ADVERTISEMENT

ಸ್ವಚ್ಛತೆ ಕಾಣದ ಬಸ್‌ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:12 IST
Last Updated 20 ಸೆಪ್ಟೆಂಬರ್ 2013, 8:12 IST

ಶಹಾಪುರ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಪಟ್ಟಣ­ದ ಹಳೆ ಬಸ್‌ ನಿಲ್ದಾಣದ ಅಂಗಳ ಕೊಚ್ಚಿಕೊಂಡು ಹೋಗಿ ಗುಂಡಿ ಬಿದ್ದಿವೆ. ಪ್ರಯಾಣಿಕರು  ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೆದ್ದಾರಿ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ ಇದಾಗಿದೆ. ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಾರೆ. ಹೊಸ ಬಸ್‌ ನಿಲ್ದಾಣ ನಿರ್ಮಿಸಿದ್ದರಿಂದ ಹಳೆ ಬಸ್‌ ನಿಲ್ದಾಣದಲ್ಲಿ ಕನಿಷ್ಠ ಸೌಲಭ್ಯ­ಗಳನ್ನು ಕೂಡಾ ಸಾರಿಗೆ ಅಧಿಕಾರಿಗಳು ನೀಡುತ್ತಿಲ್ಲ. ರಾಜ್ಯ ಹೆದ್ದಾರಿ ಎತ್ತರ­ವಾಗಿದ್ದು ನಿಲ್ದಾಣದ ತಗ್ಗು ಪ್ರದೇಶ­ದಲ್ಲಿದೆ. ಸಣ್ಣ ಮಳೆಯಾದರೆ ಸಾಕು ಇಡೀ ರಸ್ತೆಯ ನೀರು ನಿಲ್ದಾಣದ ಒಳಗೆ ಬಂದು ಸಂಗ್ರಹವಾಗುತ್ತವೆ ಎಂದು ದೂರುತ್ತಾರೆ ಪ್ರಯಾಣಿಕ ನಾಗಪ್ಪ.

ಸಾರಿಗೆ ಅಧಿಕಾರಿಗಳು ಯಾಕೆ ಹಿಂಗ ಮಾಡಕತ್ಯಾರ ಗೊತ್ತಿಲ್ಲ.  ಯಾರು ಹೇಳುವರು ಕೇಳುವರು ಇಲ್ಲದಂತೆ ವರ್ತಿಸುತ್ತಿದ್ದಾರೆ. ನಿಲ್ದಾಣದಲ್ಲಿ ಕನಿಷ್ಠ ಸೌಲಭ್ಯಗಳನ್ನು ಇಲ್ಲದಂತೆ ಮಾಡಿ­ದ್ದಾರೆ. ಸಂಚಾರಿ ಅಧಿಕಾರಿಯನ್ನು ಕೇಳಿದರೆ ಮೇಲಾಧಿಕಾರಿಗಳಿಗೆ ಕೇಳಿ ನಮಗೆ ಗೊತ್ತಿಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ. ಸರಿಯಾಗಿ ಬಸ್‌ ನಿಲು­ಗಡೆಗೂ ಅವಕಾಶ ನೀಡುತ್ತಿಲ್ಲ. ಮನ­ಬಂದಂತೆ ವರ್ತಿಸುತ್ತಿದ್ದಾರೆ. ಸಾರ್ವ­ಜನಿಕರ ಅನುಕೂಲತೆಗಾಗಿ ಬಸ್‌ ನಿಲ್ದಾಣವಿದೆ ಎಂಬುವುದು ಅಧಿಕಾರಿ­ಗಳು ಮರೆತು ಬಿಟ್ಟಿದ್ದಾರೆ ಎಂದು ತಾಲ್ಲೂಕು ಸಿಪಿಐ(ಎಂ) ಮುಖಂಡ ಎಸ್‌.ಎಂ.ಸಾಗರ ದೂರಿದ್ದಾರೆ.

ಬಸ್‌ ನಿಲ್ದಾಣದ ಪಕ್ಕದಲ್ಲಿನ ಮೂತ್ರವಿಸರ್ಜನೆಯ ಸ್ಥಳವನ್ನು ಸ್ವಚ್ಛ­ಗೊಳಿಸುತ್ತಿಲ್ಲ.  ಇದರಿಂದ ಇಡೀ ಪ್ರದೇಶ ಗಬ್ಬುವಾಸನೆಯಿಂದ ಕೂಡಿದೆ. ಬಸ್‌ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲುಗಡೆ ಮಾಡು­ತ್ತಾರೆ. ತ್ಯಾಜ್ಯ ವಸ್ತುಗಳನ್ನು ಎಸೆ­ಯುತ್ತಾರೆ ಯಾರೂ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲವೆಂದು ಮಲ್ಲಯ್ಯ ಪೊಲಂಪಲ್ಲಿ ಆರೋಪಿಸಿದ್ದಾರೆ.

ಹಳೆ ಬಸ್‌ ನಿಲ್ದಾಣದಲ್ಲಿ ತಕ್ಷಣವೇ ತ್ವರಿತ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಅಗತ್ಯ­ವಾದ ಸೌಲಭ್ಯಗಳನ್ನು ನೀಡಬೇಕು. ಇಲ್ಲದಿದ್ದರೆ ರಸ್ತೆ ತಡೆ ನಡೆಸ­ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಸ್ಪಷ್ಟನೆ: ನಿರಂತವಾಗಿ ಮಳೆ ಬರುತ್ತಿರು­ವುದರಿಂದ ಕಾಮಗಾರಿ ನಿರ್ವಹಿಸಲು  ಆಗಿಲ್ಲ. ನಿಲ್ದಾಣದ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಗುಂಡಿ ಬಿದ್ದ ಸ್ಥಳ ದುರಸ್ತಿ ಮಾಡಲಾಗುವುದು. ಸ್ವಚ್ಛತೆ ಹಾಗೂ ಸುರಕ್ಷತೆಯ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಶಹಾ­ಪುರ ಘಕಟದ ಸಾರಿಗೆ ಅಧಿಕಾರಿ ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT