ADVERTISEMENT

ವೇತನ ಪಾವತಿಸುವಂತೆ ಸಿಇಒಗೆ ದೂರು: ಮಾನ್ಪಡೆ

ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 8:48 IST
Last Updated 4 ಜನವರಿ 2014, 8:48 IST
ಸುರಪುರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿದರು
ಸುರಪುರದ ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಮಟ್ಟದ ಸಮ್ಮೇಳನದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿದರು   

ಸುರಪುರ: ರಾಜ್ಯದ ಎಲ್ಲಾ ಕಡೆಯೂ ಪ್ರತಿ ತಿಂಗಳು ವೇತನ ಪಾವತಿ­ಯಾಗುತ್ತಿದೆ. ಆದರೆ ಸುರಪುರ ತಾಲ್ಲೂಕಿ­­-ನಲ್ಲಿ ಪಾವತಿಯಾಗ­ದಿರು­ವುದು ವಿರ್ಪಯಾಸ. ಇಲ್ಲಿನ ಅಧಿ­ಕಾರಿಗಳು ತಾವು ಸರ್ಕಾರಿ ಸೇವಕರು ಎಂಬುದನ್ನು ಮರೆತು ಜನಪ್ರತಿನಿಧಿಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ. ವೇತನ ಪಾವತಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ­ಹಕ ಅಧಿಕಾರಿಗೆ ತಾವು ದೂರು ಸಲ್ಲಿಸುವುದಾಗಿ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು.

ಲಕ್ಷ್ಮೀನಾರಾಯಣ ಕಲ್ಯಾಣ ಮಂಟ­ಪ­ದಲ್ಲಿ  ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ತಾಲ್ಲೂ­ಕು ಮಟ್ಟದ ಸಮ್ಮೇಳನದಲ್ಲಿ ಮಾತ­ನಾಡಿದರು.

ಗ್ರಾಮ ಪಂಚಾಯಿತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿ­ಸುತ್ತಿ­ರುವ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಸುವಂತೆ ಸರ್ಕಾರದ ನಿರ್ದೇಶ­ನವಿದೆ. ಆದರೆ ಎರಡು ವರ್ಷಗಳಿಂದ ನೌಕರರಿಗೆ ವೇತನ ನೀಡದಿರುವುದು ನಾಚಿಕೆಗೇಡಿನ ಪ್ರಸಂಗ ಎಂದರು.

ಕೇಂದ್ರ ಸರ್ಕಾರದ ತಪ್ಪು ನೀತಿಯಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿ ಬಡವರ ದಿನ ನಿತ್ಯದ ಬದುಕು ಆಯೋಮಯವಾಗಿದೆ. ಹಣದುಬ್ಬರದಿಂದ ಸರ್ಕಾರ ದಿವಾಳಿ ಅಂಚಿನಲ್ಲಿದೆ ಎಂದು ಕೇಂದ್ರದ ವಿರುದ್ಧ ವಾಕ್ಸಮರ ನಡೆಸಿದರು.

ವಿವಿಧ ಇಲಾಖೆಗಳ ಹುದ್ದೆಗಳಲ್ಲಿ ಹೊರಗುತ್ತಿಗೆ ಪದ್ಧತಿ ಜಾರಿಗೆ ಮುಂದಾಗಿರುವುದು ಮತ್ತು ಅವಶ್ಯಕ ಸೇವಾ ಸಂಸ್ಥೆಯಲ್ಲಿನ ಸಿಬ್ಬಂದಿಯನ್ನು ನಿಯಂತ್ರಣದಲ್ಲಿಡಲು ಸರ್ಕಾರ ಎಸ್ಮಾ ಕಾಯ್ದೆ ಜಾರಿಗೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ನೀತಿಯಾಗಿದೆ. ಸರ್ಕಾರ ಇದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಕಸ­ಗುಡಿಸುವ ಸಿಬ್ಬಂದಿಯ ಆರೋಗ್ಯ ರಕ್ಷಣೆಯ ಸಲಕರಣೆಗಳನ್ನು ನೀಡಬೇಕು. ಹೆರಿಗೆ ಭತ್ಯೆ ನೀಡಬೇಕು. ಏಪ್ರಿಲ್ ತಿಂಗಳಲ್ಲಿ ಮಂಜೂರಾದ ವೇತನ ಹೆಚ್ಚಳ ಆದೇಶ ಜಾರಿಮಾಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಪಂಚಾಯಿತಿ ನೌಕರರ ವೇತನಕ್ಕೆ ಅನುದಾನ ಮೀಸಲಿಡಬೇಕು. ಸೇವಾ­ಭದ್ರತೆ ಒದಗಿಸಬೇಕು. ಕನಿಷ್ಠ ವೇತನ ಜಾರಿ, ಬಡ್ತಿ, ಸೇವೆ ಕಾಯಂಗೊಳಿಸುವುದು ಬೇಡಿಕೆಗಳಿಗೆ ಒತ್ತಾಯಿಸಿ ಜ. 23 ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

