ್ಲಿ ನಲಗುತ್ತಿರುವ ಶಾಲೆಯ 2ಕೋಣೆ ಬೇರೆ ಕಳಚಿಕೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವುದರ ಮಧ್ಯೆ ಶಾಲೆಯ ನಿರ್ವಹಣೆ ಬಿಗಡಾಯಿಸುತ್ತಿರುವುದು ಕಂಡುಬಂದಿದೆ.

ಹೀಗಾಗಿ ಠಾಣೆಗೆ ಬೇಕಾದ ಸ್ವಂತ ಕಟ್ಟಡ ಬಹುಬೇಗನೆ ಈಡೇರಲೆಂಬ ಉದ್ದೇಶದಿಂದ ಚಿತ್ತಾಪುರ ಕ್ಷೇತ್ರದ ಆಗಿನ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಪೊಲೀಸ್ ಇಲಾಖೆ ಅಡಿಯಲ್ಲಿ 30ಲಕ್ಷ ರೂಪಾಯಿ ಮಂಜೂರು ಮಾಡಿಸಿ ಹೊಸ ಕಟ್ಟಡ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಅದರಂತೆ ವ್ಯವಸ್ಥಿತವಾಗಿ ಮೇಲಕ್ಕೆದ್ದ ಕಟ್ಟಡ ಶೀಘ್ರದಲ್ಲಿ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.

ಇನ್ನೇನು ಕಟ್ಟಡ ಕಾಮಗಾರಿ ಮುಗಿಯಿತು, ಶಾಲೆಯ ಕಟ್ಟಡ ತೆರವುಗೊಳಿಸಿ ಸ್ವಕಟ್ಟಡಕ್ಕೆ ಹೋಗುವ ಕನಸು ಕಂಡಿದ್ದ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 44 ಜನ ಸಿಬ್ಬಂದಿ ವರ್ಗ ಉದ್ಘಾಟನೆ ಭಾಗ್ಯದ ಬಾಗಿಲು ಕಾಯಲು ಶುರು ಮಾಡಿದ್ದರೆಂದು ತಿಳಿದುಬಂದಿದೆ. ಜತೆಗೆ ಇಲಾಖೆಯ ಮೇಲಧಿಕಾರಿಗಳು ಕೂಡ ಆ ಕಾರ್ಯಕ್ಕೆ ಶಕ್ತಿ ತುಂಬಲು ಮುಂದೆ ಬಂದಿದ್ದರು ಎನ್ನಲಾಗಿದೆ.

ಆದರೆ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರ ಮಾತು ಅಡ್ಡಬಂದು ಉದ್ಘಾಟನೆಯ ಸೌಭಾಗ್ಯ ದೂರ ತಳ್ಳಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಾವು, ಚೇಳು, ನರಿ, ಮೊಲ ಇತರೆ ಪ್ರಾಣಿಗಳ ಮಧ್ಯೆ ಪುನಃ ಶಾಲಾ ಕೊಠಡಿಗಳಲ್ಲೇ ಕಾಲ ಕಳೆಯಬೇಕಾದ ಸನ್ನಿವೇಶ ಪೊಲೀಸರಿಗೆ ಬಂದೊದಗಿ ಪಡಬಾರದ ಕಷ್ಟ ಪಡುತ್ತಿದ್ದಾರೆ.

ರಾತ್ರಿ ವೇಳೆಯಲ್ಲಂತೂ ವಿಷ ಜಂತುಗಳ ತೀವ್ರ ತರಹದ ಓಡಾಟಕ್ಕೆ ನಲುಗಿ ಜೀವ ಕೈಯಲ್ಲಿ ಹಿಡಿದಿಟ್ಟುಕೊಂಡು ಕಾಲ ಕಳೆಯಬೇಕಾದ ಪ್ರಸಂಗ ಇನ್ನೂ ತಪ್ಪುವಂತಿಲ್ಲ ಎಂಬ ಚಿಂತೆ ಅವರಲ್ಲಿ ಮನೆ ಮಾಡಿದೆ.

ಒಟ್ಟಾರೆ ಠಾಣೆಯ ಹೊಸ ಕಟ್ಟಡ ಬಹುಬೇಗನೆ ಉದ್ಘಾಟನೆಗೊಂಡು ಪೊಲೀಸರ ಚಿಂತೆ ದೂರಾಗಲಿ ಎಂಬ ಆಶಯ ಜನತೆಯದಾಗಿದ್ದರೆ, ನಮ್ಮ ಕಟ್ಟಡ ನಮಗೆ ಬಂದು ಅನುಕೂಲವಾಗಲಿ ಎಂಬ ಆಸೆ ಶಾಲಾ ಶಿಕ್ಷಕರದಾಗಿದೆ.

ಇನ್ನಾದರೂ ಈ ಹೊಸ ಕಟ್ಟಡದ ಉದ್ಘಾಟನೆಯ ಭಾಗ್ಯದ ಬಾಗಿಲು ತೆರೆಯುವುದ್ಯಾವಾಗ ಎಂಬುದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.