ADVERTISEMENT

ವಿವಿಧ ಕಡೆ ಜೆಸ್ಕಾಂ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 6:00 IST
Last Updated 5 ಅಕ್ಟೋಬರ್ 2012, 6:00 IST

ಸುರಪುರ: ಅನಿಯಮಿತ ವಿದ್ಯುತ್ ಪೂರೈಕೆ ಖಂಡಿಸಿ ಬಸವಸಾಗರ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಬುಧವಾರ ನೂರಾರು ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರೈತರ ಆಕ್ರೋಶ ಎಷ್ಟಿತ್ತೆಂದರೆ ಒಂದು ಹಂತದಲ್ಲಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು. ಎ.ಇ.ಇ. ಕಚೇರಿಯಲ್ಲಿರದಿರುವುದು ರೈತರನ್ನು ಇನ್ನಷ್ಟು ಕೆರಳಿಸಿತು. ಕಚೇರಿಗೆ ಬೀಗ ಮುದ್ರೆ ಹಾಕಲು ಮುಂದಾದರು.

ಸ್ಥಳದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ರಾಜಕುಮಾರ ವಾಜಂತ್ರಿ ಬೀಗಮುದ್ರೆ ಹಾಕಿದರೆ ಬಂಧಿಸಬೇಕಾಗುತ್ತದೆ ಎಂದು ನೀಡಿದ ಎಚ್ಚರಿಕೆ ರೈತರನ್ನು ಕೆರಳಿಸಿತು. ಎಲ್ಲರನ್ನೂ ಸಾಮೂಹಿಕವಾಗಿ ಬಂಧಿಸಿ. ಬರಗಾಲದಿಂದ ತತ್ತರಿಸಿರುವ ರೈತರಿಗೆ ವಿದ್ಯುತ್ ಕಡಿತ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತನ ಕುಟುಂಬ ಬೀದಿಗೆ ಬಿದ್ದಿದೆ. ಜೈಲಿನಲ್ಲಾದರೂ ಆರಾಮವಾಗಿರುತ್ತೇವೆ ಎಂದು ಹರಿಹಾಯ್ದರು.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಮೂರು ಗಂಟೆಗಳವರೆಗೆ ರೈತರು ಪ್ರತಿಭಟನೆ ನಡೆಸಿದರು. ರೈತರನ್ನು ಸಮಾಧಾನ ಪಡಿಸಲು ಕೊನೆಗೂ ಪೊಲೀಸ್ ಇನ್ಸ್‌ಪೆಕ್ಟರ್ ಯಶಸ್ವಿಯಾದರು. ಯಾದಗಿರಿಯ ಎಕ್ಸಿಕ್ಯುಟಿವ್ ಎಂಜಿನಿಯರ್ ಶಶಿಧರ ಶಿವಾಚಾರ್ಯ ಸ್ಥಳಕ್ಕೆ ಆಗಮಿಸಿದ ಮೇಲೆ ರೈತರು ಪಟ್ಟು ಸಡಿಲಿಸಿ ಅವರೊಂದಿಗೆ ಮಾತುಕತೆ ನಡೆಸಿದರು.

ನೇತೃತ್ವ ವಹಿಸಿದ್ದ ಸಮಿತಿಯ ಉಪಾಧ್ಯಕ್ಷ ಡಾ. ಶರಣಪ್ಪ ಯಾಳಗಿ ಮಾತನಾಡಿ, ಅನಾವೃಷ್ಟಿಯಿಂದ ರೈತ ಕಂಗಾಲಾಗಿದ್ದಾನೆ. ವಿದ್ಯುತ್ ಕೈಕೊಡುತ್ತಿರುವುದರಿಂದ ರೈತನ ಗೋಳು ಹೇಳತೀರದಾಗಿದೆ. ಒಂದೆಡೆ ಗೊಬ್ಬರದ ಬೆಲೆ ಗಗನಕ್ಕೇರಿದೆ. ರೈತ ದೇಶದ ಬೆನ್ನೆಲುಬು ಎಂದು ಹೇಳುವ ಜನಪ್ರತಿನಿಧಿಗಳು ರೈತನ ಶೋಷಣೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳಿಗೆ ರೈತನ ಬಗ್ಗೆ ಕಾಳಜಿಯೇ ಇಲ್ಲ ಎಂದು ದೂರಿದರು.

