ADVERTISEMENT

ಶಿವಾಜಿ ದೇಶ ಪ್ರೇಮ ಮಾದರಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 7:50 IST
Last Updated 24 ಏಪ್ರಿಲ್ 2012, 7:50 IST

ಯಾದಗಿರಿ: ಭಾರತ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ದೇಶ ಪ್ರೇಮ ಪ್ರತಿಯೊಬ್ಬ ಭಾರತೀಯನಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಆಶ್ರಯದಲ್ಲಿ ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಶಿವನೇರುದುರ್ಗದಲ್ಲಿ ಜನಿಸಿದರು. ತಾಯಿ ಜೀಜಾಬಾಯಿ ದೇಶಪ್ರೇಮ, ಜೀವನ  ಮೌಲ್ಯಗಳ ಶಿಕ್ಷಣ ನೀಡಿದರು. ಅಪಾರ ಪರಾಕ್ರಮಿಯಾಗಿ ಶಿವಾಜಿ ಮಹಾರಾಜರು, ದೇಶಪ್ರೇಮದ ಪ್ರತೀಕವಾಗಿದ್ದಾರೆ ಎಂದು ಹೇಳಿದರು.

ಚಿಕ್ಕ ವಯಸ್ಸಿನಿಂದಲೇ ತಾಯಿಯಿಂದ ಪೌರಾಣಿಕ ಕಥೆ ಕೇಳುತ್ತಾ ಬೆಳೆದ ಶಿವಾಜಿ, ಜೀವನದ ಕೊನೆಯವರೆಗೂ ಹಿಂದೂ ಮತ್ತು ಸೂಫಿ ಮುನಿಗಳ ವಿಪುಲ ಸಂಪರ್ಕ ಹೊಂದಿದ್ದರು. ಸಾಮ್ರೋಜ್ಯ ತನಗಾಗಿ ಅಲ್ಲ, ಧರ್ಮಕ್ಕಾಗಿ ಎಂಬುದು ಶಿವಾಜಿಯ ಪ್ರತ್ಯಕ್ಷ ವ್ಯವಹಾರ.

16ರ ವಯಸ್ಸಿನಿಂದಲೇ ದೇಶಕ್ಕಾಗಿ ಹೋರಾಟ ಆರಂಭಿಸಿದ ಶಿವಾಜಿ ಮಹಾರಾಜರು, ಅಕ್ಷರಶಃ ರಕ್ತವನ್ನೇ ಬೆವರಾಗಿ ಹರಿಸಿ, ಕೋಟೆಗಳನ್ನು ಗೆದ್ದು ಸಮ್ರೋಜ್ಯ ಸ್ಥಾಪಿಸಿದರು. ಗೆರಿಲ್ಲಾ ಯುದ್ಧ ತಂತ್ರವನ್ನು ಅಳವಡಿಸಿಕೊಂಡಿರುವುದು ಅವರು ಆಡಳಿತ, ಸಮರ ತಂತ್ರಗಾರಿಕೆಯನ್ನು ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.

ಶಿವಾಜಿ ಮಹಾರಾಜರ ಅಗಾಧ ದೇಶಪ್ರೇಮದ ಕುರಿತು ಸ್ವಾಮಿ ವಿವೇಕಾನಂದರು, ನೇತಾಜಿ ಸುಭಾಷಚಂದ್ರ ಬೋಸ್‌ರು ಕೊಂಡಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಸಮರಕ್ಕಾಗಿ ಏಕಮಾತ್ರ ಆದರ್ಶವಾಗಿ ಶಿವಾಜಿಯನ್ನು ಸ್ವೀಕರಿಸಬೇಕು ಎಂದು ನೇತಾಜಿ ಅಂದೇ ಹೇಳಿದ್ದರು. ಈ ಮಾತು ಇಂದಿನ ಭಾರತಕ್ಕೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶಿವಾಜಿ ಮಹಾರಾಜರಂತಹ ರಾಷ್ಟ್ರ ಭಕ್ತ, ಯುಕ್ತಿವಂತ, ಶ್ರೇಷ್ಠ ಆಡಳಿತಗಾರ, ಅಧ್ಯಾತ್ಮ ಜೀವಿ, ಮಾರ್ಗದರ್ಶನ, ನಾಯಕರು ನಮಗಿಂದು ಅಗತ್ಯವಾಗಿದ್ದಾರೆ ಎಂದರು. 

ಅಧ್ಯಕ್ಷತೆ ವಹಿಸಿದ್ದ ಡಾ. ಎ.ಬಿ. ಮಾಲಕರೆಡ್ಡಿ ಮಾತನಾಡಿ, ಶಿವಾಜಿ ಮಹಾರಾಜರು ಸಾಮಾನ್ಯ ಮನೆತನದಲ್ಲಿ ಹುಟ್ಟಿ ಬೆಳದವರು. ತಾಯಿಯೇ ಶಿವಾಜಿಗೆ ಶಸ್ತ್ರಾಸ್ತ್ರ ಯುದ್ಧ ಕಲೆ ಹಾಗೂ ವಿದ್ಯೆ ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಅದರ ಪರಿಣಾಮವಾಗಿಯೇ ಶಿವಾಜಿ ಒಬ್ಬ ಅಪ್ರತಿಮ ದೇಶಭಕ್ತ ಹಾಗೂ ಆದರ್ಶ ವ್ಯಕ್ತಿಯಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.

ಸರಕಾರಿ ಪದವಿ ಕಾಲೇಜಿನ ಉ ನ್ಯಾಸಕರಾದ ಡಾ. ಸುಭಾಷ ಕೌಲಗಿ ಮಾತನಾಡಿ, ಶಿವಾಜಿ ಮಹಾರಾಜರು ಶೂರ, ಸತ್ಪುರುಷ ವ್ಯಕ್ತಿಯಾಗಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಅಪ್ರತಿಮ ದೇಶಪ್ರೇಮಿಯಾಗಿದ್ದರು ಎಂದು ಶಿವಾಜಿ ಮಹಾರಾಜರ ಅದರ್ಶ ಮೌಲ್ಯಗಳ ಕುರಿತು ವಿವರಿಸಿದರು.

ತೊಗರಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾಧಿಕಾರಿ ಗುರನೀತ ತೇಜ್ ಮೆನನ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ ನಾಯಕ, ಜಿಲ್ಲಾ ಪಂಚಾಯಿತಿ ಸಿಇಒ ಸೈಯ್ಯದ್ ಅಬ್ದುಲ್ ರಬ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವಿಂದ್ರನಾಥ ನಾದ್, ಛತ್ರಪತಿ ಶಿವಾಜಿ ಸಂಘದ ಅಧ್ಯಕ್ಷ ನಾರಾಯಣರಾವ ಚವ್ಹಾಣ ಅತಿಥಿಗಳಾಗಿ ಆಗಮಿಸಿದ್ದರು.

ಸಹಾಯಕ ಆಯುಕ್ತ ಬಿ.ಪಿ. ವಿಜಯ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಾಹೇಬಗೌಡ ಬಿರಾದಾರ ನಿರೂಪಿಸಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯ ಸಹಾಯಕ ಎಸ್.ಐ. ಚೌಗುಲಾ ವಂದಿಸಿದರು. ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.