ADVERTISEMENT

ಸಾಂಸ್ಕೃತಿಕ ಭವನಕ್ಕೆ ಅನುದಾನ ಕೊರತೆ

ಮಲ್ಲೇಶ್ ನಾಯಕನಹಟ್ಟಿ
Published 24 ನವೆಂಬರ್ 2017, 9:02 IST
Last Updated 24 ನವೆಂಬರ್ 2017, 9:02 IST
ಯಾದಗಿರಿಯಲ್ಲಿ ನನೆಗುದಿಗೆ ಬಿದ್ದಿರುವ ಸಾಂಸ್ಕೃತಿಕ ಭವನ
ಯಾದಗಿರಿಯಲ್ಲಿ ನನೆಗುದಿಗೆ ಬಿದ್ದಿರುವ ಸಾಂಸ್ಕೃತಿಕ ಭವನ   

ಯಾದಗಿರಿ: ಸಾಹಿತ್ಯ ಚಟುವಟಿಕೆ ಹಮ್ಮಿಕೊಳ್ಳುವುದಕ್ಕಾಗಿ ನಗರದ ಲುಂಬಿನಿ ಉದ್ಯಾನದ ಎದುರು ನಿರ್ಮಾಣ ಹಂತದಲ್ಲಿರುವ ‘ಸಾಂಸ್ಕೃತಿಕ ಭವನ’ ಕಾಮಗಾರಿ ಐದು ವರ್ಷಗಳಿಂದ ಅನುದಾನದ ಕೊರತೆ ಎದುರಿಸುತ್ತಿದೆ.

ಜಿಲ್ಲೆಯಲ್ಲಿ ಸಾಹಿತಿ, ಕಲಾವಿದರ ದಂಡೇ ಇದೆ. ಆದರೆ, ಸೃಜನಶೀಲ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸ್ಥಳಾವಕಾಶದ ಅಭಾವ ಮಾತ್ರ ನೀಗಿಲ್ಲ. ಸಾಹಿತ್ಯ ವಿಮರ್ಶೆ, ವಿಚಾರ ಸಂಕಿರಣ, ಸಾಹಿತ್ಯ ಅಧ್ಯಯನ ಶಿಬಿರ, ಕಲಾ ಪ್ರದರ್ಶನ, ಸಾಹಿತ್ಯ ಚಟುವಟಿಕೆಗಳ ಪೂರ್ವಭಾವಿ ಸಭೆ ಇತ್ಯಾದಿ ನಿರಂತರವಾಗಿ ನಡೆಯುತ್ತವೆ. ಆದರೆ, ಎಲ್ಲಾ ಚಟುವಟಿಕೆಗಳಿಗೆ ಸಾಹಿತ್ಯ ಪರಿಷತ್ತು ಮತ್ತು ಆಯೋಜಕರು ಬಾಡಿಗೆ ಕಟ್ಟಡಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಸಾಹಿತ್ಯ ಪರಿಷತ್ತಿಗೆ ಸಿಗುವ ದೇಣಿಗೆ, ಚಂದಾ ವಸೂಲಿ ಬಾಡಿಗೆಗೆ ವ್ಯಯಿಸುವಂತಾಗಿದೆ.

ಇದುವರೆಗೂ ₹25 ಲಕ್ಷ ವೆಚ್ಚ: 4,900 ಚದರ ಅಡಿ ವಿಸ್ತೀರ್ಣದಲ್ಲಿ ತ್ರಿಕೋನ ಸ್ಥಿತಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಗೊಳ್ಳುತ್ತಿದ್ದು, ಮೇಲ್ಮಹಡಿಯಲ್ಲಿ ನೂರು ಜನರು ಆಸೀನರಾಗಬಹುದಾದ ಸಭಾಂಗಣ, ನೆಲಮಹಡಿಯಲ್ಲಿ ಕಚೇರಿ ಕಾರ್ಯಾಲಯ, ವಿಶ್ರಾಂತಿ ಕೋಣೆಗಳನ್ನು ಒಳಗೊಂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ₹15ಲಕ್ಷ, ಸ್ಥಳೀಯ ಶಾಸಕರ ನಿಧಿಯಿಂದ ₹5ಲಕ್ಷ, ಸಂಸದರ ನಿಧಿಯಿಂದ ₹5ಲಕ್ಷ ಸೇರಿ ಒಟ್ಟು ₹25 ಲಕ್ಷ ಇದುವರೆಗೂ ವೆಚ್ಚ ಮಾಡಲಾಗಿದೆ. ಸಾಂಸ್ಕೃತಿಕ ಭವನ ಪೂರ್ಣಪ್ರಮಾಣದ ಕಾಮಗಾರಿಗೆ ಇನ್ನೂ ₹40ಲಕ್ಷ ಅನುದಾನ ಅವಶ್ಯಕತೆ ಇದೆ ಎನ್ನುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿದ್ದಪ್ಪ ಎಸ್. ಹೊಟ್ಟಿ.