ಭದ್ರೆಪ್ಪ ಬಂಟನೂರ ಅಧ್ಯಕ್ಷತೆ ವಹಿಸಿದ್ದರು. ಸಂಗಣ್ಣ ಕಾಮನಟಗಿ ಪ್ರಾಸ್ತವಿಕ ಮಾತ­ನಾಡಿದರು. ಗ್ರಾಪಂ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ವಂಟೂರ, ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಜಯಲಾಲ ತೋಟದಮನಿ, ಪ್ರಮುಖರಾದ ರಾಜು ಪವಾರ, ಸುರೇಖಾ ಕುಲಕರ್ಣಿ, ಯಲ್ಲಪ್ಪ ಚಿನ್ನಾಕರ, ದೇವಿಂದ್ರಪ್ಪ ಪತ್ತಾರ, ಶ್ರೀದೇವಿ ಕೂಡಲಗಿ, ಬಸ್ಸಮ್ಮ ಆಲ್ಹಾಳ ಇದ್ದರು.

ತಾಂತ್ರಿಕ ಅಡಚಣೆ : ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿಶ್ವನಾಥ ರತ್ತಾಳ ಮಾತನಾಡಿ ‘ಬ್ಯಾಂಕಿನಲ್ಲಿ ಖಾತೆ ತೆರೆಯುವ ತಾಂತ್ರಿಕ ಅಡಚಣೆಯಿಂದ ವೇತನ ಪಾವತಿಯ ಸಮಸ್ಯೆ ಉದ್ಭವಿಸಿದೆ. ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸಿ ಬಾಕಿ ಇರುವ ವೇತನ ಪಾವತಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಗಳಗಳನೇ ಅತ್ತ ಸಿಬ್ಬಂದಿ
28 ತಿಂಗಳಿನಿಂದ ವೇತನ ಇಲ್ಲದ ಕಾರಣ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಈಗ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ಪಂಚಾಯಿತಿ­ಯನ್ನೆ ನಂಬಿ ದುಡಿದಿದ್ದೇನೆ ಬೇರೆಡೆ ಕೂಲಿ ಮಾಡಲು ಆಗುತ್ತಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶಾಸಕರ ಗಮನಕ್ಕೂ ತಂದಿದ್ದೇನೆ. ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ ಸಂಬಳ­ವಿಲ್ಲದ ಕಾರಣ ಬದುಕು ಅತಂತ್ರ­ವಾಗಿದೆ ಎಂದು ಕರ ವಸೂಲಿಗಾರರೊಬ್ಬರು ಸಮ್ಮೇಳ­ನ­ದಲ್ಲಿ ಗಳಗಳನೇ ಅತ್ತರು.

ಮತ್ತೊಬ್ಬ ಕರವಸೂಲಿಗಾರ, ನನಗೆ 45 ತಿಂಗಳಿನಿಂದ ವೇತನ ನೀಡಿಲ್ಲ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಅಗುತ್ತಿಲ್ಲ. ಮನೆಗೆ ದಿನಸಿ ತರಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ನಿತ್ಯವೂ ನರಕದ ಬದುಕು. ಸಾಕಷ್ಟು ಸಾಲ ಮಾಡಿದ್ದೇನೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗುವ ವಿಚಾರ ಮಾಡಿದ್ದೇನೆ. ಮಕ್ಕಳ ಮುಖ ನೋಡಿ ಸುಮ್ಮನಿದ್ದೇನೆ. ಮಾನ್ಪಡೆ ಸಾಹೇಬರೇ ನಮಗೆ ಹೇಗಾದರೂ ವೇತನ ಪಾವತಿಸುವಂತೆ ಮಾಡಿ ಎಂದು ಕಣ್ಣೀರು ತೆಗೆದ ದೃಶ್ಯ ಮನಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.