ADVERTISEMENT

ಸಂಗೀತಗಾರರಿಗೆ ಪ್ರೋತ್ಸಾಹದ ಅಗತ್ಯವಿದೆ: ನಾಯಕ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:10 IST
Last Updated 11 ಡಿಸೆಂಬರ್ 2013, 8:10 IST

ಸುರಪುರ: ಸಗರನಾಡಿನಲ್ಲಿ ಶ್ರೇಷ್ಠ ಸಂಗೀತಗಾರರು, ವಿದ್ವಾಂಸರು ಆಗಿ ಹೋಗಿದ್ದಾರೆ. ಈಗಲೂ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಕ್ಕರೆ ರಾಜ್ಯಮಟ್ಟದಲ್ಲಿ ಹೆಸರು ಮಾಡು­ತ್ತಾರೆ. ಆದರೆ, ಪ್ರೋತ್ಸಾಹದ ಕೊರತೆಯಿಂದ ಅವಕಾಶ ವಂಚಿತ­ರಾಗುತ್ತಿದ್ದಾರೆ.

ಕಾರಣ ಸಂಗೀತ­ಗಾರರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕರೆ ನೀಡಿದರು.
ಇಲ್ಲಿಯ ಸೂಗೂರೇಶ್ವರ ಜಾತ್ರಾ ಮಹೊೋತ್ಸವದ ಅಂಗವಾಗಿ ಭಾನು­ವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಕಿವಿಗೆ ಇಂಪು ನೀಡುವ ಮೂಲಕ ಮನಸ್ಸಿಗೂ ಅನಂದ ನೀಡುತ್ತದೆ. ಮನಸ್ಸಿಗೆ ದುಃಖವಾದಾಗ ಬೇಸರವಾದಾಗ ಸಂಗೀತ ಕೇಳುವುದ­ರಿಂದ  ಮನಸ್ಸು ಆಹ್ಲಾದಗೊಳ್ಳುತ್ತದೆ. ಅಷ್ಟೇ ಅಲ್ಲದೆ ದುಃಖ ಮರೆಸುವ ಶಕ್ತಿ ಹೊಂದಿದೆ. ಕಲೆ ಸಾಹಿತ್ಯ, ಸಂಗೀತಕ್ಕೆ ಸುರಪುರ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.

ತಾಳಿಕೋಟೆಯ ಸಂಗೀತ ಶಾಲಾ ಶಿಕ್ಷಕ ಎ.ಎಸ್.ವಠಾರ ಮಾತನಾಡಿ, ಸಂಗೀತಕ್ಕೆ ಯಾವುದೇ ಜಾತಿ ಧರ್ಮ ಮೇಲು ಕೀಳುಗಳೆಂಬ ಭೇದಭಾವವಿಲ್ಲ. ಕಲೆ ಯಾವುದೇ ಒಂದು ವರ್ಗಕ್ಕೆ ಸೀಮಿತ­ವಾದುದಲ್ಲ. ಪರಸ್ಪರ ಐಕ್ಯತೆ­ಯನ್ನು ಬೆಸೆಯುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ಜ್ಯೋತಿ ದೊಡ್ಡಮನಿ ಇದ್ದರು. ಆಕಾಶವಾಣಿ ಕಲಾವಿದ ಬಸವ­ರಾಜ ಭಂಟನೂರ, ಶಿವಶರಣಯ್ಯ­ಸ್ವಾಮಿ ಬಳ್ಳುಂಡಗಿಮಠ, ಮಲ್ಲಿಕಾ­ರ್ಜುನ ಭಜಂತ್ರಿ, ಶರಣ­ಕುಮಾರ ಜಾಲಹಳ್ಳಿ, ಮಂಜುಳಾ ದಾಂಡೇಲಿ, ಜಟ್ಟೆಪ್ಪ ಭದ್ರಾವತಿ, ಸಿದ್ದಲಿಂಗಯ್ಯ ಸ್ವಾಮಿ, ಸಿದ್ದಣ್ಣ ದೇಸಾಯಿ, ದೇವಿಂದ್ರಕುಮಾರ ಕಕ್ಕಳಮೇಲಿ, ಮೋಹನ ಮಾಳದಕರ್, ವಿರುಪಾಕ್ಷಿ ಹೂಗಾರ, ಆಮಯ್ಯಸ್ವಾಮಿ ರಾಜನ­ಕೋಳೂರು ಸಂಗೀತ ಸೇವೆ ನೀಡಿದರು. ಸುರೇಶ ಅಂಬೂರೆ, ರಾಜಶೇಖರ ಗೆಜ್ಜಿ, ಈಶ್ವರ ಬಡಿಗೇರ, ರಾಘವೇಂದ್ರ ಕೋಟಿಖಾನಿ, ಮಹಾಂತೇಶ ಶಹಾಪುರ­ಕರ್ ತಬಲಾ ಸಾಥ್‌ ನೀಡಿದರು. ಚಂದ್ರಶೇಖರ ಆಜಾದ್ ಸ್ವಾಗತಿಸಿ­ದರು. ಶರಣಬಸವ ಯಾಳವಾರ ನಿರೂಪಿಸಿದರು. ರಮೇಶ ಬಡಗಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT