ಸುರಪುರ: ಬಿಸಿಲಿನ ಝಳ ದಿನೇ ದಿನೇ ಏರುತ್ತಿದ್ದು ಜನರು ತತ್ತರಿಸಿದ್ದಾರೆ. ಪಟ್ಟಣ ಅಕ್ಷರಶಃ ಅಗ್ನಿಕುಂಡವಾಗಿ ಮಾರ್ಪಾಡಾಗುತ್ತಿದೆ. ಬೆಳಿಗ್ಗಿನಿಂದಲೇ ಬೆವರು ಸುರಿಯಲು ಆರಂಭವಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ ಸೂರ್ಯನ ಆರ್ಭಟ ಹೆಚ್ಚಾಗಿ ಜನ ಒದ್ದಾಡುವಂತಾಗುತ್ತದೆ. ಬಿಸಿಲು 40 ಡಿ.ಸೆ.ಗೆ ಮುಟ್ಟಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಪಟ್ಟಣ ಏಳು ಸುತ್ತು ಬೆಟ್ಟದ ಸಾಲಿನಿಂದ ಆವೃತ್ತವಾಗಿದೆ. ಬಿಸಿಲಿಗೆ ಕಾದು ಬೆಂಕಿಯಂತಾಗುವ ಗುಡ್ಡಗಳು ಸಂಜೆಯೂ ಬಿಸಿಲಿನ ಗಾಳಿ ಬೀಸಲು ನೆರವಾಗುತ್ತಿವೆ. ಮಧಾಹ್ನದ ಸಮಯದಲ್ಲಿ ಮುಖ್ಯ ಬೀದಿಗಳಲ್ಲಿ ಜನ ಸಂಚಾರ ಕಡಿಮೆ ಇರುತ್ತದೆ. ಕರ್ಫೂವಿನ ವಾತಾವರಣ ಗೋಚರಿಸುತ್ತದೆ.
ಮನೆಯಲ್ಲಿನ ಬಾಂಡೆ ಸಾಮಾನುಗಳು ಕಾಯುತ್ತವೆ. ಆರ್‌ಸಿಸಿ ಮನೆಗಳ ಛಾವಣಿ ಬೆಂಕಿಯಂತಾಗಿ ಬಿಡುತ್ತವೆ. ಹಸುಗೂಸುಗಳ, ಚಿಕ್ಕಮಕ್ಕಳ ಪರಿಸ್ಥಿತಿ ದೇವರೇ ಬಲ್ಲ. ಏರ್‌ಕೂಲರ್, ಏಸಿಗಳ ಮಾರಾಟ ಭರ್ಜರಿಯಾಗಿದೆ. ಜನ ಐಸ್ಕ್ರೀಂ, ತಂಪು ಪಾನೀಯ, ಎಳನೀರಿನ ಮೊರೆ ಹೋಗುತ್ತಿದ್ದಾರೆ.
ಬಾಲಕರು ಬಿಸಿಲಿನ ಝಳದಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನದ ಹೊತ್ತಿನಲ್ಲಿ ಬಾವಿಗಳಲ್ಲಿ ಈಜಾಡುವುದು ಸಾಮಾನ್ಯವಾಗಿದೆ. ಹಮಾಲರು, ಕಾರ್ಮಿಕರು ಬಿಸಿಲಿನ ತಾಪ ಏರುತ್ತಿದ್ದಂತೆ ಕೆಲಸ ಬಿಟ್ಟು ತಂಪು ಪ್ರದೇಶದಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ.
ಮದುವೆ ಸೀಸನ್ ಆರಂಭವಾಗಿರುವುದರಿಂದ ಗ್ರಾಮಸ್ಥರು ವಿವಿಧ ಸಾಮಾನುಗಳ ಖರೀದಿಗಾಗಿ ಪಟ್ಟಣಕ್ಕೆ ಬರುತ್ತಿದ್ದಾರೆ. ಆದರೆ ಬಿಸಿಲು ಏರುತ್ತಿದ್ದಂತೆ ಎ.ಸಿ. ಇರುವ ಅಂಗಡಿ ಅಥವಾ ಹೋಟೆಲ್‌ಗಳನ್ನು ಬಿಟ್ಟು ಬರುತ್ತಿಲ್ಲ. ಇದರಿಂದ ವ್ಯಾಪಾರಸ್ಥರಿಗೆ ಕಸಿವಿಸಿಯಾಗುತ್ತಿದೆ. ಬೇರೆ ಗ್ರಾಹಕರಿಗೆ ಜಾಗ ಮಾಡಿಕೊಡಿ ಎಂದು ಅಂಗಲಾಚುವಂತಾಗಿದೆ.
