ADVERTISEMENT

ಸುರಪುರ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:40 IST
Last Updated 7 ಅಕ್ಟೋಬರ್ 2012, 7:40 IST

ಸುರಪುರ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಒಕ್ಕೂಟವು ಶನಿವಾರ ಕರೆ ನೀಡಿದ್ದ ರಾಜ್ಯ ಬಂದ್‌ಗೆ ಸುರಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಿಗ್ಗೆ ಪಟ್ಟಣದಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ಆರಂಭವಾಗಿತ್ತು. 10 ಗಂಟೆ ಸುಮಾರಿಗೆ ಕರವೇ (ಪ್ರವೀಣಶೆಟ್ಟಿ ಬಣ)ದ ಕಾರ್ಯಕರ್ತರು ಮುಖ್ಯ ರಸ್ತೆಗಳಲ್ಲಿ ತಿರುಗಾಡಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.

ಕೆಲವೇ ಗಂಟೆಗಳ ನಂತರ ವ್ಯಾಪಾರ, ವಹಿವಾಟು ಮತ್ತೆ ಆರಂಭವಾಯಿತು. ಶಾಲೆಗಳಿಗೆ ಈಗಾಗಲೆ ರಜೆ ಆರಂಭವಾಗಿದೆ. ಕಾಲೇಜುಗಳು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಸ್ಥಗಿತಗೊಂಡಿದ್ದ ಬಸ್ ಸಂಚಾರ ಮತ್ತೆ ಆರಂಭವಾಯಿತು. ಪೆಟ್ರೋಲ್ ಬಂಕ್, ಅಡುಗೆ ಅನಿಲ ವಿತರಣೆ ಎಂದಿನಂತೆ ಇತ್ತು.

ಕರವೇ (ಪ್ರವೀಣಶೆಟ್ಟಿ ಬಣ), ಜೆ.ಡಿ.ಎಸ್., ಕನ್ನಡ ಸೇನೆ, ಕರ್ನಾಟಕ ರಾಜ್ಯ ರೈತ ಸಂಘ, ಶ್ರೀರಾಮುಲು ಅಭಿಮಾನಿಗಳ ಸಂಘ ಪ್ರತಿಭಟನೆ ನಡೆಸಿದವು.ಕರವೇ ಗಾಂಧಿವೃತ್ತದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರ ಯಾವಾಗಲೂ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಅನ್ಯಾಯ ಮಾಡುತ್ತಲೆ ಬಂದಿದೆ. ತಮಿಳುನಾಡಿನ ಜಲಾಶಯಗಳಲ್ಲಿ ಸಾಕಷ್ಟು ನೀರು ಇದೆ.

ಅಲ್ಲದೆ ಮುಂಬರುವ ಮಾರುತಗಳು ತಮಿಳುನಾಡಿನಲ್ಲಿ ಹೆಚ್ಚು ಮಳೆ ಸುರಿಸುತ್ತವೆ. ಇಷ್ಟಿದ್ದರೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದು ಕರ್ನಾಟಕ ಪರರಾಷ್ಟ್ರದಲ್ಲಿದೆ ಎಂದು ಬಿಂಬಿತವಾಗುತ್ತದೆ ಎಂದು ಕಿಡಿ ಕಾರಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಮಲ್ಲಿಜಕಾರ್ಜುನ ಸತ್ಯಂಪೇಟೆ ಮಾತನಾಡಿ, ಕಾವೇರಿ ವಿಷಯದಲ್ಲಿ ಎಲ್ಲ ಸಂಘಟನೆಗಳು ಉಗ್ರ ಹೋರಾಟ ನಡೆಸುವ ಅಗತ್ಯವಿದೆ. ನಮ್ಮ ಜಮೀನುಗಳ ವ್ಯಾಪ್ತಿ ಕಾವೇರಿ ಕಣಿವೆಯಲ್ಲಿ ಬರುವುದಿಲ್ಲ ಎಂಬುದು ಸರಿಯಲ್ಲ. ಹಾಗೆಯೇ ಕೃಷ್ಣೆ ವಿಷಯದಲ್ಲೂ ಅನ್ಯಾಯವಾದಾಗ ಹೀಗೆ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕು ಎಂದು ಪ್ರತಿಪಾದಿಸಿದರು.

ವೇದಿಕೆಯ ಜಿಲ್ಲಾ ಸಂಚಾಲಕ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ, ತಾಲ್ಲೂಕು ಅಧ್ಯಕ್ಷ ನಾಗರಾಜ ಕಲಬುರ್ಗಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪನಾಯಕ ಬಿಜಾಸಪುರ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರಾಜು ಕುಂಬಾರ ಮಾತನಾಡಿದರು.

ಮೌನೇಶನಾಯಕ್ ಡೊಣ್ಣಿಗೇರಿ, ಆನಂದ ವರ್ಮಾ, ವೆಂಕಟೇಶ ಪ್ಯಾಪ್ಲಿ, ಮರೆಪ್ಪ ತೇಲ್ಕರ್, ಸಂಜೀವರೆಡ್ಡಿ, ದೇವು ಮಾಲಗತ್ತಿ, ಮಹಿಬೂಬ ಗಿರಣಿ, ದೇವಿಂದ್ರ ಬಿ.ಕೆ., ಅಂಬ್ರೇಶ ಮರಾಠಾ, ವೆಂಕಟೇಶ ಪುಜಾರಿ, ಹಣಮಂತ್ರಾಯ ದೊರೆ, ಮಾನಪ್ಪ ಡೊಣ್ಣಿಗೇರಿ, ಅಮ್ಜದ್ ಗಾಂಧಿನಗರ, ತಿಮ್ಮಪ್ಪ ಡೊಣ್ಣಿಗೇರಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.