ADVERTISEMENT

ಹುತಾತ್ಮ ಪೊಲೀಸರಿಗೆ ಗೌರವಾರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 10:25 IST
Last Updated 22 ಅಕ್ಟೋಬರ್ 2011, 10:25 IST

ಯಾದಗಿರಿ: ದೇಶದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಶಾಂತಿ, ನೆಮ್ಮದಿ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರದ ಅಭಿವೃದ್ಧಿಗೆ ಪೊಲೀಸರ ಕೊಡುಗೆ ಅನನ್ಯವಾದುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್ ಹೇಳಿದರು.

ಕರ್ತವ್ಯ ಪಾಲನೆಯಲ್ಲಿ ಪ್ರಾಣ ಅರ್ಪಿಸಿದ ಪೊಲೀಸರ ಸ್ಮರಣೆಗಾಗಿ ಶುಕ್ರವಾರ ಇಲ್ಲಿಯ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ತಮ್ಮ ಜೀವನವನ್ನು ಬದಿಗೊತ್ತಿ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಆದ್ಯತೆ ನೀಡುತ್ತಿದ್ದಾರೆ. ಶಿಸ್ತು, ಶ್ರದ್ಧೆ ಪೊಲೀಸ್ ಇಲಾಖೆಯ ಹೆಗ್ಗುರುತು. ಇಂತಹ ಪೊಲೀಸರ ಕರ್ತವ್ಯವನ್ನು ಸಮಾಜ ಸ್ಮರಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಒಳ್ಳೆಯ ಕೆಲಸ ಮಾಡುತ್ತಿದ್ದು, ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸುವಂತೆ ನೋಡಿಕೊಂಡಿದ್ದಾರೆ. ಯಾವುದೇ ಸಂದರ್ಭ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪೊಲೀಸರು ಅಪಾರವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ರೂಪಾ ಮಾತನಾಡಿ, 1959 ರ ಅಕ್ಟೋಬರ್ 21 ರಂದು ಲಡಾಕ್‌ನಲ್ಲಿ ಚೀನಿ ಸೈನಿಕರ ಜೊತೆ ಹೋರಾಟ ಮಾಡುವ ಸಂದರ್ಭದಲ್ಲಿ ಮೃತಪಟ್ಟ ಹುತಾತ್ಮರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ತವ್ಯದಲ್ಲಿ ಮೃತಪಟ್ಟಿರುವ ಪೊಲೀಸರ ಕುಟುಂಬಗಳಿಗೆ ಅಗತ್ಯವಾದ ಎಲ್ಲ ಬೆಂಬಲವನ್ನು ಇಲಾಖೆ ಕೊಡುತ್ತಿದೆ ಎಂದ ಅವರು, ಸಮಾಜವು ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸ್ ಇಲಾಖೆಯೂ ಸಮಾಜದ ಒಂದು ಅಂಗವಾಗಿದ್ದು, ನಾಗರಿಕರ ಸಹಕಾರವಿದ್ದಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಳೆದ ವರ್ಷ ದೇಶದಲ್ಲಿ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಎಸ್ಪಿ ಡಿ. ರೂಪಾ ಓದಿದರು. ಇದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್, ಎಸ್ಪಿ ಡಿ. ರೂಪಾ ಹಾಗೂ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ಸಲ್ಲಿಸಿದರು.

ಹುತಾತ್ಮರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಮೌನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಿಪಿಐ ಶಂಕರಗೌಡ ಪಾಟೀಲ, ಸಬ್‌ಇನ್ಸ್‌ಪೆಕ್ಟರ್ ಪ್ರಕಾಶ ಯಾತನೂರ, ಯಾಳಗಿ, ದೌಲತ್, ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸರ ಕುಟುಂಬದವರು ಭಾಗವಹಿಸಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ಜೆ.ಎಸ್. ನ್ಯಾಮಗೌಡ ಸ್ವಾಗತಿಸಿ, ನಿರೂಪಿಸಿದರು. ಡಿಎಸ್ಪಿ ಎಸ್.ಡಿ. ಬಾಗವಾಡಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.