ರೈತರು ಲಕ್ಷಾಂತರ ರೂ. ವೆಚ್ಚ ಮಾಡಿ ಪಂಪಸೆಟ್ ಅಳವಡಿಸಿಕೊಂಡಿದ್ದಾರೆ. ಈಗಾಗಲೆ ಬಿತ್ತನೆ ಕಾರ್ಯ ಮಾಡಿದ್ದಾರೆ. ವಿದ್ಯುತ್ ಕೈಕೊಡುತ್ತಿರುವುದರಿಂದ ಬೆಳೆಗಳು ಹಾನಿಗೀಡಾಗಿವೆ. ಎಲ್ಲೆಡೆ ಟಿ.ಸಿ.ಗಳು ಸುಟ್ಟು ಹೋಗಿವೆ. ವಿದ್ಯುತ್ ಕಂಬಗಳು ಶಿಥಿಲಗೊಂಡಿವೆ. ಸಮರ್ಪಕ ವಿದ್ಯುತ್ ಸರಬರಾಜಿಗೆ ಮತ್ತು ಪಾಲನೆ, ಪೋಷಣೆಗೆ ಜೆಸ್ಕಾಂ ವಿಫಲವಾಗಿದೆ. ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಸೋಮಶೇಖರ ಶಾಬಾದಿ ಆರೋಪಿಸಿದರು.

ರೈತ ಮುಖಂಡರಾದ ಮಹ್ಮದ್ ಗಾಜಿ ಕುಂಡಾಲೆ, ಅಬ್ದುಲ ಗಫಾರ್ ನಗನೂರಿ, ಅಲ್ಲಿಸಾಬ ಕರ್ನಾಳ ಮತ್ತಿತರರು ಮಾತನಾಡಿದರು. ಬೇಡಿಕೆಗಳನ್ನು 15 ದಿನಗಳಲ್ಲಿ ಈಡೇರಿಸದಿದ್ದರೆ ಎಂ. ಡಿ. ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಟಿ.ಸಿ. ದುರಸ್ತಿ ಕಾರ್ಯಾಗಾರವನ್ನು ಸುರಪುರದಲ್ಲಿ ಆರಂಭಿಸಬೇಕು. ಸುಟ್ಟು ಹೋಗಿರುವ ಟಿ.ಸಿ.ಗಳನ್ನು ಬದಲಿಸಬೇಕು. ಜೋತು ಬಿದ್ದಿರುವ ಮತ್ತು ಅಪಾಯಕಾರಿಯಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು. ಶಿಥಿಲಗೊಂಡ ವಿದ್ಯುತ್ ಕಂಬಗಳನ್ನು ಬದಲಿಸಬೇಕು. ರೈತರ ಪಂಪಸೆಟ್‌ಗಳಿಗೆ ದಿನಕ್ಕೆ ಕನಿಷ್ಠ 8 ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಇತರ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಅಂಬರೀಶ ಕೋನಾಳ, ಅಂಬಯ್ಯ ಹಂದ್ರಾಳ, ಮಲ್ಲನಗೌಡ ಹಂದ್ರಾಳ, ಮಲ್ಲಿಕಾರ್ಜುನ ದೇವಪುರ, ಚನ್ನಪ್ಪಗೌಡ ದೇವಪುರ, ಸುಬ್ಬಾರೆಡ್ಡಿ ದೇವಪುರ, ಅಮೀನರೆಡ್ಡಿ ದೇಸಾಯಿ, ಆದಿಶೇಷ ಹೆಮನೂರ, ಹಣಮಂತ ಗೆಜ್ಜೇಲಿ, ಭಾಗಪ್ಪ ದೊಡ್ಡಮನಿ, ಮಲ್ಲಪ್ಪಗೌಡ ರತ್ತಾಳ, ಶಾಂತು ಹಸನಾಪುರ, ಸಿದ್ದಪ್ಪ ಯಾದಗಿರಿ, ಶಿವರುದ್ರ ಹುಳ್ಳಿ, ಅಮರಣ್ಣ ಹೊಸಮನಿ, ಶಿವಾನಂದ ಸತ್ಯಂಪೇಟೆ, ಅಂಬಣ್ಣ ವಾರಿ, ಬಸನಗೌಡ ಕೋನಾಳ, ವಿನೋದ ಹಾವಿನಾಳ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ
ಗುರುಮಠಕಲ್:
  ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ಅನಿಯಮಿತ ವಿದ್ಯುತ್ ಕಡಿತದಿಂದ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ವ್ಯಾಪಾರಸ್ಥರು, ಗೃಹಿಣೀಯರು, ರೈತರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಯಾಗಿರುವುದರಿಂದಾಗಿ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಚಂದಪಾಶ ನೇತೃತ್ವದಲ್ಲಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಈಚೆಗೆ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ ನಿಲ್ದಾಣ ಹತ್ತಿರವಿರುವ ನಿಜ ಶರಣ ಅಂಬಿಗರ ಚೌಡಯ್ಯ ವೃತ್ತದಿಂದ ಜೆಸ್ಕಾಂ ಕಚೇರಿಯವರೆಗೆ ಬಿಜೆಪಿ ಸರ್ಕಾರ ವಿರುದ್ದ ಘೋಷಣೆಗಳು ಕೂಗುತ್ತ ಜೆಸ್ಕಾಂ ಕಚೇರಿಗೆ ತೆರಳಿದರು.
ಜೆಸ್ಕಾಂ ಕಚೇರಿಗೆ ಬೀಗ ಹಾಕಲು ಕಾರ್ಯಕರ್ತರು ಮುಂದದಾಗ ಪೊಲೀಸರು ಬೀಗ ಹಾಕದಂತೆ ತಡೆದರು.

ಕೇವಲ ಮುತ್ತಿಗೆ ಹಾಕಲು ಪರವಾನಿಗೆ ಪಡೆದಿದ್ದೀರಿ ಬೀಗ ಹಾಕಲು ನಾವು ಅವಕಾಶ ಕೊಡುವುದಿಲ್ಲ ಎಂದಾಗ ವಾತಾವರಣ ವಿಕೋಪಕ್ಕೆ ಹೋಗಿ ಕಾರ್ಯಕರ್ತರು ಕೇಸ್ ಆಗಲಿ ನಾವು ಜೆಸ್ಕಾಂಗೆ ಬೀಗ ಹಾಕುತ್ತೇವೆ ಎಂದು ಹಠ ಹಿಡಿದಾಗ ಸಿಪಿಐ ಪಿ.ಕೆ.ಚೌದ್ರಿ ಆಗಮಿಸಿ ಹಿರಿಯ ಮುಖಂಡರೊಂದಿಗೆ ಮಾತನಾಡಿ ಕೇವಲ ಧರಣಿ ಕುಳಿತುಕೊಳ್ಳಲು ಮನವಿ ಮಾಡಿ ಅಹಿತಕಾರ ಘಟನೆ ಜರುಗದಂತೆ ನೋಡಿಕೊಂಡರು.

ಪಟ್ಟಣ ಪಂಚಾಯತಿ ಸದಸ್ಯ ಜಿ.ಕೆ.ಕೃಷ್ಣ ಮಾತನಾಡಿ ಚುನಾವಣಾ ವಾಗ್ದಾನದಲ್ಲಿ ಬಿಜೆಪಿ ಪಕ್ಷವು ವಿದ್ಯುತ್ ಉತ್ಪಾದನೆ 10 ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿಸುವ ಕ್ರಮ ಹಾಗೂ ರೈತರ ಪಂಪ್‌ಸೆಟ್‌ ಗಳಿಗೆ 24 ತಾಸು ನಿರಂತರ ವಿದ್ಯುತ್ ನೀಡುವುದೆಂದು ಹೇಳಿ ವಂಚಿಸಿದೆ. ಗ್ರಾಮೀಣ ಭಾಗದಲ್ಲಿ 3-4 ಗಂಟೆಗಳ ಕಾಲ 3 ಪೇಸ್ ವಿದ್ಯುತ್ ಒದಗಿಸದೇ, ಪಟ್ಟಣಗಳಲ್ಲಿ ಅನಿಯಮಿತ ಲೋಡಶೆಡ್ಡಿಂಗ್ ಮೂಲಕ ಸಮರ್ಪಕವಾಗಿ ವಿದ್ಯುತ್ ಪೂರೈಸದೆ ಕತ್ತಲಲ್ಲಿ ಇಟ್ಟಿರುವ ಸರ್ಕಾರಕ್ಕೆ ದಿಕ್ಕಾರ ಮಾಡಿ ಎಂದು ಆಕ್ರೋಶಗೊಂಡರು.

ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ನರಸಿಂಹರೆಡ್ಡಿ ಚಂಡರಕಿ ಮಾತನಾಡಿ 3 ದಿನಗಳಿಂದ ವಿದ್ಯುತ್ ಪೂರೈಕೆ ಆಗದಿರುವುದರಿಂದ ರೈತರು ಬಿತ್ತಿದ ಬೆಳೆಗಳು ನೀರು ಇಲ್ಲದೆ ಒಣಗುತ್ತಿವೆ, ಮಧ್ಯರಾತ್ರಿ ಒಂದು ಗಂಟೆಗೆ 3 ಪೇಸ್ ವಿದ್ಯುತ್ ಬಿಟ್ಟರೆ ರೈತರು ಹೇಗೆ ಸದುಪಯೋಗ ಪಡಿಸಿಕೊಳ್ಳಲು ಆಗುತ್ತದೆ, ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಓದಲು ಅನಾನುಕೂಲವಾಗಿದೆ ಎಂದು ಜೆಸ್ಕಾಂ ಅಧಿಕಾರಿ ವಿರುದ್ದ ಗುಡುಗಿದರು.

ಯುವ ಕಾಂಗ್ರೆಸ್ ಅಧ್ಯಕ್ಷ, ಜೆಸ್ಕಾಂ ಅಧಿಕಾರಿ ದೇವಿಂದ್ರಪ್ಪ ಅವರಿಗೆ ಮನವಿ ಪತ್ರ ನೀಡಿ,  ಮನವಿ ಸ್ವೀಕರಿಸಿ ಜೆಸ್ಕಾಂ ಅಧಿಕಾರಿ ಸ್ಥಳಿಯ ಸಮಸ್ಯೆಗಳನ್ನು ಪರಿಹಾರಿಸುತ್ತೇನೆ ಮತ್ತು ವಿದ್ಯುತ್ ನಿರಂತರ 4 ಗಂಟೆ ಒದಗಿಸಲಾಗುವುದು ಆದರೆ ವಿದ್ಯುತ್ ಕಡಿತ ರಾಜ್ಯದಿಂದ ಆಗುತ್ತದೆ ಎಂದು ಮರು ಉತ್ತರ ನೀಡಿದರು.

ನಂತರ ಬೃಹತ್ ಪ್ರತಿಭಟನೆ ರ‌್ಯಾಲಿ ವಿಶೇಷ ತಹಸೀಲ್ದಾರ ಕಚೇರಿಗೆ ತೆರಳಿ ವಿಶೇಷ ತಹಸೀಲ್ದಾರ ಶರಣಯ್ಯ ಸತ್ಯಂಪೇಟ ಅವರಿಗೆ ಸಹ ಮನವಿ ಸಲ್ಲಿಸಿದರು. ಯುವ ಕಾರ್ಯದರ್ಶಿ ಸಿದ್ರಾಮರೆಡ್ಡಿ ಗೌಡ, ಟಿ. ವಿಜಯಕುಮಾರ, ಮಾಣಿಕ ಮುಕುಡಿ, ಪ್ರಕಾಶ ನೀರೇಟಿ, ಹಿರಿಯ ಮುಖಂಡರು ಭೀಮರೆಡ್ಡಿ ಉಟ್ಕೂರ್, ಮೈನೂದ್ದೀನ್, ಬನ್ನಪ್ಪ ಮಡಿವಾಳ, ಮೊಹಮ್ಮದ್ ಬಿಲ್ಲಾಳ, ಆನಂದ್ ನೀರೆಟ್ಟಿ, ಭೀಮಪ್ಪ ಮನ್ನೆ, ವಾಯಿದ್ ಚಿಂತಕುಂಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.