ಸುರಪುರ: ಸಾರಿಗೆ ಸಂಸ್ಥೆ ಬಸ್‌ಗಳಿಗೆ ಅಂಟಿಸಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರಗಳನ್ನು ತೆಗೆದು ಹಾಕುವಂತೆ ಆದೇಶ ನೀಡಿರುವ ಯಾದಗಿರಿ ಜಿಲ್ಲಾ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಂದಿಗೆ ದಿಢೀರ್ ಧರಣಿ ನಡೆಸಿದರು.
ನೇತೃತ್ವ ವಹಿಸಿದ್ದ ದಲಿತ ಮುಖಂಡರು ಮಾತನಾಡಿ, ಇದೇ ತಿಂಗಳು 7 ರಂದು ಶಹಾಪುರ ಘಟಕದಲ್ಲಿ ಡಾ. ಅಂಬೇಡ್ಕರ್ ಜಯಂತಿ ಆಚರಿಸಿದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಗಳನ್ನು ಸಾರಿಗೆ ಸಂಸ್ಥೆ ಬಸ್‌ಗಳಿಗೆ ಅಂಟಿಸಲಾಗಿತ್ತು. ವಿಭಾಗೀಯ ನಿಯಂತ್ರಣಾಧಿಕಾರಿ ಈ ಭಾವಚಿತ್ರಗಳನ್ನು ತೆಗೆದು ಹಾಕಬೇಕೆಂದು ಆದೇಶ ನೀಡಿರುವುದು ದಲಿತ ವಿರೋಧ ನೀತಿ ಎಂದು ಕಿಡಿ ಕಾರಿದರು.
ಇದೇ ರೀತಿ ಕೆಲವು ಬಸ್‌ಗಳಿಗೆ ವಾಲ್ಮೀಕಿ, ಅಂಬಿಗರ ಚೌಡಯ್ಯ, ಮೌನೇಶ್ವರ ಇತರರ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಹಲವಾರು ವರ್ಷಗಳಿಂದ ಈ ಪದ್ಧತಿ ಬೆಳೆದು ಬಂದಿದೆ. ಇದುವರೆಗೂ ಯಾರೂ ಭಾವಚಿತ್ರಗಳನ್ನು ತೆಗೆಯುವಂತೆ ಸೂಚಿಸಿರಲಿಲ್ಲ. ಏಕಾಏಕಿ ಭಾವಚಿತ್ರ ತೆಗೆಯುವಂತೆ ಆದೇಶ ನೀಡಿರುವುದು ದಲಿತರ ಭಾವನೆ ಕೆರಳಿಸಿದೆ ಎಂದು ದೂರಿದರು.
ತಕ್ಷಣ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. ದಲಿತ ವಿರೋಧಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಅತ್ತ ಬಸ್ ಘಟಕದಲ್ಲಿ ಧರಣಿ ನಡೆಯುತ್ತಿದ್ದರೆ ಇತ್ತ ಬಸ್ ನಿಲ್ದಾಣದಲ್ಲಿ ದಲಿತ ಕಾರ್ಯಕರ್ತರು ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಬಸ್‌ಗಳು ಸಾಲು ಗಟ್ಟಿ ನಿಂತಿದ್ದವು. ಇದರಿಂದ ದೂರದ ಪ್ರಯಾಣಿಕರಿಗೆ ತೊಂದರೆಯಾಯಿತು.
ಘಟನಾ ಸ್ಥಳಕ್ಕೆ ತಹಸೀಲ್ದಾರ್ ಗೌಸುದ್ದೀನ್, ಪೊಲೀಸ್ ಇನ್ಸ್‌ಪೆಕ್ಟರ್ ರಾಜಕುಮಾರ ವಾಜಂತ್ರಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಣಮಂತಪ್ಪ ಪಟ್ಟೇದ, ಬಸ್ ಘಟಕದ ವ್ಯವಸ್ಥಾಪಕ ಸಿದ್ದಪ್ಪ ಮಸ್ಕಿ ಭೇಟಿ ನೀಡಿ ಧರಣಿ ನಿರತರೊಂದಿಗೆ ಚರ್ಚೆ ನಡೆಸಿದರು. ಧರಣಿ ನಿರತರು ಅಧಿಕಾರಿಯನ್ನು ಅಮಾನತು ಮಾಡುವವರೆಗೂ ಧರಣಿ ಹಿಂಪಡೆಯುವದಿಲ್ಲ ಎಂದು ರಾತ್ರಿವರೆಗೂ ಪಟ್ಟು ಹಿಡಿದಿದ್ದರು.
ಮಾನಪ್ಪ ಕಟ್ಟಿಮನಿ, ನಾಗಣ್ಣ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಕ್ರಾಂತಿ, ರಾಮಚಂದ್ರ ವಾಗಣಗೇರಿ, ಶರಣಪ್ಪ ವಾಗಣಗೇರಿ, ಮೂರ್ತಿ ಬೊಮ್ಮನಳ್ಳಿ, ರಾಜು ಶಖಾಪುರ, ಶೇಖರ ಜೀವಣಗಿ, ಭೀಮಾಶಂಕರ ದೇವಪುರ, ಭೀಮರಾಯ ಕಡಿಮನಿ, ಸಾರಿಗೆ ಸಿಬ್ಬಂದಿ ಭೀಮಣ್ಣ ಚಂದಲಾಪುರ, ಭೀಮಣ್ಣ ತಳವಾರಗೇರಾ, ನೀಲಕಂಠ ಬೀರನೂರ, ನಿಂಗಪ್ಪ ಕನ್ನೆಳ್ಳಿ, ಸಂಗಪ್ಪ ಮತ್ತಿತರರು ಧರಣಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.