ADVERTISEMENT

ಸಮಸ್ಯೆ ಪರಿಹಾರಕ್ಕೆ ಒತ್ತು: ಮೈನೋದ್ದೀನ್

ಯಾದಗಿರಿ: ನೂತನ ಪೌರಾಯುಕ್ತರಿಂದ ವಾರ್ಡ್‌ಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:47 IST
Last Updated 7 ಸೆಪ್ಟೆಂಬರ್ 2013, 6:47 IST

ಯಾದಗಿರಿ: ಐತಿಹಾಸಿಕ ಹಿನ್ನೆಲೆಯುಳ್ಳ ಯಾದಗಿರಿ ನನ್ನ ತವರೂರು. ಇಲ್ಲಿನ ವಾರ್ಡ್‌ಗಳ ಜನರ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿಮೀರಿ ಪ್ರಯತ್ನಿಸುವುದಾಗಿ ನೂತನ ಪೌರಾಯುಕ್ತ ಖಾಜಾ ಮೈನೋದ್ದೀನ್ ಹೇಳಿದರು.

ಅಧಿಕಾರ ವಹಿಸಿಕೊಂಡ ನಂತರ ಶುಕ್ರವಾರ ಬೆಳಿಗ್ಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಸ್ವಚ್ಛತೆಯನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ನಗರದ ಸ್ಟೇಶನ್ ಪ್ರದೇಶದ ವಿವಿಧ ವಾರ್ಡ್‌ಗಳ ಸಮಸ್ಯೆಗಳ ಪರಿಶೀಲನೆ ಮಾಡಿದ ಅವರು, ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂದು ಸಲಹೆ ನೀಡಿದರು.

ಪ್ರಮುಖವಾಗಿ ಚರಂಡಿ ಮತ್ತು ರಸ್ತೆಗಳ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಯಾವುದೇ ರೋಗ ರುಜಿನುಗಳು ಹರಡದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸವೇಶ್ವರ ನಗರದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಮುಖ್ಯವಾಗಿ ರಸ್ತೆ ಇಲ್ಲದಾಗಿದೆ. ತಗ್ಗು, ದಿನ್ನೆಗಳಲ್ಲಿ ಮಳೆ ನೀರು ತುಂಬಿಕೊಂಡು ದಾರಿ ಇಲ್ಲದಂತಾಗಿದೆ. ಮೊದಲು ನೀರು ನಿಂತಿರುವ ಗುಂಡಿಗಳನ್ನು ಮುಚ್ಚಿ, ಮಕ್ಕಳಿಗೆ ದಾರಿ ಮಾಡಿಕೊಡಬೇಕು. ಪಕ್ಕಾ ರಸ್ತೆಗೆ ನೀಲನಕ್ಷೆ ತಯಾರಿಸಿ ಆದಷ್ಟು ಬೇಗ ರಸ್ತೆ ನಿರ್ಮಾಣ ಮಾಡಲು ಆದೇಶಿಸಿದರು.

ಹೊಸ ಬಡಾವಣೆಗಳಲ್ಲಿ ಚರಂಡಿ ಹಾಗೂ ರಸ್ತೆಯ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಅನುದಾನ ಬೇಕಾಗಿದ್ದು, ಅಭಿವೃದ್ಧಿಗೆ ಒತ್ತು ನೀಡಲು ಶಾಸಕ ಡಾ. ಮಾಲಕರಡ್ಡಿ ಹಾಗೂ ಜಿಲ್ಲಾಧಿಕಾರಿಗಳ ಸಹಕಾರ ಪಡೆಯಲಾಗುವುದು. ನಗರದ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.

ಶೀಘ್ರ ನಗರಸಭೆಯ ಚುನಾಯಿತ ಸದಸ್ಯರು ಹಾಗೂ ಅಧ್ಯಕ್ಷ-ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಗರದ ಸೌಂದರ್ಯಕ್ಕೆ ಒತ್ತು ನೀಡಲಾಗುವುದು ಎಂದರು.

ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷಕುಮಾರ, ರವಿಂದ್ರರೆಡ್ಡಿ, ಅರುಣಕುಮಾರ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.