ADVERTISEMENT

ಹತ್ತಿಗುಡೂರಕ್ಕೆ ಕುಡಿಯುವ ನೀರಿನ ಭಾಗ್ಯ ಲಭಿಸಲಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 7:50 IST
Last Updated 1 ಆಗಸ್ಟ್ 2012, 7:50 IST

ಶಹಾಪುರ: ತಾಲ್ಲೂಕಿನ ಹತ್ತಿಗುಡೂರ ಗ್ರಾಮದಲ್ಲಿ ಹೆಚ್ಚಾಗಿ ಹಿಂದುಳಿದ ಸಮುದಾಯದವರು ವಾಸವಾಗಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಕನಿಷ್ಠ ಪಕ್ಷ ಕುಡಿಯುವ ನೀರಿನ ಸಮಸ್ಯೆಯನ್ನು ಕೂಡ ಬಗೆಹರಿಸದೆ ನಿರ್ಲಕ್ಷ್ಯ ವಹಿಸಿದ್ದು ಅನ್ಯಾಯದ ಪರಮಾವಧಿಯಾಗಿದೆ. ಗ್ರಾಮಕ್ಕೆ ಕುಡಿಯುವ ನೀರಿನ ಭಾಗ್ಯ ಲಭಿಸಲಿ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷರಾದ ಶರಣಪ್ಪ ಸಲಾದಪೂರ ಕಿಡಿಕಾರಿದರು.

ತಾಲ್ಲೂಕಿನ ಹತ್ತಿಗುಡೂರ ಗ್ರಾಮದಲ್ಲಿ ಈಚೆಗೆ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನತೆಯ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಚುನಾಯಿತ ಕಾಂಗ್ರೆಸ್ ಪಕ್ಷದ ನಾಯಕರು ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬೇಸಿಗೆಯ ದಿನಗಳಲ್ಲಿ ಹಳ್ಳದ ನೀರೇ  ಗತಿ. ಸರಿಯಾದ ನೀರಿನ ನಿರ್ವಹಣೆಯಿಲ್ಲದೆ ಗ್ರಾಮಸ್ಥರು ತೊಂದರೆಯಲ್ಲಿ ಸಿಲುಕಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ಪಟ್ಟಭದ್ರ ಹಿತಾಶಕ್ತಿಗಳ ಕೈಯಲ್ಲಿ ಸಿಕ್ಕಿವೆ. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಗ್ರಾಮೀಣ ಜನತೆಯ ಉಸಿರಿನಂತೆ ಕೆಲಸ ನಿರ್ವಹಿಸುವ ಪಕ್ಷ ಜೆಡಿಎಸ್ ಆಗಿದೆ. ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರನ್ನಾಗಿ ರವಿ ಘಂಟಿ, ಉಪಾಧ್ಯಕ್ಷ ಚಂದ್ರಶೇಖರ ನಾಟೇಕರ, ಕಾರ್ಯದರ್ಶಿ ಶರಣಪ್ಪರನ್ನು ಆಯ್ಕೆ ಮಾಡಲಾಯಿತು.

ಜೆಡಿಎಸ್ ಮುಖಂಡರಾದ ಶ್ರೀನಿವಾಸರಡ್ಡಿ ಚೆನ್ನೂರ, ಮಲ್ಲಣ್ಣಗೌಡ ವಂದಗನೂರ, ಮಹಾದೇವಪ್ಪ ನಾಟೇಕರ, ಮಹಮ್ಮದ ಗೌಸ ವನದುರ್ಗ, ಆದಪ್ಪ ಹೊಸ್ಮನಿ, ಅಶೋಕ ದಿನ್ನಿ, ರಂಗಣ್ಣಗೌಡ ಹುಲಕಲ್, ಧರ್ಮಣ್ಣಗೌಡ ಹುಲಕಲ್, ಶರಣು ರಡ್ಡಿ, ದೇವಿಂದ್ರಪ್ಪ ಪೂಜಾರಿ, ಮರೆಪ್ಪ ಚಿಗರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.