ADVERTISEMENT

ಸಾಹಿತ್ಯ ಚಟುವಟಿಕೆ ಕುಂಠಿತ: ಸ್ಥಳಾಭಾವ ಮತ್ತು ದುಪ್ಪಟ್ಟು ಬಾಡಿಗೆ ದರದಿಂದಾಗಿ ಸಣ್ಣಪುಟ್ಟ ಸಾಹಿತ್ಯ ಚಟುವಟಿಕೆಗಳು ಕುಂಠಿತಗೊಂಡಿವೆ. ಸಾಹಿತ್ಯ ಚಟುವಟಿಕೆಗಳಿಗೆ ದಾನಿಗಳಿಂದ, ಸಾಹಿತ್ಯಾಸಕ್ತರಿಂದ ಚಂದಾ ವಸೂಲಿ ಮಾಡಬಹುದು. ಆದರೆ, ವಸೂಲಿ ಆಗುವ ಚಂದಾ ಹಣ ಬಾಡಿಗೆಗೆ ನೀಡಿದರೆ ಚಟುವಟಿಕೆಗಳಿಗೆ ಬೇಕಾಗುವ ಅಗತ್ಯ ವಸ್ತುಗಳಿಗೆ ಹಣ ಎಲ್ಲಿಂದ ತರುವುದು. ಹೀಗಾಗಿ ಸಾಹಿತ್ಯ ಚಟುವಟಿಕೆಗಳು ಕುಂಠಿತಗೊಳ್ಳುತ್ತಿವೆ ಎಂಬುದಾಗಿ ಸಾಹಿತ್ಯ ಪರಿಚಾರಕ ವಿಶ್ವನಾಥ ಮರತೂರ ಬೇಸರ ವ್ಯಕ್ತಪಡಿಸುತ್ತಾರೆ.

ಸಾಂಸ್ಕೃತಿಕ ಭವನ ಕೊರತೆ ಮಧ್ಯೆ ಜಿಲ್ಲೆಯಲ್ಲಿ ಎರಡು ಜಿಲ್ಲಾಕೇಂದ್ರ ಸಮ್ಮೇಳನ ಹಾಗೂ ಎರಡು ತಾಲ್ಲೂಕು ಸಾಹಿತ್ಯ ಸಮ್ಮೇಳಗಳನ್ನು ಯಶಸ್ವಿಗೊಂಡಿವೆ. ಜನವರಿಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಕುರಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಿದೆ. ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಂಡರೆ ಅನುಕೂಲ ಆಗು
ತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಭೀಮರಾಯ ಲಿಂಗೇರಿ ಹೇಳುತ್ತಾರೆ.

ಬಾರದ ಅನುದಾನ: ಸಿದ್ದಪ್ಪ
ಸದ್ಯ ನಮ್ಮ ಬಳಿ ₹15ಲಕ್ಷ ಅನುದಾನ ಸಂಗ್ರಹವಾಗಿದೆ. ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಭವನಕ್ಕೆ ₹20 ಲಕ್ಷ ಅನುದಾನ ಒದಗಿಸುವುದಾಗಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುರಾವ ಚಿಂಚಿನಸೂರ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಅನುದಾನ ಮಂಜೂರು ಆಗಿಲ್ಲ. ಪ್ರಾಧಿಕಾರದ ಕಚೇರಿ ಭೇಟಿ ನೀಡಿ ಸಾಕುಬೇಕಾಗಿದೆ. ಈ ಅನುದಾನ ಸಿಕ್ಕರೆ ಸಾಂಸ್ಕೃತಿಕ ಭವನ ಸಾಹಿತ್ಯಾ ಚಟುವಟಿಕೆಗಳಿಗೆ ತೆರೆದುಕೊಳ್ಳಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಎಸ್‌. ಹೊಟ್ಟಿ ತಿಳಿಸಿದರು.

* * 

ಸಾಂಸ್ಕೃತಿಕ ಭವನದ ಅವಶ್ಯಕತೆ ತುಂಬಾ ಇದೆ. ಕಾಮಗಾರಿ ಪೂರ್ಣಗೊಂಡರೆ ಸಾಹಿತ್ಯಾಸಕ್ತರಿಗೆ ಹೆಚ್ಚು ಅನುಕೂಲವಾಗುತ್ತದೆ.
ಚಂದ್ರಕಾಂತ ಕರದಳ್ಳಿ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.