ADVERTISEMENT

ಹೆದ್ದಾರಿ ನಿರ್ಮಾಣಕ್ಕೆ ಆಗ್ರಹಿಸಿ ಹುಣಸಗಿ ಬಂದ್

ದೇವಪುರ–ಹುಣಸಗಿ– ಮನಗೂಳಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:08 IST
Last Updated 11 ಡಿಸೆಂಬರ್ 2013, 8:08 IST

ಹುಣಸಗಿ: ದೇವಪುರ–- ಹುಣಸಗಿ–- ಮನಗೂಳಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ಸೋಮವಾರ ಹುಣಸಗಿ ಬಂದ್ ಮಾಡಿ ಬೃಹತ್ ಮೆರವಣಿಗೆ ನಡೆಸಲಾಯಿತು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಬೆಂಬಲಿಸಿ ಬಂದ್ ಮಾಡಲಾಗಿತ್ತು. ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರ ಚೌಕ್‌ವರೆಗೆ ಮೆರವಣಿಗೆ ನಡೆಸಿ ನಂತರ ಬಹಿರಂಗ ಸಭೆ ನಡೆಯಿತು.

ಹೋರಾಟದಲ್ಲಿ ಪಾಲ್ಗೊಂಡಿದ್ದ ಮುಖಂಡರಾದ ಎಚ್.ಸಿ.ಪಾಟೀಲ ಮಾತನಾಡಿ, ಬಹುದಿನಗಳ ಬೇಡಿಕೆಯಾಗಿದ್ದ ರಾಜ್ಯ ಹೆದ್ದಾರಿ 61ರ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಭಾಗದ ಜನತೆ ಸಂಚಾರಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸರ್ಕಾರ ಬೇಗನೆ ಈ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಮಖಂಡರಾದ ನಾಗಣ್ಣ ದಂಡಿನ್ ನೇತೃತ್ವ ವಹಿಸಿ ಮಾತನಾಡಿ, ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಹದಗೆಟ್ಟ ರಸ್ತೆಯಿಂದ ತೊಂದರೆಯಾಗಿದ್ದು, ಸಾರ್ವಜನಿಕರು ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣ­ವಾಗಿದೆ. ಕೇವಲ 10 ಕಿ.ಮೀ. ರಸ್ತೆ ಕ್ರಮಿಸಲು ಒಂದು ತಾಸು ಸಮಯ ಬೇಕಾಗುತ್ತದೆ. ಟೆಂಡರ್ ಪ್ರಕ್ರಿಯೆ ಮುಗಿಯುವವರೆಗಾದರೂ ಲೋಕೋ­ಪ­­­­ಯೋಗಿ ಇಲಾಖೆಯಿಂದ ರಸ್ತೆ ನಿರ್ವ­ಹಣೆ ಮಾಡಲಿ ಎಂದು ಆಗ್ರಹಿಸಿದರು.

ಬಬಲುಗೌಡ, ಬಸವರಾಜ ಸ್ಥಾವರ­ಮಠ, ರಾಜಶೇಖರ ದೇಸಾಯಿ, ಚಂದ್ರಶೇಖರ ದಂಡಿನ್, ಗಂಗಾಧರ ಬಿರಾದಾರ ನಾರಾಯಣ­ಪುರ, ರಮೇಶ ಪಾಟೀಲ ಮಾತನಾಡಿದರು. ವೀರೇಶ ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಸಿದ್ದು ಮುದಗಲ್, ಚನ್ನಯ್ಯಸ್ವಾಮಿ ಹಿರೇಮಠ, ತಿಪ್ಪಣ್ಣ ಚಂದಾ, ರಾಚಯ್ಯಸ್ವಾಮಿ, ಬಸವ­ರಾಜ ವೈಲಿ, ಬಸಣ್ಣ ದೇಸಾಯಿ, ನಂದಪ್ಪ ಪೀರಾಪುರ, ಡಾ. ವೀರ­ಭದ್ರಗೌಡ ಹೊಸಮನಿ, ಡಾ.ಎಸ್.­ಎಸ್.­ಬಿರಾದಾರ ಸೇರಿದಂತೆ ವೈದ್ಯರ ಸಂಘ, ಭಗತ್‌ ಸಿಂಗ್ ಗೆಳೆಯರ ಬಳಗ, ಆಟೊ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮನವಿ ಪತ್ರವನ್ನು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರಿಗೆ ಸಲ್ಲಿಸಲಾಯಿತು. ಹುಣಸಗಿ ಸಿಪಿಐ ವಿಜಯ ಮುರಗುಂಡಿ, ಪಿಎಸ್‌ಐ ಮಂಜುನಾಥ , ಸುನಿಲ ಮೂಲಿಮನಿ ಬಂದೋಬಸ್ತ್‌ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.