ಬಿಸಿಲಿನ ತಾಪ ಜಾನುವಾರುಗಳಿಗೂ ತಟ್ಟಿದೆ. ದನಕುರುಗಳಿಗೆ ಅಲ್ಲಲ್ಲಿ ಕಾಲುಬೇನೆ ರೋಗ ಕಾಣಿಸಿಕೊಂಡಿದೆ. ಮೇವು ಮತ್ತು ನೀರಿನ ಕೊರತೆಯಿಂದ ಪಶು, ಪ್ರಾಣಿಗಳು ಸಣಕಲಾಗುತ್ತಿವೆ. ಗ್ರಾಮೀಣ ಭಾಗದ ಕೆಲವೆಡೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಪಟ್ಟಣದ ಬಸ್‌ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಪ್ರಾಯಾಣಿಕರು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಗಾಂಧಿವೃತ್ತದಲ್ಲಿ ಹೈದರಾಬಾದ್ ಕರ್ನಾಟಕ ರಕ್ಷಣಾ ಸಮಿತಿ ತಂಪು ನೀರಿನ ಅರವಟ್ಟಿಗೆ ಸ್ಥಾಪಿಸಿದ್ದು ಜನರಿಗೆ ನೆರವಾಗಿದೆ. ಪಟ್ಟಣದ ಅಲ್ಲಲ್ಲಿ ಇಂತಹ ವ್ಯವಸ್ಥೆ ಮಾಡುವ ಅವಶ್ಯಕತೆಯಿದೆ. ಸಂಘ, ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬರಬೇಕಿದೆ. ಪಟ್ಟಣಕ್ಕೆ ನೀರು ಪೂರೈಸುವ ಕೃಷ್ಣೆ ಬರಿದಾಗಿದೆ. ಪುರಸಭೆ ನೀರಿನ ಕೊರತೆ ಆಗದ ಹಾಗೆ ಕ್ರಮ ವಹಿಸುವ ಅಗತ್ಯವಿದೆ ಎಂಬುದು ನಾಗರಿಕರ ಆಗ್ರಹ.
ಸಾಲದ್ದಕ್ಕೆ ಸರ್ಕಾರ ಬರ ಕಾಮಗಾರಿಗಳ ನೆಪದಲ್ಲಿ ಈ ಭಾಗದಲ್ಲಿ ಸರ್ಕಾರಿ ಕಚೇರಿಗಳ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1-30ರ ವರೆಗೆ ಸಮಯದ ಆದೇಶವನ್ನು ಹಿಂದಕ್ಕೆ ಪಡೆದಿದೆ. ಸರ್ಕಾರಿ ಕಚೇರಿಗಳ ಸಮಯ ಎಂದಿನಂತೆ ಮುಂದುವರೆಸಿದೆ. ಇದರಿಂದ ಸರ್ಕಾರಿ ನೌಕರರು, ನಾಗರಿಕರು ಪರದಾಡುವಂತಾಗಿದೆ. ಈಗಲೇ ಇಷ್ಟು ಬಿಸಿಲು ಇದ್ದರೆ ಮೇ ತಿಂಗಳ ಕೊನೆವರೆಗೆ ಹೇಗೆ ತಡೆದುಕೊಳ್ಳಬೇಕು ಎಂದು ಜನ ಆತಂಕದಲ್ಲಿದ್ದಾರೆ.
ಕಳೆದ ಎರಡು ದಿನಗಳಿಂದ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ ತಣ್ಣನೆಯ ಗಾಳಿ ಬೀಸಿ ಆಹ್ಲಾದಕರಬಿಸಿಲಿನಿಂದ ಬವಳಿದ ಜನಕ್ಕೆ ಸ್ವಲ್ಪ ನೆಮ್ಮದಿ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.