ADVERTISEMENT

ವೀರಯೋಧನನ್ನು ಮರೆತ ತಾಲ್ಲೂಕು ಆಡಳಿತ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 9:40 IST
Last Updated 16 ಆಗಸ್ಟ್ 2012, 9:40 IST

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ವೀರಯೋಧ ಸುಭಾಸಚಂದ್ರ ಮಡಿವಾಳ ಕೆಲ ತಿಂಗಳ ಹಿಂದೆ ಛತ್ತಿಸಗಡದ ದತ್ತೆಂವಾಡದಲ್ಲಿ ನಕ್ಸಲ್ ಗುಂಡಿಗೆ ಬಲಿಯಾಗಿ ವೀರ ಮರಣವನ್ನು ಅಪ್ಪಿದ್ದರು. ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕೊನೆ ಪಕ್ಷ ವೀರಯೋಧನ ಕುಟುಂಬದ ಸದಸ್ಯರನ್ನು ಕರೆಸಿ ಗೌರವ ಸೂಚಿಸಬೇಕಾಗಿತ್ತು. ತಾಲ್ಲೂಕು ಆಡಳಿತ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಎಂದು ತಾಲ್ಲೂಕು ಸಿಪಿಐ(ಎಂ) ಕಾರ್ಯದರ್ಶಿ ಎಸ್.ಎಂ. ಸಾಗರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಸುಭಾಸಚಂದ್ರನ ಬಡ ಕುಟುಂಬಕ್ಕೆ ನೆರವಿನ ಅಭಯವನ್ನು ನೀಡಬೇಕಾಗಿತ್ತು. ಸೈನಿಕ ವಿಶೇಷ ಕೋಟಾದ ಅಡಿಯಲ್ಲಿ  ಭೂಮಿಯನ್ನು ಸುಭಾಸಚಂದ್ರನ ಕುಟುಂಬಕ್ಕೆ ಮಂಜೂರು ಮಾಡಬೇಕಾಗಿತ್ತು. ತಾಲ್ಲೂಕು ದಂಡಾಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಅವರು ದೂರಿದ್ದಾರೆ.

ಅಂದಿನ ಸಭೆಯಲ್ಲಿ ಶಾಸಕರು ಕೂಡಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕೊನೆ ಪಕ್ಷ ಸಗರ ಯೋಧನ ಬಗ್ಗೆ ಮಾತನಾಡಲು ಕೂಡಾ ಪುರಸೊತ್ತು ಇಲ್ಲವಾಗಿದೆ. ತಕ್ಷಣ ಸುಭಾಸಚಂದ್ರನ ಕುಟುಂಬಕ್ಕೆ ಅಗತ್ಯ ನೆರವು ನೀಡಿ ಗೌರವಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಿಂದ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ವೇದಿಕೆ ಅಲಂಕರಿಸಿ ಶಿಷ್ಟಾಚಾರವನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಸಭೆಯಲ್ಲಿ ಯಾವುದೇ ಸ್ಥಾನ ಮಾನಕ್ಕೆ ಬೆಲೆಯಿಲ್ಲದೆಂತೆ ವರ್ತಿಸುತ್ತಿರುವುದು ಸರಿಯಲ್ಲ. ಮುಂದೆ ಇಂತಹ ಪ್ರಮಾದ ಆಗದಂತೆ ತಾಲ್ಲೂಕು ಆಡಳಿತ ಎಚ್ಚರ ವಹಿಸಬೇಕೆಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.