ADVERTISEMENT

ಸ್ಪರ್ಧಿಸದಿರುವ ಮಹಿಳಾ ಅಭ್ಯರ್ಥಿ!

ಚುನಾವಣೆ: ಶಹಾಪುರ ಮತಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 7:07 IST
Last Updated 9 ಏಪ್ರಿಲ್ 2013, 7:07 IST

ಶಹಾಪುರ:  ಪುರುಷ ಮತದಾರಗಿಂತ ಕೇವಲ 1,003 ಮತದಾರ ಸಂಖ್ಯೆಯನ್ನು ಮಾತ್ರ ಕಡಿಮೆ ಹೊಂದಿರುವ ಶಹಾಪುರ ವಿಧಾನ ಸಭೆ ಕ್ಷೇತ್ರದ ಇತಿಹಾಸದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡದೆ ವಂಚಿಸಿವೆ ಎಂಬ ಆರೋಪಗಳು ಕೇಳಿ ಬರುತ್ತಲಿವೆ.

ಶಹಾಪುರ ಮತಕ್ಷೇತ್ರದ ಇತಿಹಾಸದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿಯು ಸ್ಪರ್ಧಿಸಿಲ್ಲ ಮತ್ತು ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಟಿಕೆಟ್ ನೀಡಿಲ್ಲವೆಂದು ನೆನೆಪಿಸುತ್ತಾರೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವೆಂಕಣ್ಣಗೌಡ ಹಾಲಬಾವಿ.

ಶಹಾಪುರದಲ್ಲಿ ಒಟ್ಟು 1,83,495 ಮತದಾರರಿದ್ದು, 92,249 ಪುರುಷ, 91,246 ಮಹಿಳಾ ಮತದಾರರಿದ್ದಾರೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಪರಮೇಶ್ವರ ಕೆ.ಸ್ವಾಮಿ ತಿಳಿಸಿದ್ದಾರೆ. ಪುರುಷನಷ್ಟೆ ಸಮನಾಗಿ ಮತದಾರರನ್ನು ಹೊಂದಿರುವಾಗ ಮಹಿಳೆಯರು ಮಾತ್ರ ದಿಟ್ಟ ನಿಲುವಿನಿಂದ ಚುನಾವಣೆ ಅಖಾಡಕ್ಕೆ ಇಳಿದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲನ್ನು ಕಾನೂನು ಸಮರದ ಮೂಲಕ ಪಡೆದುಕೊಂಡ ಮಹಿಳೆಯರು ಈಗ ರಾಜಕೀಯವನ್ನು ಸವಾಲಾಗಿ ಸ್ವೀಕರಿಸಬೇಕಾಗಿದೆ. ಎಲ್ಲಾ ಅಧಿಕಾರಕ್ಕಿಂತ ರಾಜಕೀಯ ಅಧಿಕಾರ ಬೀಗದ ಕೈ ಇದ್ದಂತೆ. ಅಧಿಕಾರವನ್ನು ಯಾರು ಪುಕ್ಕಟೆಯಾಗಿ ನೀಡುವುದಿಲ್ಲ. ಶ್ರಮಮವಹಿಸಿ ದಕ್ಕಿಸಿಕೊಳ್ಳುವ ಚಿಂತನೆಯತ್ತ ತಾಲ್ಲೂಕಿನ ಪ್ರಗತಿಪರ ಮಹಿಳೆರು ಮುಂದಾಗಬೇಕಾಗಿದೆ ಎನ್ನುತ್ತಾರೆ ಮಹಿಳಾ ಸಂಘಟನೆಯ ಮುಖಂಡರಾದ ಸುನಂದ ಹಿರೇಮಠ.

