ADVERTISEMENT

ಸ್ಕ್ಯಾನಿಂಗ್ ಕೇಂದ್ರಗಳ ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:41 IST
Last Updated 12 ಜುಲೈ 2017, 6:41 IST
ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ  ಮಂಗಳವಾರ ಹಮ್ಮಿಕೊಂಡಿದ್ದ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು
ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು   

ಯಾದಗಿರಿ: ‘ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಕೇಂದ್ರಗಳು ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಅಡಿ ನೋಂದಣಿ ಹಾಗೂ ನವೀಕರಣ ಮಾಡಿಕೊಳ್ಳಬೇಕು’ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗ ವಂತ ಅನವಾರ ಸೂಚಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ ಅನುಷ್ಠಾನ ಕುರಿತ ಜಿಲ್ಲಾ ಸಲಹಾ ಸಮಿತಿಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ಸ್ಕ್ಯಾನಿಂಗ್ ವರದಿ(ಎಫ್-ಫಾರ್ಮೆಟ್) ಸಲ್ಲಿಸಬೇಕು’ ಎಂದು ಅವರು ಎಚ್ಚರಿಸಿದರು. ಜಿಲ್ಲೆಯಲ್ಲಿ 17 ಸ್ಕ್ಯಾನಿಂಗ್ ಕೇಂದ್ರಗಳಿವೆ. ಈ ಪೈಕಿ ಯಾದಗಿರಿ ಜಿಲ್ಲಾ ಆಸ್ಪತ್ರೆ ಮತ್ತು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಂದು ಸ್ಕ್ಯಾನಿಂಗ್ ಕೇಂದ್ರ ಇದೆ.

ಇನ್ನುಳಿದ 15 ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳಾಗಿದ್ದು, ಕೆಲ ಕೇಂದ್ರಗಳು ಮಾಸಿಕ ವರದಿ(ಎಫ್-ಫಾರ್ಮೆಟ್)ಅನ್ನು ಸರಿಯಾಗಿ ಸಲ್ಲಿಸುತ್ತಿಲ್ಲ’ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಗಳೂ ಆದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರು ರಾಜ ಹಿರೇಗೌಡರು ಸಭೆಯ ಗಮನಕ್ಕೆ ತಂದರು.

ADVERTISEMENT

ಸರ್ಕಾರೇತರ ಸಂಸ್ಥೆ ವಿಶ್ವಸೇವಾ ಮಿಷನ್‌ನ ವಿಶ್ವನಾಥ ಸ್ವಾಮಿ ಕಣಕಾಲ ಮಠ ಮಾತನಾಡಿ,‘ಸ್ಕ್ಯಾನಿಂಗ್ ಕೇಂದ್ರ ಗಳ ಸಿಬ್ಬಂದಿಗಾಗಿ ಕಾರ್ಯಾಗಾರ ಆಯೋಜಿಸಬೇಕು. ಈ ಮೂಲಕ ಪ್ರತಿತಿಂಗಳು ಸಲ್ಲಿಸುವ ಮಾಸಿಕ ವರದಿ, ಕೇಂದ್ರಗಳ ನೋಂದಣಿ, ನವೀಕರಣ ಹಾಗೂ ಸಲ್ಲಿಸಬೇಕಾದ ದಾಖಲೆಗಳ ಕುರಿತು ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

ಸಮಿತಿ ಅಧ್ಯಕ್ಷ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಭಗವಂತ ಅನವಾರ, ‘ಕಾಲಕಾಲಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ನೇತೃತ್ವದ ಜಿಲ್ಲಾ ತನಿಖಾ ಮತ್ತು ಮೇಲ್ವಿ ಚಾರಣಾ ಸಮಿತಿಯು ಸ್ಕ್ಯಾನಿಂಗ್ ಕೇಂದ್ರ ಗಳಿಗೆ ಭೇಟಿ ನೀಡಿ, ತಪಾಸಣೆ ಮಾಡಿ ನೋಂದಣಿ ಮತ್ತು ನವೀಕರಣಗಳನ್ನು ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಪತ್ತೆ ಮಾಹಿತಿ ನೀಡಿದವರಿಗೆ ಬಹುಮಾನ: ‘ಭ್ರೂಣಲಿಂಗ ಪತ್ತೆ ಮಾಡುವ ಕಾರ್ಯದಲ್ಲಿ ನಿರತವಾಗಿರುವ ಕೇಂದ್ರಗಳ ಬಗ್ಗೆ ಯಾರೇ ಮಾಹಿತಿ ನೀಡಿದರೂ ಅಂತಹವರಿಗೆ ಸರ್ಕಾರ ದಿಂದ ₹50 ಸಾವಿರ ನಗದು ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಮಟ್ಟದ ನೋಡಲ್ ಅಧಿಕಾರಿ ಡಾ.ಜಯ ರಾಜ, ಸದಸ್ಯರಾದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ.ಎಸ್. ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ದೇಶ್ವ ರಪ್ಪ ಜಿ.ಬಿ, ಮಕ್ಕಳ ತಜ್ಞ ಡಾ.ರಾಘ ವೇಂದ್ರರೆಡ್ಡಿ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ವಿವೇಕಾನಂದ ಟೆಂಗೆ, ಅಕ್ಷತಾ ಟ್ರಸ್ಟ್‌ನ ವೀಣಾ ಮೋದಿ ಹಾಗೂ ಭಾಗ್ಯಜ್ಯೋತಿ ನೆಟವರ್ಕ್ ಸಂಯೋಜಕ ರಾದ ನಾಗಮ್ಮ, ಇಲಾಖೆಯ ಜಿಲ್ಲಾ ಮೇಲ್ವಿಚಾರಕಿ ಆರತಿ ಧನಶ್ರೀ ಇದ್ದರು.

ಅಂಕಿ–ಅಂಶ
17 ಜಿಲ್ಲೆಯಲ್ಲಿನ ಒಟ್ಟು ಸ್ಕ್ಯಾನಿಂಗ್ ಕೇಂದ್ರಗಳ ಸಂಖ್ಯೆ

15 ಜಿಲ್ಲೆಯಲ್ಲಿರುವ ಒಟ್ಟು ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳು

* * 

ಸಮುದಾಯದ ಸಹಕಾರ ಎಲ್ಲಿವರೆಗೂ ಸಿಗುವುದಿಲ್ಲವೋ ಅಲ್ಲಿಯವರೆಗೆ ಭ್ರೂಣಹತ್ಯೆಗೆ ಸಂಪೂರ್ಣ ಕಡಿವಾಣ ಸಾಧ್ಯವಿಲ್ಲ.
ಡಾ.ಭಗವಂತ ಅನವಾರ
ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.