ಮಹಿಳೆರು ಸಂಘಟಿತರಾಗಿ ರಾಜಕೀಯ ರಂಗವನ್ನು ಪ್ರವೇಶ ಮಾಡುವುದು ಅಗತ್ಯವಾಗಿದೆ. ಗೆಲುವು ಸಾಧಿಸುವುದು ದೂರ ಉಳಿಯಿತು ಕೊನೆ ಪಕ್ಷ ಸ್ಫರ್ಧಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಬರುವ ದಿನಗಳಲ್ಲಿ ಅದು ರಾಜಕೀಯ ಪಕ್ಷಗಳಿಗೆ ಕಣ್ಣು ತೆರೆಸಿದಂತೆ ಆಗುತ್ತದೆ ಎನ್ನುವುದು ಮಹಿಳೆ ಸತ್ಯಮ್ಮರ ಅನಿಸಿಕೆ.

ಈಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಒಟ್ಟು 37,451 ಮತದಾರರಿದ್ದು ಅದರಲ್ಲಿ ಪುರುಷ 18,694 ಹಾಗೂ 18,757 ಮಹಿಳಾ ಮತದಾರರು ಇದ್ದಾರೆ.

ಪಟ್ಟಣದಲ್ಲಿ ಪುರುಷ ಮತದಾರರಗಿಂತ 63 ಹೆಚ್ಚು ಮಹಿಳಾ ಮತದಾರರಿದ್ದಾರೆ. ಸಾಕಷ್ಟು ಪ್ರಜ್ಞಾವಂತ ಮಹಿಳೆಯರು ತಾಲ್ಲೂಕಿನಲ್ಲಿದ್ದು ತಮ್ಮ ಹಕ್ಕುಗಳ ಸಂರಕ್ಷಣೆಗೆ ಹೋರಾಟ ನಡೆಸಿದರೆ ಮುಂದಿನ ದಿನಗಳಲ್ಲಿ ಅಧಿಕಾರ ದೊರೆಯುವುದು ದೂರವಿಲ್ಲ ಎನ್ನುವುದು ಮಹಿಳೆಯೊಬ್ಬರ ಅನಿಸಿಕೆ.

ಶಹಾಪುರ ಕ್ಷೇತ್ರದ ರಾಜಕೀಯ ಚುನಾವಣೆಯ ಹಿನ್ನೋಟವನ್ನು ಮೇಲಕು ಹಾಕಿದಾಗ 1957ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುಪಾಕ್ಷಪ್ಪ ಅವಿರೋಧವಾಗಿ ಅಯ್ಕೆಯಾಗಿದ್ದರು. 1962ರಲ್ಲಿ ಮಹಾಂತಸ್ವಾಮಿ ಹಾಗೂ 1967ರಲ್ಲಿ ಬ್ಯಾರಿಸ್ಟರ್ ರಾಜಾವೆಂಕಟಪ್ಪ ನಾಯಕ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿಕೊಂಡವರು ಆಗಿದ್ದಾರೆ.

ರಾಜಾ ವೆಂಕಟಪ್ಪ ನಾಯಕ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪ್ರಯುಕ್ತ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಾಪುಗೌಡ ದರ್ಶನಾಪುರ ಜಯಗಳಿಸಿದರು. ನಂತರ 1972ರಲ್ಲಿಯೂ ಬಾಪುಗೌಡ ಎನ್‌ಸಿಒ ಪಕ್ಷದಿಂದ ಸ್ಪರ್ಧಿಸಿ ಗೆಲುವಿನ ರುಜುವಾತು ಪಡಿಸಿದ್ದರು. 1978ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಣ್ಣ ಸಾವೂರ, 1983ರಲ್ಲಿ ಜೆಎನ್‌ಪಿ ಯಿಂದ ಬಾಪುಗೌಡ ದರ್ಶನಾಪೂರ ಜಯ ಸಾಧಿಸಿದ್ದರು.

1985 ಮತ್ತು ಹಾಗೂ 1989ರಲ್ಲಿ ಶಿವಶೇಖರಪ್ಪಗೌಡ ಸಿರವಾಳ ಎರಡು ಬಾರಿ ಗೆಲುವು ಸಂಪಾದಿಸಿದ್ದರು. 1994ರಲ್ಲಿ ಜನತಾದಳದಿಂದ ಶರಣಬಸಪ್ಪ ದರ್ಶನಾಪೂರ ಗೆಲುವು ಸಾಧಿಸಿದ್ದರು.  1999ರಲ್ಲಿ ಶಿವಶೇಖರಪ್ಪಗೌಡ ಸಿರವಾಳ ಜಯ ಸಾಧಿಸಿದ್ದರು. ನಂತರ ಇತಿಹಾಸ ಎನ್ನುವಂತೆ 2004 ಹಾಗೂ 2008ರಲ್ಲಿ ಎರಡು ಬಾರಿ ಶರಣಬಸಪ್ಪ ದರ್ಶನಾಪೂರ ಗೆಲುವು ದಾಖಲಿಸಿಕೊಂಡು ಈಗ ಮತ್ತೆ ಹ್ಯಾಟ್ರಿಕ್ ಗೆಲವಿನ ಕನಸ್ಸು ಕಾಣುತ್ತಿದ್ದಾರೆ.

ಪ್ರಸಕ್ತವಾಗಿ ಕರ್ನಾಟಕ ಜನತಾ ಪಕ್ಷದಿಂದ ಗುರುಪಾಟೀಲ್ ಸಿರವಾಳ, ಬಿಜೆಪಿಯಿಂದ ಈರಣ್ಣಗೌಡ ಮಲ್ಲಾಬಾದಿ, ಜೆಡಿಎಸ್‌ನಿಂದ ಶರಣಪ್ಪ ಸಲಾದಪೂರ, ಬಿಎಸ್ಸಾರ್ ಕಾಂಗ್ರೆಸ್‌ನಿಂದ ಶಂಕ್ರಣ್ಣ ವಣಿಕ್ಯಾಳ ಇಲ್ಲವೆ ಅನ್ವರ ಪಾಶ ಸ್ಪರ್ಧಿಸುವುದು ಬಹುತೇಕ ನಿರ್ಧಾರವಾಗಿದೆ.

ಹಲವು ವರ್ಷಗಳಿಂದ ಪ್ರಬಲ ಜಾತಿ ನಾಯಕರು ಮಾತ್ರ ಅಧಿಕಾರದ ಗದ್ದುಗ್ನೆ ಹಿಡಿದುಕೊಂಡು ಬಂದಿರುವುದು ಕ್ಷೇತ್ರದ ವಿಶೇಷವಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಹಿಂದುಳಿದ ಸಮುದಾಯದ ಮುಖಂಡ ಕುರುಬ ಸಮುದಾಯದ ಶರಣಪ್ಪ ಸಲಾದಪೂರ ಅವರಿಗೆ ಟಿಕೆಟ್ ನೀಡಲಾಗಿದೆ.

ನಂಬಲರ್ಹ ಮೂಲದ ಪ್ರಕಾರ ಪ್ರಸಕ್ತ ಬಾರಿ ವಿಧಾನ ಸಭೆ ಚುನಾವಣೆಗೆ ರಾಜಕೀಯ ಪಕ್ಷದಿಂದ ಮಹಿಳೆಯೊಬ್ಬರನ್ನು ಕಣಕ್ಕಿಸುವುದು ತೆರೆಮರೆ ರಾಜಕೀಯ ಕಸರತ್ತು ನಡೆದಿದೆ. ಪುರುಷ ಮತದಾರರಷ್ಟು ಮಹಿಳೆಯರು ಇರುವಾಗ ಯಾಕೆ ಸ್ಪರ್ಧಿಸಬಾರದು ಎಂಬ ಚಿಂತನೆ ನಡೆದಿದೆ. ಅದರ ಸ್ಪಷ್ಟ ಚಿತ್ರಣವು ವಾರದಲ್ಲಿ ಬಯಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.